ಕೊರೊನಾ ಸಾಂಕ್ರಾಮಿಕದೆ ಸಂಕಷ್ಟದ ಸಮಯದಲ್ಲಿ ದೇಶದ ಜನತೆಗೆ ಪೋಲೀಸರ ಮಾನವೀಯ ಮುಖ ಪರಿಚಯವಾಗಿದೆ.
ಅಂಥದ್ದೊಂದು ಘಟನೆ ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಮಾನಪಾರಿ ಎನ್ನುವ ಪಟ್ಟಣದಲ್ಲಿ ನಡೆದಿದ್ದು, ಅಲ್ಲಿಂದ ಏಳು ಕಿ.ಮೀ ದೂರದ ಗ್ರಾಮದ ಮಹಿಳೆಯೊಬ್ಬರಿಗೆ ಲಾಕ್ ಡೌನ್ ನಿರ್ಬಂಧಗಳ ಸಂದರ್ಭದಲ್ಲಿ ಹೆರಿಗೆ ನೋವು ಆರಂಭವಾಗಿದ್ದು, ಗಂಡ ಏಳುಮಲೈ ಪೊಲೀಸರಿಗೆ ದಮ್ಮಯ್ಯ ಗುಡ್ಡೆ ಹಾಕಿ ಜಿಲ್ಲಾ ಆಸ್ಪತ್ರೆಗೆ ಹೇಗೋ ತಲುಪಿಸಲು ಯಶಸ್ವಿಯಾಗುತ್ತಾರೆ. ಆಕೆಗೆ ಸರ್ಜರಿ ಮಾಡಬೇಕು. ಅದಕ್ಕಾಗಿ ಅವರದೇ ಗುಂಪಿನ ಒಂದು ಬಾಟಲ್ ರಕ್ತ ಬೇಕಾಗುತ್ತದೆ ಎಂದು ವೈದ್ಯರು ಹೇಳಿದ ನಂತರ ಮತ್ತೆ ಗಂಡನಿಗೆ ತಳಮಳ ಆರಂಭವಾಯಿತು. ಇಂಥ ಅಸಹಾಯಕ ಪರಿಸ್ಥಿತಿಯಲ್ಲಿ ಆಸ್ಪತ್ರೆಯಿಂದ ಗಂಡ ಹೊರಬಿದ್ದು ಸಹಾಯಕ್ಕಾಗಿ ಅಲೆದಾಡುತ್ತಿದ್ದಾಗ, ಸೈಯದ್ ಅಬುದಾಹಿರ್ ಎನ್ನುವ ಪೇದೆಯಿಂದ ಲಾಕ್‌ಡೌನ್ ನಿಯಮಗಳನ್ನು ಏಕೆ ಮುರಿಯುತ್ತಿದ್ದೀರಿ ಎಂದು ಗದರಿಸುತ್ತಾರೆ.

ಆಗ ಅಸಹಾಯಕ ಏಳುಮಲೈ ತನ್ನ ಅನಿವಾರ್ಯತೆಯನ್ನು ತಿಳಿಸಿದಾಗ, ಅದಕ್ಕೆ ಕರಗಿದ ಅಬುದಾಹಿರ್ ತಾನೇ ರಕ್ತದಾನ ಮಾಡಲು ಮುಂದಾಗಿದ್ದಾರೆ. ಪೊಲೀಸ್ ಸಿಬ್ಬಂದಿಯ ಈ ಕರ್ತವ್ಯ ನಿಷೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಬುದಾಹಿರ್‌ಗೆ ಹತ್ತು ಸಾವಿರ ರೂ. ನಗದು ಬಹುಮಾನ ಕೂಡ ನೀಡಿದ್ದಾರೆ. ಆದರೆ ಆ ಹಣವನ್ನೂ ಕೂಡ ಅಬುದಾಹಿರ್ ಏಳುಮಲೈಗೆ ನೀಡಿ, ಹೆಂಡತಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿಸಿಕೊಂಡು ಹೋಗಲು ನೆರವಾಗಿರುವುದು ಶ್ಲಾಘನೆಗೆ ಒಳಗಾಗಿದೆ.

Leave a Reply