ಹೊಸದಿಲ್ಲಿ: ಮೈದಾನವೊಂದರಲ್ಲಿ ಆಟವಾಡುತ್ತಿದ್ದ ಇಲ್ಲಿನ ದಾರುಲ್ ಉಲೂಮ್ ಫರೀದಿಯಾ ಎಂಬ ಮದ್ರಸಾದ ಎಂಟರ ಹರೆಯದ ವಿದ್ಯಾರ್ಥಿಯೋರ್ವನನ್ನು ಹತ್ಯೆ ನಡೆಸಿರುವ ಘಟನೆ ನಿನ್ನೆ ನಡೆದಿದೆ.

ಮೃತ ವಿದ್ಯಾರ್ಥಿಯನ್ನು ಅಝೀಮ್ ಎಂದು ಗುರುತಿಸಲಾಗಿದ್ದು, ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಹತ್ತರಿಂದ ಹನ್ನೆರಡರ ಹರೆಯದ ನಾಲ್ವರು ಸ್ಥಳೀಯ ಬಾಲಕರನ್ನು ಬಂಧಿಸಿರುವ ಬಗ್ಗೆಯೂ ವರದಿಯಾಗಿದೆ.

ಘಟನೆಯ ಬಗ್ಗೆ ಮಾಹಿತಿ ನೀಡಿರುವ ದಕ್ಷಿಣ ವಿಭಾಗದ ಡಿಸಿಪಿ ವಿಜಯ್ ಕುಮಾರ್, ಘಟನೆಯು ಗುರುವಾರ ಬೆಳಗ್ಗೆ 10 ರ ಸುಮಾರಿಗೆ ನಡೆದಿದ್ದು, ಮದ್ರಸಾದ ಹಾಸ್ಟೆಲ್ ನಲ್ಲಿ ಕಲಿಯುತ್ತಿರುವ ಕೆಲವು ವಿದ್ಯಾರ್ಥಿಗಳು ಮದ್ರಸಾದ ಬಳಿಯಲ್ಲಿರುವ ಖಾಲಿ ಜಾಗದಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ಅಲ್ಲಿಗೆ ಬಂದ ಸ್ಥಳೀಯ ಯುವಕರ ಗುಂಪೊಂದು ಮೈದಾನದ ಇನ್ನೊಂದು ಬದಿಗೆ ಸರಿಯುವಂತೆ ತಿಳಿಸಿದಾಗ ಮದ್ರಸಾ ವಿದ್ಯಾರ್ಥಿಗಳು ನಿರಾಕರಿಸಿದ ಹಿನ್ನೆಲೆಯಲ್ಲಿ ಯುವಕರ ಗುಂಪು ಅಝೀಮ್ ನನ್ನು ದೂರಕ್ಕೆ ತಳ್ಳಿದ ಪರಿಣಾಮ ನೆಲಕ್ಕೆ ಬಿದ್ದದ್ದರಿಂದ ಪ್ರಜ್ಞಾಹೀನನಾದರು ಘಟನಾ ನಂತರ ಮೈದಾನದಲ್ಲಿದ್ದ ಇತರ ವಿದ್ಯಾರ್ಥಿಗಳು ಕೂಡಲೇ ಮದ್ರಸಾಕ್ಕೆ ಓಡಿಹೋಗಿ, ಅಧ್ಯಾಪಕರಿಗೆ ವಿಷಯ ಮುಟ್ಟಿಸಿದ ಬಳಿಕ ಕೂಡಲೇ ಅಝೀಮ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯಿತಾದರೂ ಸಂಜೆಯ ವೇಳೆ ಬಾಲಕ ಮೃತಪಟ್ಟಿರುವ ಬಗ್ಗೆ ಮಾಹಿತಿ ನೀಡಲಾಯಿತು.
ಈ ಘಟನೆಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಸ್ಥಳೀಯ ನಾಲ್ವರು ಯುವಕರನ್ನು ವಶಕ್ಕೆ ತೆಗೆದುಕೊಂಡಿರುವುದಾಗಿ ಪೊಲೀಸ್ ಇಲಾಖೆ ತಿಳಿಸಿದೆ. ಸ್ಥಳೀಯ ಕೆಲವು ನಿವಾಸಿಗಳು ಮದ್ರಸಾ ಹಾಗೂ ಮಸೀದಿಯ ಬಗ್ಗೆ ದ್ವೇಷ ಸಾಧಿಸಲು ಮದ್ರಸಾ ಹಾಗೂ ಮಸೀದಿಯ ಆವರಣದೊಳಗೆ ಖಾಲಿಯಾದ ಮದ್ಯದ ಬಾಟಲಿಗಳನ್ನು ಎಸೆಯುವ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.

Leave a Reply