ಹೊಸದಿಲ್ಲಿ: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಥರದಲ್ಲಿ ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಮತ್ತು ಹಿಂಸೆ ಪ್ರಚೋದಿಸುವವರ ವಿರುದ್ಧ ಕಟುವಾಗಿ ಖಂಡನೆ ವ್ಯಕ್ತಪಡಿಸಿದ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ನಿರಪರಾಧಿಗಳು ಮತ್ತು ಮುಗ್ಧ ಜನರ ಹತ್ಯೆ ಮಾಡುವುದು, ಅವರಿಗೆ ಹೊಡೆಯುವುದು ಧರ್ಮವಲ್ಲ. ಅದು ದೇಶದಲ್ಲಿ ಅಥವಾ ದೇಶದ ಹೊರಗೆ ನಡೆದರೂ ಖಂಡನೀಯ ಎಂದು ಹೇಳಿದ್ದಾರೆ.
ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ ವತಿಯಿಂದ ಆಯೋಜಿಸಲಾದ ವಾರ್ಷಿಕ ಭಾಷಣ ಸರಣಿಯಲ್ಲಿ ಮಾತಾಡಿದ ಅವರು ದೇಶ ನಿರ್ಮಾಣದಲ್ಲಿ ಅಲ್ಪಸಂಖ್ಯಾತರು ಭಾಗಿಯಾಗಿದ್ದಾರೆ ಎಂದು ತನ್ನ ಹತ್ತನೆ ಭಾಷಣದಲ್ಲಿ ಹೇಳಿದ್ದಾರೆ.
ಯಾವುದೇ ಧರ್ಮ ಹಿಂಸೆ, ದೌರ್ಜನ್ಯಗಳನ್ನು ಕಲಿಸುವುದಿಲ್ಲ. ಬದಲಾಗಿ ಕೆಲವರು ತಮ್ಮ ಲಾಭಕ್ಕಾಗಿ ಅಥವಾ ರಾಜಕೀಯ ಅಜೆಂಡಾಕ್ಕಾಗಿ ಹಿಂಸೆಯನ್ನು ಹರಡುತ್ತಿದ್ದಾರೆ. ಸಮಾಜದಲ್ಲಿ ಭಯ ಮತ್ತು ಆತಂಕದ ವಾತಾವರಣವನ್ನು ಹುಟ್ಟು ಹಾಕುತ್ತಾರೆ. ಒಂದು ವೇಳೆ ನಾವು ಲಶ್ಕರೆ ತಯ್ಯಿಬ, ಐಎಸ್, ತಾಲಿಬಾನ್ ಮುಂತಾದವುಗಳನ್ನು ಉದ್ಧರಿಸಿದರೂ ಈ ಸಂಘಟನೆಗಳು ಇಸ್ಲಾಮಿನ ಬೆಳವಣಿಗೆಗೆ ಪೂರಕ ಆಗುತ್ತಿದೆಯಾ? ಖಂಡಿತಾ ಇಲ್ಲ. ಬದಲಾಗಿ ಅವು ತನ್ನ ಅಜೆಂಡಾದ ಪ್ರಕಾರ ಕೆಲಸ ಮಾಡುತ್ತಿದೆ. ದೇಶದ ಸ್ವಾತಂತ್ರ್ಯದಲ್ಲಿ ಮುಸ್ಲಿಮರ ಸೇವೆ ಪ್ರಧಾನವಾಗಿದೆ. ಭಾರತದ ಅಭಿವೃದ್ಧಿಯಲ್ಲಿಯೂ ಅಲ್ಪಸಂಖ್ಯಾತರ ಸೇವೆ ಗಣನೀಯವಾದುದು. ಇದನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಉಪ ರಾಷ್ಟ್ರಪತಿ ಹೇಳಿದರು. ಅಬುಲ್ ಕಲಾಮ್ ಆಝಾದ್, ಡಾಕ್ಟರ್ ಎಪಿಜೆ ಅಬ್ದುಲ್ ಕಲಾಮ್, ಡಾಕ್ಟರ್ ಝಾಕಿರ್ ಹುಸೈನ್, ಫಕ್ರುದ್ದೀನ್ ಅಲಿ ಅಹ್ಮದ್, ರಫಿ ಅಹ್ಮದ್ಕಿದ್ವಾಯಿ, ಅಶ್ಫಕುಲ್ಲಾಹ್ ಖಾನ್, ಮುಹಮ್ಮದ್ ಹಾಮಿದ್ ಅನ್ಸಾರಿ ಮುಂತಾದ ಎಷ್ಟೊ ಮಂದಿ ದೇಶದ ಅಭಿವೃದ್ದಿಗೆ ತಮ್ಮ ಕೊಡುಗೆ ನೀಡಿದ್ದಾರೆ ಎಂದು ವೆಂಕಯ್ಯ ನಾಯಿಡು ಹೇಳಿದರು.