ಚಿಕ್ಕಮಗಳೂರು: ರಸ್ತೆ ಅಪಘಾತವಾದರೆ, ಗಾಡಿ ಕೆಟ್ಟು ನಿಂತರೆ ನಮಗೆ ಯಾಕಾಪ್ಪ ಬೇಕು ಬೇರೆಯವರ ಉಸಾಬರಿ ಎನ್ನುವರೇ ಹೆಚ್ಚು. ಅಂಥ ಜನರ ನಡುವೆ ಕೆಲವು ಒಳ್ಳೆಯ ಮನಸ್ಸುಗಳು ಇರುತ್ತವೆ. ಅದರಲ್ಲಿ ನಮ್ಮ ನಾಡಿನ ಎಸ್‍ಪಿ ಅಣ್ಣಾಮಲೈ ಕೂಡ ಒಬ್ಬರು.
ಬೆಂಗಳೂರಿನಿಂದ ಬಂದ ಕಾರೊಂದು ರಸ್ತೆ ಮಧ್ಯೆ ಪಂಕ್ಚರ್ ಆಗಿ ನಿಂತು ಹೋಗಿತ್ತು. ಈ ವೇಳೆಯಲ್ಲಿ ಸ್ವತಃ ಚಿಕ್ಕಮಗಳೂರು ಎಸ್‍ಪಿ ಅಣ್ಣಾಮಲೈ ಅವರು ಕೈಯಲ್ಲಿ ಸ್ಪ್ಯಾನರ್ ಹಿಡಿದು ಸಹಾಯ ಮಾಡುವ ಪ್ರಯತ್ನ ಮಾಡಿದ್ದಾರೆ.
ಭಾನುವಾರ ರಾತ್ರಿ ಚಿಕ್ಕಮಗಳೂರು-ಶೃಂಗೇರಿ ಮಾರ್ಗದಲ್ಲಿ ಪ್ರಯಾಣಿಸುತ್ತಿದ್ದ ಬೆಂಗಳೂರು ಮೂಲದ ಕಾರು ಮತ್ತಾವರ ಗ್ರಾಮದ ಪಂಚರ್ ಆಗಿ ನಿಂತಿತ್ತು. ರಸ್ತೆಯ ಸುತ್ತುಮುತ್ತಲಿನಲ್ಲಿ ದಟ್ಟವಾದ ಕಾಡು ಮರಗಳಿದ್ದರಿಂದ ಪ್ರವಾಸಿಗರು ಆತಂಕಕ್ಕೆ ಒಳಗಾಗಿದ್ದರು. ಈ ವೇಳೆ ಕೊಪ್ಪದಿಂದ ಚಿಕ್ಕಮಗಳೂರಿಗೆ ಆಗಮಿಸುತ್ತಿದ್ದ ಎಸ್‍ಪಿ ಅಣ್ಣಾಮಲೈ ಅವರನ್ನು ಕಂಡು, ಸ್ವತಃ ತಾವೇ ಕೈಯಲ್ಲಿ ಸ್ಪ್ಯಾನರ್ ಹಿಡಿದು ಟಯರ್ ಬಿಚ್ಚಲು ಯತ್ನಿಸಿದ್ದಾರೆ.
ಟಯರ ಬಿಚ್ಚಲು ತುಸು ಕಷ್ಟ ಆದ್ದರಿಂದ ಮೆಕಾನಿಕ್‍ಗೆ ಫೋನ್ ಮಾಡಿ ಬರುವಂತೆ ತಿಳಿಸಿದ್ದಾರೆ. ನಂತರ ಕಾರಿನಲ್ಲಿದ್ದ ಪ್ರವಾಸಿಗರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ನಗರಕ್ಕೆ ತಂದು ಬಿಟ್ಟಿದ್ದಾರೆ. ಎಸ್‍ಪಿ ಸಹಾಯ ಕಂಡು ಕಾರು ಮಾಲೀಕ ಆಶ್ಚರ್ಯಪಟ್ಟು ಎಸ್‍ಪಿ ಈ ರೀತಿಯ ಸಹಾಯ ಮಾಡಿದ್ದು ನಮಗೆ ತುಂಬಾ ಖುಷಿ ನೀಡಿದೆ ಎಂದು ಹೇಳಿದ್ದಾರೆ.