ಬಾಟಲಿ ನೀರಿನ ಮಾರಾಟ ನಿಷೇಧಿಸಬೇಕೆಂದು 13 ವರ್ಷಗಳಿಂದ ಮೌನಕ್ಕೆ ಶರಣಾಗಿದ್ದಾರೆ. ಅದೂ ಮಹಾ ಮೌನ.. ಆ ಮೌನದೊಳಗಿರುವ ಚಂಡಮಾರುತದ ಅಬ್ಬರವನ್ನು ಕಂಡರೆ ನೀವೇ ದಂಗಾಗುವಿರಿ… ನಿತ್ಯ ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಅನ್ನಾಹಾರವನ್ನೂ ಸೇವಿಸುತ್ತಿಲ್ಲ.. ಬೆಂಗಳೂರಿನ ಸಾಹಿತಿಗಳು, ಚಳವಳಿ ವಲಯದಲ್ಲಿರುವವರಿಗೆ ಈ ವ್ಯಕ್ತಿ ಬಗ್ಗೆ ಗೊತ್ತು.. ಆದರೆ ಅವರ ಈ ಕ್ರಾಂತಿ ಒಂದು ನಿರ್ಣಾಯಕ ಹಂತ ತಲುಪಿದ್ದು ಬಹುತೇಕರಿಗೆ ಗೊತ್ತಿಲ್ಲ.. ಬಹುಶಃ ವಿಶ್ವದ ಚರಿತ್ರೆಯಲ್ಲಿ ಎಂದೂ ದಾಖಲಾಗಿರದ ಏಕವ್ಯಕ್ತಿಯ ಮಹಾಕ್ರಾಂತಿಯಿದು.. ಇವರನ್ನು ನೋಡಿದ ಬಳಿಕ ಮರು ಕ್ಷಣ ಏನಾಗುವುದೋ ಎಂದು ಆತಂಕಕ್ಕೊಳಗಾಗಿದ್ದೇನೆ..
ನಿನ್ನೆ ಬೆಂಗಳೂರಿನ ಟೌನ್ಹಾಲ್ ಪಕ್ಕ ಇವರು ಸಿಕ್ಕರು… ಆ್ಯಂಬ್ರೋಸ್. ಕಚೇರಿಯಿಂದ ಮನೆಗೆ ಹೊರಟವನಿಗೆ ಎಲ್ಐಸಿ ಆಫೀಸ್ ಎದುರಿನ ಫುಟ್ಪಾತ್ನಲ್ಲಿ ನಡೆದುಕೊಂಡುಬರುತ್ತಿದ್ದವರು ಸಿಕ್ಕರು.. ತುಂಬ ಸಮಯದ ಬಳಿಕ ಸಿಕ್ಕ ಕಾರಣವೋ ಅವರಲ್ಲಿ ಹೇಳಿಕೊಳ್ಳುವುದಕ್ಕೆ ತುಂಬಾ ಬಾಕಿ ಇತ್ತು.. ಮಿಷನ್ ಕಾಂಪೌಂಡ್ ಒಳಗೆ ಕರೆದೊಯ್ದು ಸ್ಲೇಟ್, ಚಾಕ್ಪೀಸ್ ಹಿಡಿದು ಎಲ್ಲವನ್ನೂ ಬರೆದು ಒರೆಸಿ, ಅರ್ಥ ಆಯ್ತಾ ಅಂತ ಮುಖ ನೋಡಿ ಮತ್ತೆ ಬರೆದು, ಒರೆಸಿ ಮುಖ ನೋಡಿ ತನ್ನೊಳಗಿದ್ದುದೆಲ್ಲವನ್ನೂ ಬಗೆಬಗೆದು ತೋಡಿಕೊಂಡರು. ಈ ಹಿಂದೆಯೇ ಅವರ ಬಗ್ಗೆ ಅರ್ಥವಾಗದ ಅಚ್ಚರಿಯನ್ನು ತುಂಬಿಕೊಂಡಿದ್ದ ನನಗೆ ಈಗ ಮತ್ತಷ್ಟು ನಿಗೂಢವಾಗಿ, ಮಹಾ ಕ್ರಾಂತಿಕಾರಿಯಾಗಿ, ಮಹಾ ಸಂತನಾಗಿ ಆ ಮಬ್ಬುಗತ್ತಲಲ್ಲಿ ಕಾಣಿಸಿಕೊಂಡರು…
