ಕೆಲ ತಂದೆಯಂದಿರು ಪ್ರತಿನಿತ್ಯ ಬೆಳಗ್ಗೆ ಆರು ಗಂಟೆಗೆ ಎದ್ದು ಕೆಲಸಕ್ಕೆ ಹೋದರೆ ಮತ್ತೆ ತಿರುಗಿ ಬರೋದು ಮಧ್ಯಾಹ್ನ ಊಟದ ಸಮಯಕ್ಕೆ . ಮಧ್ಯಾಹ್ನ ಊಟ ಮಾಡಿ ನಂತರ ಮನೆ ಬಿಟ್ಟು ಹೋದರೆ ಮತ್ತೆ ಹಿಂದಿರುಗುವುದು ಸಂಜೆ ಹೊತ್ತು. ಕೆಲವು ತಾಯಂದಿರು ಬೆಳಗ್ಗೆ ಎದ್ದು ಅಡುಗೆ ಕೋಣೆಗೆ ನುಗ್ಗಿದರೆ ಮತ್ತೆ ಹಿಂದಿರುಗಿ ಹೊರ ಬರೋದು ಒಂಬತ್ತೋ ಹತ್ತೋ ಗಂಟೆಯ ಬಳಿಕ. ಗಂಡು ಮಕ್ಕಳಾದರೆ ಕೇಳೋದೇ ಬೇಡ ಅದರಲ್ಲೂ ಕೆಲವು ಗಂಡುಮಕ್ಕಳಿಗೆ ಒಂದು ವೇಳೆ ಕೆಲಸ ಇಲ್ಲವಾದರೆ ಹತ್ತು ಗಂಟೆಯ ನಂತರ ಎದ್ದೆಳುತ್ತಾರೆ ಇನ್ನು ಕೆಲವು ಹೆಣ್ಣು ಮಕ್ಕಳೇನು ಸಾಚರಲ್ಲ ಅಬ್ಬಬ್ಬಾ ಅಂದರು ಏಳುವರೆ ಗಂಟೆ ತನಕ ಮಲಗಿರ್ತಾರೆ. ತಾಯಿಯ ಕೂಗನ್ನು ಸಹಿಸದೆ ಕಿರಿಕಿರಿಯಾಗಿ ಒಲ್ಲದ ಮನಸಿನಲ್ಲೇ ಏದ್ದೇಳುತ್ತಾರೆ.
“ಕಾಲಕ್ಕೆ ತಕ್ಕಂತೆ ಕೋಲ” ಎನ್ನುವಂತೆ ಇತ್ತೀಚಿನ ದಿನಗಳಲ್ಲಿ ನಮಗೆ ಕಾಣುವ ಕೆಲವೊಬ್ಬರ ದಿನಚರಿ ಹೀಗಿರುತ್ತದೆ. ಹುಡುಗನಾಗಲಿ ಹುಡುಗಿಯೇ ಆಗಲಿ ಮೊದಲು ಎದ್ದ ತಕ್ಷಣ ತಮ್ಮ ಎಂದಿನ.ಕಾರ್ಯ ಮುಗಿಸಿ ಚಾ ಅಥವಾ ಕಾಫಿ ಹೀರುತ್ತಾ ಮೊಬೈಲ್ ಗೆ ಕಣ್ಣಾಡಿಸಿ ವಾಟ್ಸಾಪ್ , ಫೇಸ್‍ಬುಕ್ ಮೆಸ್ಸಜಸ್ಸುಗಳನ್ನು ಆರಾಮವಾಗಿ ಓದಿದ ಮೇಲೆ ಅಮ್ಮ ತಂದುಕೊಟ್ಟ ತಿಂಡಿಯನ್ನು ತಿಂದು ಟಿವಿ ಮುಂದೆ ಕುಳಿತು ಹಾಡು ಕೇಳುವುದಕ್ಕೆ ಶುರು ಮಾಡಿಕೊಳ್ಳುತ್ತಾರೆ . ಅಮ್ಮ ಏನಾದರು ಕೆಲಸ ಹೇಳಿದರೆ “ಇವರದೆಂಥ ಕಿರಿಕಿರಿ” ಎಂದೆನ್ನುತ್ತಾ ಉದಾಸಿನದಿಂದ ಮಾಡುತ್ತೇವೆ. ಅಮ್ಮ ಹೇಳಿದ ಕೆಲಸ ಮುಗಿಸಿ ಮತ್ತೆ ಟಿವಿ ಮುಂದೆ ಕುಳಿತರೆ ಎದ್ದೇಳೋದು ಮಧ್ಯಾಹ್ನ . ಮಧ್ಯಾಹ್ನ ಕಳೆಯಿತು ಅಂದರೆ ಸಾಕು ಮೋಜು ಮಸ್ತಿ, ಗೇಮ್ , ತಿರುಗಾಟ, ಹೆಣ್ಣು ಮಕ್ಕಳಾದರೆ ಅಕ್ಕ ಪಕ್ಕದವರ ಜೊತೆ ಹರಟೆ ಹೊಡೆಯೋದು ಗಂಡು ಮಕ್ಕಳಾದರೆ ಅಲ್ಲಿ ಇಲ್ಲಿ ಸುತ್ತಾಡೋದು ಅಂಗಡಿ ಹತ್ತಿರ ಕುಳಿತು ಬೊಬ್ಬೆ ಹೊಡೆಯೋದು ಇದೆ ದಿನಚರಿ.
ಈ ವಿಷಯ ಇಲ್ಲಿ ಯಾಕೆ ಬಂತು ಅಂದರೆ ಇವತ್ತಿನ ದಿನಗಳಲ್ಲಿ ಹೆಚ್ಚಿನ ಯುವಕ, ಯುವತಿಯರು ಅಂತರ್ಜಾಲದ ಮೂಲಕ ಪ್ರೀತಿಯ ಬಲೆಗೆ ಬಿದ್ದು ಕ್ಷಣಿಕ ಸುಖಕ್ಕಾಗಿ ತಮ್ಮ ಹೆತ್ತವರನ್ನು ತೊರೆದು ಓಡಿ ಹೋಗುವ ಪ್ರಕರಣವು ಹೆಚ್ಚಾಗಿದೆ. ಈ ಮೂಲಕ ತಮ್ಮ ಅಮೂಲ್ಯವಾದ ಜೀವನವನ್ನು ಅನಾವಶ್ಯಕವಾಗಿ ಕಳೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಕೆಲವರು ತಾವು ಮಾಡಿದ ತಪ್ಪನ್ನು ಅರಿತುಕೊಂಡು ಸಮಾಜದಲ್ಲಿ ತಲೆ ತಗ್ಗಿಸಿ ನಿಲ್ಲಲಾಗದೆ ಆತ್ಮಹತ್ಯೆ ಮಾಡಿಕೊಂಡರೆ ಇನ್ನು ಕೆಲವರು ತಾನು ದಾರಿ ತಪ್ಪಿ ಕೆಟ್ಟು ಹೋದವಳು ಇನ್ನು ನನ್ನಿಂದ ಸುಧಾರಿಸಿಕೊಳ್ಳಲು ಆಸಾಧ್ಯ ಎಂಬ ಭಾವನೆಯಿಂದ ಎಲ್ಲಾದರೂ ದೂರದ ಊರಿನಲ್ಲಿ ಒಂಟಿಯಾಗಿ ಜೀವಿಸಲು ಇಷ್ಟಪಡುತ್ತಾರೆ. ಒಟ್ಟಿನಲ್ಲಿ ಇವುಗಳನೆಲ್ಲ ಸೂಕ್ಷ್ಮವಾಗಿ ಗಮನಿಸಿದಾಗ ನಾವು ಅರ್ಥೈಸಿಕೊಳ್ಳಬಹುದು ಇದಕೆಲ್ಲ ಮೂಲ ಕಾರಣ ಧಾರ್ಮಿಕ ಶಿಕ್ಷಣದ ಕೊರತೆ.
