ಕಲಬುರಗಿ: ಡಿಸೆಂಬರ್ 17 ರಂದು ಕಲಬುರಗಿಯಲ್ಲಿ ನಡೆದ ಸಾಧನಾ ಸಮಾವೇಶ ಮುಗಿದ ನಂತರ ಸಿಎಂ ಸಿದ್ದರಾಮಯ್ಯದ ಹಾಗೂ ಸಹೋದ್ಯೋಗಿಗಳ ಭೋಜನಕ್ಕೆ ಬೆಳ್ಳಿ ತಟ್ಟೆಯನ್ನು ಬಳಕೆ ಮಾಡಲಾಗಿದ್ದು, ಈ ಭೋಜನ ಕೂಟಕ್ಕಾಗಿ ಸುಮಾರು 10ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಕಲಬುರುಗಿ ಬಿಜೆಪಿ ಘಟಕದ ಮಾಜಿ ಜಿಲ್ಲಾಧ್ಯಕ್ಷ ರಾಜಕುಮಾರ್ ತೇಲ್ಕೂರ ಆರೋಪ ಮಾಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಧನಾ ಸಮಾವೇಶ ಮುಗಿದ ಬಳಿಕ ಸಿಎಂ ಸಿದ್ದರಾಮಯ್ಯ ಹಾಗೂ ಸಹೋದ್ಯೋಗಿಗಳಿಗೆ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ್ ಅವರ ಪರವಾಗಿ ಜಿಲ್ಲಾಡಳಿತ ಐವಾನ್ ಇ ಶಾಹಿ ಗೆಸ್ಟ್ ಹೌಸ್ ನಲ್ಲಿ ಭೋಜನ ವನ್ನು ಏರ್ಪಡಿಸಿತ್ತು. ಈ ವೇಳೆ ಎಲ್ಲರಿಗೂ ಬೆಳ್ಳಿ ತಟ್ಟೆಯಲ್ಲಿ ಊಟ ನೀಡಿಲಾಗಿದೆ. ಪ್ರತಿಯೊಬ್ಬರ ಊಟಕ್ಕೆ ಜಿಲ್ಲಾಡಳಿತ ತಲಾ 800 ರೂಪಾಯಿ ಖರ್ಚು ಮಾಡಿದೆ. ಈ ಮೂಲಕ ಸಾರ್ವಜನಿಕರ ಹಣವನ್ನು ಜಿಲ್ಲಾಡಳಿತ ಪೋಲು ಮಾಡಿದೆ. ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುವ ಮೂಲಕ ಈ ನಾಯಕರು ಸಾಮಾನ್ಯ ಜನತೆಗೆ ಏನು ಸಂದೇಶ ಸಾರಲು ಹೊರಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಆದರೆ ಈ ಕುರಿತು ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಡಳಿತ ಅಧಿಕಾರಿಗಳು, ಸಿಎಂ ಅವರ ಭೋಜನ ಕೂಟವನ್ನು ಜಿಲ್ಲೆಯ ಕಾಂಗ್ರೆಸ್ ಶಾಸಕರು ಏರ್ಪಡಿಸಿದ್ದು, ಅದಕ್ಕೆ ಜಿಲ್ಲಾಡಳಿತ ಯಾವುದೇ ಹಣ ನೀಡಿಲ್ಲ. ಇನ್ನು ಸಿಎಂ ಅವರಿಗೆ ನೀಡಿದ್ದು ಬೆಳ್ಳಿ ಲೇಪನದ ತಟ್ಟೆ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.

ಕೃಪೆ: ಪಬ್ಲಿಕ್ ಟಿವಿ

Leave a Reply