ಕಾಲಕಾಲಕ್ಕೆ ವ್ಯವಸ್ಥೆಯ ದೌರ್ಜನ್ಯದ ವಿರುದ್ಧ ಒಂದೊಂದೇ ಗಂಟೆ ಹೆಚ್ಚೆಚ್ಚು ಉಪವಾಸ ಮಾಡುತ್ತಾ ಬಂದವರು ಆ್ಯಂಬ್ರೋಸ್.. ಈಗ ಹಳೆಯ 500, 1000 ರೂ. ನೋಟು ನಿಷೇಧದ ಬಗ್ಗೆ ಅವರ ಹೋರಾಟ… ಹೊಸ ನೋಟಿನಲ್ಲಿ ಕನ್ನಡವೂ ಸೇರಿ ಪ್ರಾದೇಶಿಕ ಭಾಷೆಗಳಿಗೆ ಅನ್ಯಾಯವಾಗಿದೆ (ಹಿಂದಿಗೆ ಹೋಲಿಸಿದರೆ ಕನ್ನಡದಂಥ ಪ್ರಾದೇಶಿಕ ಭಾಷೆಗಳಿಗೆ ಪ್ರಾಶಸ್ತ್ಯ ಕಡಿಮೆ) ಎಂಬುದು ಅವರ ವಾದ.. ಹಾಗಾಗಿ ಹೊಸ 200, 500, 1000 ರೂಪಾಯಿ ನೋಟನ್ನೂ ಅವರು ಸ್ವೀಕರಿಸುತ್ತಿಲ್ಲ.. ಮತ್ತು ಹಳೆಯ ನೋಟನ್ನು ನಾನೇ ಹೋಗಿ ಬದಲಾಯಿಸಲ್ಲ ಎಂಬುದು ಅವರ ಪ್ರತಿಭಟನೆ.. ವ್ಯವಸ್ಥೆಯ ವಿರುದ್ಧ ಪ್ರತಿಭಟನೆಯಾಗಿ ‘ನಿಮ್ಮದೇ ಆಗಿದ್ದಲ್ಲಿ ಹಳೇ ನೋಟನ್ನು ಇಲ್ಲಿ ಬದಲಾಯಿಸಿಕೊಡಲಾಗುತ್ತೆ’ ಎಂದು ಭಿತ್ತಿಪತ್ರ ಹಿಡಿದು ಬೆಂಗಳೂರು ನಗರ ಸುತ್ತಾಡುತ್ತಿದ್ದಾರೆ.. ಜೊತೆಗೆ ಪ್ರತಿ ಸಂಜೆ ಹಳೆ ನೋಟನ್ನು ಬದಲಾಯಿಸಿ ಕೊಡುವ ಮೂಲಕ ತಮ್ಮ ಅಂದಿನ ಉಪವಾಸ ಮುಗಿಸುತ್ತಿದ್ದಾರೆ.
ಹಳೆ ನೋಟು ಬದಲಾಯಿಸಿ ಕೊಡಬೇಕೆಂದು ಆ್ಯಂಬ್ರೋಸ್ ಕೆಲ ದಿನಗಳ ಹಿಂದೆ ದೆಹಲಿಯ ಜಂತರ್ಮಂತರ್ನಲ್ಲೂ ಪ್ರತಿಭಟನೆ ನಡೆಸಿದ್ದರು. ಜಂತರ್ಮಂತರ್ಗೆ RBI ಅಧಿಕಾರಿಗಳು, ಪೊಲೀಸರು ಇವರನ್ನು ಗದರಿಸಿದ್ದರು.. ಆದರೆ ಯಾವುದಕ್ಕೂ ಜಗ್ಗಲೇ ಇಲ್ಲ.. ಅದೇ ವೇಳೆಗೆ ಜಂತರ್ಮಂತರ್ಗೆ ಬಂದ ತಮಿಳುನಾಡು ರೈತ ಹೋರಾಟಗಾರರ ಜತೆ ಸೇರಿದರು.. ಅವರ ಜೊತೆ ಚೆನ್ನೈಗೂ ಹೋದರು.. ಚೆನ್ನೈನಲ್ಲಿ ಇವರ ಹೋರಾಟಕ್ಕೆ ಭಾರೀ ಜನಬೆಂಬಲ ಸಿಕ್ಕಿತಂತೆ.. ಕರ್ನಾಟಕದಲ್ಲಿ 13 ವರ್ಷ ಮೌನ ಪ್ರತಿಭಟನೆ ನಡೆಸಿದರೂ ಸಿಕ್ಕದ ಮನ್ನಣೆ ತಮಿಳುನಾಡಲ್ಲಿ ಕೆಲವೇ ದಿನಗಳಲ್ಲಿ ಸಿಕ್ಕಿತ್ತು ಎಂದು ಬಳಪದ ಮೇಲೆ ಚಾಕ್ಪೀಸಲ್ಲಿ ಬರೆದು ಮುಖ ನೋಡಿ ನಕ್ಕರು ಆ್ಯಂಬ್ರೋಸ್…
