ಭಟ್ಕಳ – ಲಾಕ್ ಡೌನ್ ನ ಕಾರಣದಿಂದಾಗಿ ಅಂಬುಲೆನ್ಸ್ ಸೌಲಭ್ಯ ಸಿಗದೆ ಇತ್ತೀಚಿಗೆ ಮಹಿಳೆಯೋರ್ವರು ಮನೆಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆಯ ಬೆನ್ನಿಗೇ ಅಂತಹದ್ದೇ ಇನ್ನೊಂದು ಘಟನೆ ಭಟ್ಕಳದಲ್ಲಿ ನಡೆದಿದೆ.

ಜಾಮಿಯಾ ಅಬ್ದ್ ರಸ್ತೆಯ ಅರ್ಶಿಯಾ ಕಾಲೋನಿಯ ರಜ್ಮಿಯ ಎಂಬವರು ನಿನ್ನೆ ಆಸ್ಪತ್ರೆಗೆ ಸಾಗುವ ನಡುವೆಯೇ ಅಟೋರಿಕ್ಷಾದಲ್ಲಿ ಪ್ರಸವಿಸಿದ್ದಾರೆ. ಈ ಕುರಿತಂತೆ ಆಡಳಿತ ವ್ಯವಸ್ಥೆಯ ವಿರುದ್ಧ ಸ್ಥಳೀಯರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಪ್ರಸವಕ್ಕಿಂತ ಮೂರ್ನಾಲ್ಕು ಗಂಟೆಗಳ ಮೊದಲು ರಜ್ಮಿಯ ಅವರ ಕುಟುಂಬ ಅಂಬುಲೆನ್ಸ್ ಗಾಗಿ ಮನವಿ ಮಾಡಿದ್ದು ಆರೋಗ್ಯ ಅಧಿಕಾರಿಗಳು ಅವರ ಮಾಹಿತಿಯನ್ನು ಸಂಗ್ರಹಿಸಿದ್ದರಲ್ಲದೆ ಮನೆಗೆ ಅಂಬುಲೆನ್ಸ್ ಅನ್ನು ಕಳುಹಿಸುವುದಾಗಿ ಭರವಸೆ ನೀಡಿದರು. ಆದರೆ ಮೂರು ಗಂಟೆಗಳ ಕಾಯುವಿಕೆಯ ನಂತರವೂ ಆಂಬುಲೆನ್ಸ್ ಬರದೇ ಕೊನೆಗೆ ರಿಕ್ಷಾದ ಮೂಲಕ ಆಸ್ಪತ್ರೆಗೆ ಹೋಗುವುದಕ್ಕೆ ಕುಟುಂಬ ತೀರ್ಮಾನಿಸಿತು. ಆದರೆ ಪಾಸ್ ಅಲಭ್ಯತೆಯನ್ನು ಮುಂದಿಟ್ಟು ಯಾವ ರಿಕ್ಷಾಗಳೂ ಗರ್ಭಿಣಿಯನ್ನು ಆಸ್ಪತ್ರೆಗೆ ಸಾಗಿಸುವುದಕ್ಕೆ ಒಪ್ಪಿಕೊಳ್ಳಲಿಲ್ಲ. ಪಾಸ್ ಇಲ್ಲದ ರಿಕ್ಷಾ ಚಾಲಕರೋರ್ವರು ಮುಂದೆ ಬಂದರಾದರೂ ಆಟೋರಿಕ್ಷಾ ಆಸ್ಪತ್ರೆಗೆ ತಲುಪುವ ಮೊದಲೇ ರಜ್ಮಿಯ ಅವರು ಪ್ರಸವಿಸಿದರು. ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ. ಬಳಿಕ ಆಂಬುಲೆನ್ಸ್ ನಲ್ಲಿ ತಾಯಿ ಮತ್ತು ಮಗುವನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.

LEAVE A REPLY

Please enter your comment!
Please enter your name here