ಧಾರ್ಮಿಕ ಶಿಕ್ಷಣದ ಕೊರತೆಗೆ ಬರೀ ಮಕ್ಕಳ ಚಂಚಲತೆಯೇ ಕಾರಣವಲ್ಲ ಕೆಲವೊಮ್ಮೆ ಹೆತ್ತವರ ಅತೀಯಾದ ಸಲುಗೆಯು ಕೂಡ ಮಕ್ಕಳನ್ನು ಈ ಮಟ್ಟಕ್ಕೆ ಬೆಳೆಸಿಬಿಡುತ್ತದೆ . ಧರ್ಮಗಳು ಶಾಂತಿಯನ್ನು ಭೊದಿಸುತ್ತದೆ ಸರಿ ಅದು ತನ್ನ ಮನೆಯವರಿಗೆ ಮಾತ್ರ ಸೀಮಿತವಲ್ಲ ಹೊರ ಜಗತ್ತಿಗೂ ಅದರ ಶಾಂತಿಯನ್ನು ಪಸರಿಸಬೆಕು. ತಮ್ಮ ಮಕ್ಕಳು ಮಾಡುವ ಸಣ್ಣ ಪುಟ್ಟ ತಪ್ಪುಗಳು ಪೋಷಕರು ಸಮರ್ಥಿಸುವ ಮೂಲಕ ತಮ್ಮ ಮಕ್ಕಳು ಹಾದಿ ತಪ್ಪುವುದಕ್ಕೆ ಹಸಿರು ನಿಶಾನೆ ತೋರಿಸಿದಂತಾಗುತ್ತದೆ .
ಪೋಷಕರು ತಮ್ಮ ಮಕ್ಕಳನ್ನು ಕಟ್ಟು ನಿಟ್ಟಾಗಿ ಬೆಳೆಸುವ ಜಾಗದಲ್ಲಿ ಅತಿಯಾದ ಮುದ್ದು, ಸಲುಗೆ ಇವೆಲ್ಲವೂ ಮಕ್ಕಳಲ್ಲಿ ಹಲವಾರು ಬದಲಾವಣೆಗಳನ್ನು ತರಿಸುತ್ತದೆ. ಅದರಲ್ಲೂ ಹೆಣ್ಣುಮಕ್ಕಳಿಗೆ ಹೆಚ್ಚಿನ ಸಲುಗೆಯನ್ನು ನೀಡಿದರೆ ಕೇಳಲೆ ಬೇಡಿ ಅದು ಒಂದಲ್ಲ ಒಂದು ದಿನ ಪೋಷಕರಿಗೆ ಶಾಪವಾಗಿ ಪರಿಣಮಿಸುತ್ತದೆ. ಹೆಣ್ಣನ್ನು ಗಂಡಿಗೆ ಹೋಲಿಕೆ ಮಾಡಲು ಅಸಾಧ್ಯ. ಗಂಡಿಗಿಂತ ಹೆಣ್ಣಿನ ಮನಸ್ಸು ಬಹಳ ಮೃದುವಾಗಿರುತ್ತದೆ. ಕೆಲವು ಹೆಣ್ಣುಮಕ್ಕಳು ಗಂಡಸರ ಮಾತನ್ನು ಬಹುಬೇಗನೆ ನಂಬಿಬಿಡುತ್ತಾರೆ. ತಾಯಿಯಾಗಲಿ , ಮದಡಿಯಾಗಲಿ ಅಥವಾ ಸಹೋದರಿಯೇ ಆಗಲಿ ಇವರಲ್ಲಿ ಈ ಅನುಭವಗಳನ್ನ ನಾವು ಕಂಡುಕೊಳ್ಳಬಹುದು. ಅದೇ ರೀತಿ ಒಬ್ಬಾಕೆ ಹೆಣ್ಣು ಮಗಳನ್ನು ಪೋಷಕರು ಅತೀ ಸಲುಗೆಯಿಂದ ಬೆಳೆಸಿದಾಗ ಆಕೆ ಎಲ್ಲರೊಡನೆ ಸಲುಗೆಯಿಂದ ವರ್ತಿಸುತ್ತಲೇ ಗಂಡು-ಹೆಣ್ಣು ಅಥವಾ ಅನ್ಯ ಪುರುಷ ಅನ್ನುವ ಬೇಧಭಾವ ಹುಟ್ಟಲಾರದು ಕೊನೆಗೊಂದು ದಿನ ಇದೆ ಸಲುಗೆ ಆಕೆಯನ್ನು ಅನ್ಯ ಪುರುಷರೊಡನೆ ಸ್ನೇಹಕ್ಕೆ ತಿರುಗಿಸಿ ಕೊನೆಗೊಂದು ದಿನ ಪ್ರೀತಿಯಲ್ಲಿ ಬಿದ್ದು ಮನೆ ಬಿಟ್ಟು ಓಡಿ ಹೋಗುವ ಮಟ್ಟಕ್ಕೂ ಬಂದು ನಿಲ್ಲುತ್ತದೆ. ಇದಕ್ಕೆಲ್ಲ ಕಾರಣ ಪೋಷಕರೇ ಆಗಿರುತ್ತಾರೆ.
ತಮ್ಮ ಮಕ್ಕಳು ಶಾಲೆ ಕಾಲೇಜುಗಳಿಗೆ ತೆರಳುತ್ತಾರೆ ಮನೆಗೆ ಬಂದ ತಕ್ಷಣ ಅವರ ಆರೈಕೆ ಮಾಡಿ ಮತ್ತೆ ತಮ್ಮ ಕೆಲಸಕ್ಕೆ ಹಿಂದಿರುಗುವ ಪೋಷಕರು ಮೊದಲು ತಮ್ಮ ಮಕ್ಕಳನ್ನು ಸರಿಯಾಗಿ ಗಮನಿಸಬೇಕು. ಅವರು ಏನು ಮಾಡುತ್ತಿದ್ದಾರೆ, ಏನು ಓದುತ್ತಿದ್ದರೆ, ಓದುವ ಸಮಯದಲ್ಲಿ ಮೊಬೈಲ್ ಅವಶ್ಯಕತೆ ಇದೆಯೇ, ಅವರು ಎಷ್ಟು ಗಂಟೆಗೆ ಮಲಗುತ್ತಾರೆ, ಎಷ್ಟು ಗಂಟೆಗೆ ಎದ್ದೆಳುತ್ತಾರೆ, ಎಲ್ಲಿ ಹೋಗುತ್ತಾರೆ, ಸ್ಪೆಷಲ್ ಕ್ಲಾಸ್ ಇದೆಯೇ, ಇವತ್ತು ರಜೆ ಇದೆಯೇ ಇವೆಲ್ಲವನ್ನು ನಾವು ತಿಳಿದುಕೊಳ್ಳಬೇಕು. ತಮ್ಮ ಮಕ್ಕಳು ತಮ್ಮನ್ನು ತೊರೆದು ಹೋದ ಮೇಲೆ ಊರವರು ಕರೆದು ಹೇಳವಂತಾಗಬಾರದು. ಹೆತ್ತವರು ಮಕ್ಕಳ ಮೇಲಿರುವ ಜವಾಬ್ದಾರಿಯನ್ನು ಮರೆತು ಬಿಟ್ಟಂತೆ ಮಕ್ಕಳು ಕೆಟ್ಟ ದಾರಿಯನ್ನು ಹಿಡಿದು ಬಿಡುತ್ತಾರೆ. ದಾರಿ ತಪ್ಪಿದ ಬಳಿಕ ಅವರನ್ನು ಟೀಕಿಸಿ ಫಲವಿಲ್ಲ. ಮುಂಚಿತವಾಗಿ ಎಚ್ಚೆತ್ತುಕೊಳ್ಳಬೇಕು.
ಲೇಖಕರು: ಆಯೀಷಾ ಯಾಸ್ಮೀನ್