ನವದೆಹಲಿ: ನಿರೀಕ್ಷೆಯಂತೆಯೇ ಕೇಂದ್ರ ಸರ್ಕಾರದ ವಾದಕ್ಕೆ ಮನ್ನಣೆ ನೀಡಿರುವ ಸರ್ವೋಚ್ಛ ನ್ಯಾಯಾಲಯ ಆಧಾರ್ ಕಾರ್ಡ್ ಜೋಡಣೆಗೆ ಮಾರ್ಚ್ 31ರ ಅಂತಿಮ ಗಡುವು ನೀಡಿ ತನ್ನ ಮಧ್ಯಂತರ ಆದೇಶ ಹೊರಡಿಸಿದೆ. ಕೇಂದ್ರ ಸರ್ಕಾರದ ವಿವಿಧ ಯೋಜನೆಗಳು, ವಿವಿಧ ಸೇವೆಗಳು, ಮೊಬೈಲ್ ಸೇವೆ ಹಾಗೂ ಬ್ಯಾಂಕ್ ಖಾತೆ ನಿರ್ವಹಣೆ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದ್ದ ಕೇಂದ್ರ ಸರ್ಕಾರದ ನಡೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ದಾಖಲಾಗಿದ್ದ ವಿವಿಧ ಅರ್ಜಿಗಳ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್ ಇಂದು ತನ್ನ ಮಧ್ಯಂತರ ಆದೇಶ ಹೊರಡಿಸಿದ್ದು, ಆಧಾರ್ ಜೋಡಣೆಗೆ ಮಾರ್ಚ್ 31 ಅಂತಿಮ ಗಡುವು ನೀಡಿ ಆದೇಶ ಹೊರಡಿಸಿದೆ.
ಈ ಬಗ್ಗೆ ಅಂತಿಮ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ಪಂಚ ಸದಸ್ಯರ ಪೀಠವು, ಕೇಂದ್ರ ಸರ್ಕಾರದ ವಾದಕ್ಕೆ ಮನ್ನಣೆ ನೀಡಿದ್ದು, ಮಾರ್ಚ್ 31ರೊಳಗೆ ಕೇಂದ್ರ ಸರ್ಕಾರದ ಎಲ್ಲ ಸೇವೆಗಳಿಗೆ, ಯೋಜನೆಗಳಿಗೆ, ಮೊಬೈಲ್ ಹಾಗೂ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಜೋಡಣೆ ಮಾಡುವುದು ಕಡ್ಡಾಯ ಮಾಡಲಾಗಿದೆ. ಈ ಹಿಂದೆ ಸುಪ್ರೀಂಕೋರ್ಟ್ ಅಂತಿಮ ಗಡುವನ್ನು ಮಾರ್ಚ್ 31ರವರೆಗೂ ವಿಸ್ತರಣೆ ಮಾಡಿತ್ತು. ಇದರಿಂದಾಗಿ ಸರಕಾರದ ತೀರ್ಮಾನಕ್ಕೆ ಬಲ ಬಂದಂತಾಗಿದೆ.