ಮೊನ್ನೆ ಯಾರೋ ಒಬ್ಬ ಬಂದು ನನ್ನಲ್ಲಿ 3 ಲಕ್ಷ ರೂ. ಇದೆ, ಬದಲಾಯಿಸಿ ಕೊಡುತ್ತೀಯಾ ಎಂದು ಕೇಳಿದ್ದನಂತೆ.. ದೆಹಲಿಯಲ್ಲಿದ್ದಾಗ ಒಬ್ಬಾತ ನನ್ನಲ್ಲಿ 4 ಕೋಟಿ ಹಳೆ ನೋಟು ಇದೆ ಬದಲಾಯಿಸಿ ಕೊಡು ಎಂದಿದ್ದನಂತೆ.. ಆದರೆ ಇವರ ನೋಟು ಬದಲಾವಣೆ ಪ್ರತಿಭಟನೆ ಕೇವಲ ಸಾಂಕೇತಿಕ.. ಆದರೂ ಇವರ ಮಾಸಲು ಬಣ್ಣದ ಜೋಳಿಗೆಯಲ್ಲಿ ಈಗಲೂ ಹತ್ತಿಪ್ಪತ್ತು ಸಾವಿರದ ಹಳೆ ನೋಟುಗಳಿವೆ.. ಹಳೆ ನೋಟು ಇಟ್ಟುಕೊಳ್ಳುವುದು ಕಾನೂನು ಪ್ರಕಾರ ಅಪರಾಧವಲ್ಲವೇ ಎಂದರೆ… ನಕ್ಕು ಇನ್ನೊಂದು ವಾದ ಮುಂದಿಡುತ್ತಾರೆ…
‘ನಾನೊಬ್ಬ ಸಣ್ಣಮಟ್ಟಿನ ಪುಸ್ತಕ ವ್ಯಾಪಾರಿ… ಪುಸ್ತಕ ಮಾರಾಟದಿಂದ ಬಂದ ಲಾಭವನ್ನು ಇದಕ್ಕೋಸ್ಕರ ಬಳಸುತ್ತೇನೆ… ನನಗೆ ಮನೆಯಿಲ್ಲ, ನನ್ನವರು ಯಾರೂ ಇಲ್ಲ… ಅಸಲಿಗೆ ಸರಿಯಾಗಿ ಊಟವೂ ಮಾಡುವುದಿಲ್ಲ.. ಮತ್ತೆ ನನಗೆಂದು ಸಂಗ್ರಹಸಿಡುವಂಥದ್ದೇನಿದೆ…? ಆದರೆ ಈ ನನ್ನ ಹೋರಾಟದ ಮೂಲಕ ಸರ್ಕಾರದ ಬಳಿ ನನ್ನ ಮನವಿ ಇಷ್ಟೇ- ದಯವಿಟ್ಟು ಹಳೆ ನೋಟುಗಳನ್ನು ಬದಲಾಯಿಸಿ ಮತ್ತು ಅದನ್ನು ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಕುಟುಂಬಗಳಿಗೆ ಕೊಡಿ, ಇನ್ನೂ ಜನರಲ್ಲಿರುವ ನಿಷೇಧಿತ ಕೋಟ್ಯಂತರ ರೂಪಾಯಿ ಪಡೆದುಕೊಂಡು ಸಾಲಬಾಧೆಯಿಂದ ನೊಂದಿರುವ ರೈತರ ಸಾಲವನ್ನು ಮನ್ನಾ ಮಾಡಿ.. ’
