ಪಾಟ್ನಾ : ಒಂದು ಗುಂಡು ದಾಳಿ ನಡೆದರೆ ಜೀವ ಹೋಗುವ ಈ ಕಾಲದಲ್ಲಿ ಸುಮಾರು 18 ಬುಲೆಟ್ ದೇಹಕ್ಕೆ ಹೊಕ್ಕರೂ ಪವಾಡ ಸದೃಶವಾಗಿ ವ್ಯಕ್ತಿಯೊಬ್ಬ ಪಾರಾದ ಘಟನೆ ಬಿಹಾರದಲ್ಲಿ ವರದಿಯಾಗಿದೆ. ಪಂಕಜ್ ಕುಮಾರ್ ಸಿಂಗ್(26) ಎಂಬ ವ್ಯಕ್ತಿ ಶನಿವಾರ ರಾತ್ರಿ ಅಪರಿಚಿತರ ಗುಂಡಿನ ದಾಳಿಗೆ ಗುರಿಯಾಗಿದ್ದರು.
ಸೀತಾಮರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ರಾಜ್ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದಾಳಿಯ ವೇಳೆ ಪಂಕಜ್ ಹೇಗಾದರೂ ಮಾಡಿ ತಪ್ಪಿಸಿ ಕೂಡಲೇ ಆಸ್ಪತ್ರೆ ಸೇರಿದ್ದ. ಆತನ ದೇಹದಲ್ಲಿ ರಕ್ತ ಸೋರುತ್ತಿತ್ತು. ಎದೆ, ಕಾಲುಗಳು, ಕೈಗಳು, ಹೊಟ್ಟೆ, ಕಿಡ್ನಿ, ಗುಲ್ಮ ಹಾಗೂ ಲಿವರ್ ಗಳಿಗೆ ಗುಂಡು ತಗಳಿತ್ತು. ಆದರೂ ಉಸಿರಾಡುತ್ತಿದ್ದರು. ಶ್ವಾಸಕೋಶದಿಂದ ರಕ್ತಸ್ರಾವ ಆಗುತ್ತಿತ್ತು ಎಂದು ವೈದ್ಯ ವರುಣ್ ಕುಮಾರ್ ಮಾಹಿತಿ ನೀಡಿದ್ದಾರೆ. ವೈದ್ಯರು ಕೂಡಲೇ ಶಸ್ತ್ರಚಿಕಿತ್ಸೆಯ ಮೂಲಕ ಆತನನ್ನು ಪ್ರಾಣಾಪಾಯದಿಂದ ಪಾರು ಮಾಡಿದರು.
ಸೀತಾಮರಿ ಲೋಕ ಸಭಾ ಕ್ಷೇತ್ರದಿಂದ ಪಂಕಜ್ ರಿಗೆ ಜೆಡಿಯು ಚುನಾವಣೆಗೆ ಟಿಕೆಟ್ ನೀಡಿತ್ತು. ಆದರೆ ಸಾಕಷ್ಟು ತಯಾರಿ ನಡೆಸಿಲ್ಲ ಎಂದು ಅವರು ಹಿಂದೆ ಸರಿದಿದ್ದರು.
ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಪಂಕಜ್ , ಈ ಹಿಂದೆ ಅಪರಾಧ ದಾಖಲೆ ಹೊಂದಿದ್ದರು ಎಂದು ಎಸ್ಪಿ ಅನಿಲ್ ಕುಮಾರ್ ಹೇಳಿದ್ದಾರೆ.