ಕವನ
ಸಾವು ಸತ್ಯ ಆದರೂ
ಹೇಗೆ ತಾನೆ ಮನಸ್ಸೊಪ್ಪೀತು ಸಂಬಂಧದ
ಈ ಪರೆಯಿಂದ ಕಳಚಿಕೊಳ್ಳಲು?
ನನ್ನವ್ವ ಒಂದೊಂದು ಉಸಿರಿಗೂ
ಉಸಿರುಗಟ್ಟಿ ಹೋರಾಡುತ್ತಿರುವಾಗ-
ಇಲ್ಲಿ ನನ್ನೊಳಗೆ ನನ್ನ ಬಾಲ್ಯ ಗರಿ ಬಿಚ್ಚುತ್ತಿತ್ತು
ಈ ಸಂಬಂಧ ಎಂದು ಪ್ರಾರಂಭವಾಯಿತು?
ನಾನೊಂದು ಅಣುವಾಗಿದ್ದಾಗ
ಒಂದು ಕಣವಾಗಿದ್ದಾಗ
ಬೀಜಾಣುವೊಂದರ ಅಮೂರ್ತ ರೂಪವಾಗಿದ್ದಾಗ
ಅಥವ ಅದಕ್ಕೂ ಮುಂಚೆ-ನಾನೇನೂ ಅಲ್ಲವಾಗಿದ್ದಾಗ?
ಇದಕ್ಕೆ ಆದಿಯೆಲ್ಲಿ? ಅಂತ್ಯವೆಲ್ಲಿ?
ಆಸ್ಪತ್ರೆಯ ಮಂಚದಲ್ಲಂದು
ನನ್ನಾತ್ಮ ನನ್ನ ದೇಹದಿಂದ ಕಳಚಿ ಬೇರ್ಪಡುತ್ತಿತ್ತು
ನನ್ನೊಳಗಿದ್ದ ದಿವ್ಯ ಚೇತನವೊಂದು
ಕುಸಿದು ಬೀಳುತ್ತಿತ್ತು
ನನ್ನನ್ನೇ ನಾನು ಕಳಕೊಳ್ಳುತ್ತಿದ್ದೆ-
ಪ್ರತಿಯೊಂದು ಉಸಿರಲ್ಲೂ ನನ್ನ ಹೃದಯ
ಮೊರೆಯಿಡುತ್ತಿತ್ತು ಆಕೆಯ ಮತ್ತೊಂದು ಉಸಿರಿಗಾಗಿ
ಕಣ್ಣೀರು ಕೋಡಿಯಾಗಿ ಹರಿಯುತ್ತಿತ್ತು
ಪ್ರತಿಯೊಂದು ಬಿಂದಲ್ಲೂ ತುಂಬಿತ್ತು
ನನ್ನ ಬಾಲ್ಯದ ದಿನಗಳ ನೆನಪು ಮತ್ತು
ಆಕೆಯ ಅಪ್ಪುಗೆಯಲ್ಲಿ ಕರಗಿ ನೀರಾದ
ಪ್ರತಿಯೊಂದು ಕ್ಷಣಗಳು-
ಆದರೂ ಅಮ್ಮಾ,
ನಿನ್ನಿಂದ ಕಳಚಿಕೊಳ್ಳಲು ಮಾತ್ರ
ನನಗೆಂದೂ ಸಾಧ್ಯವಾಗಲೇ ಇಲ್ಲ..
ರಹೀಮ್ ಟಿಕೆ