ನಿಟ್ಟುಸಿರುಬಿಟ್ಟೆ… ಗಾಂಧಿ ಹೇಳಿದ್ದರು- ತ್ಯಾಗವಿಲ್ಲದ ಯಾವ ಹೋರಾಟ, ಪ್ರತಿಭಟನೆಯೂ ವ್ಯರ್ಥ ಅಂತ.. ನನ್ನದೂ ಅದೇ ಎಂದು ಮತ್ತೆ ಬರೆದರು.. ಮತ್ತೂ ಅವರು ತಮ್ಮ ಜೋಳಿಗೆಯೊಳಗಿಂದ ಬಟ್ಟೆ ಸುತ್ತಿದ ಏನೋ ವಸ್ತು ಹೊರತೆಗೆದರು.. ಬಿಡಿಸಿ ನೋಡಿದರೆ ಕೊರಳಿಗೆ ನೀರಿನ ಬಾಟಲಿ ಸಿಕ್ಕಿಸಿದ ಮನುಷ್ಯನ ತಲೆ ಬುರುಡೆ…!!! ಮತ್ತೆ ಚಾಕ್ಪೀಸ್ ಹಿಡಿದು ಸ್ಲೇಟು ಮೇಲೆ ಬರೆಯತೊಡಗಿದರು… ಇದು ತಮಿಳುನಾಡಿನಲ್ಲಿ ಸಾಲಬಾಧೆ ತಾಳಲಾರದೆ ನೊಂದು ಆತ್ಮಹತ್ಯೆ ಮಾಡಿಕೊಂಡ ರೈತನ ತಲೆಬುರುಡೆ… ಇದೊಂದು ಸಂಕೇತ ಅಷ್ಟೇ… ಮಾತನಾಡಬೇಕಾದವರು, ಜೀವಂತ ಮಿದುಳಿರುವವರು ತಲೆಬುರುಡೆಯಂತಾಗಿದ್ದಾರೆ ಎಂದು ಸಾರುವುದಕ್ಕೆ ಇದನ್ನೆತ್ತಿಕೊಂಡು ಬಂದೆ‘‘
ಅವರ ಪುಸ್ತಕದ ರಾಶಿಯ ನಡುವೆ, ತರಹೇವಾರಿ ಹೋರಾಟದ ಫಲಕಗಳ ನಡುವೆ ಈಗ ಇದೊಂದು ತಲೆಬುರುಡೆಯೂ ಸೇರಿದೆ.. ರಾತ್ರಿ ಮಲಗುವಾಗಲೂ ಆ ಬುರುಡೆ ಇವರ ಪಕ್ಕದಲ್ಲಿರುತ್ತೆ… ಕನಸಲ್ಲಿ ಆ ರೈತ ಬರುವನೋ, ಮಾತನಾಡುವನೋ ಗೊತ್ತಿಲ್ಲ…
ಅಂದ ಹಾಗೆ ನಿನ್ನೆ ರಾಜ್ಯೋತ್ಸವ ದಿನ ರವೀಂದ್ರ ಕಲಾಕ್ಷೇತ್ರದ ಒಳಗೆ ಸಾಧಕರಿಗೆ ಸಿಎಂ ಪ್ರಶಸ್ತಿ ಕೊಡುತ್ತಿದ್ದಾಗ ಹೊರಗೆ ಕೆಲ ಹೋರಾಟಗಾರರೊಂದಿಗೆ ಮಾತನಾಡುತ್ತಿದ್ದ ಆ್ಯಂಬ್ರೋಸ್ ಪೊಲೀಸರ ಕಣ್ಣಿಗೆ ಬಿದ್ದರು.. ಕೈಲಿ ಹಿಡಿದುಕೊಂಡಿದ್ದ ನಾಮಫಲಕವನ್ನು ಕಿತ್ತು ಪೊಲೀಸ್ ಜೀಪ್ಗೆ ಹಾಕಿದರಂತೆ.. ನಾಮಫಲಕ ಕೊಡಿ ಎಂದು ಪಟ್ಟುಬಿಡದ ಆ್ಯಂಬ್ರೋಸ್ ಅಲ್ಲೇ ಕುಳಿತಾಗ ನಾಮಫಲಕ ಕೊಟ್ಟು ಅಲ್ಲಿಂದ ಕಳಿಸಿದ್ದರಂತೆ..
ಬಂಧನಕ್ಕೆ ಬೆದರುವುದಿಲ್ಲ… ಸಾಯುವುದಕ್ಕೂ ನಾನು ರೆಡಿ.. ಜಗತ್ತಿನ ಎಲ್ಲಾ ಕ್ರಾಂತಿಗಳೂ ಸಾವಿನಿಂದಲೇ ಆರಂಭವಾಗಿವೆ ಎಂದು ಮತ್ತೆ ಬಳಪದಲ್ಲಿ ಬರೆದು ತೋರುತ್ತಾರೆ…
ಆ್ಯಂಬ್ರೋಸ್ರ ಈ ಮೌನ ಹೋರಾಟಕ್ಕೆ ಮಾತು ಬರುತ್ತಿಲ್ಲ…
ಕೃಪೆ – ಲೇಖಕರು : ಚಂದ್ರಶೇಖರ್