CREATOR: gd-jpeg v1.0 (using IJG JPEG v80), quality = 75

ನಾನೆಂದೆ, ಆಕೆ ಸತ್ತಳು
ಅವರು ಕೇಳಿದರು, ಆಕೆ ಒಬ್ಬಳೇ ಹೊರಗೆ ಹೋಗಿದ್ದಳಾ?
ನಾನೆಂದೆ, ಆಕೆ ಸತ್ತಳು
ಅವರು ಕೇಳಿದರು, ಅವಳು ಯಾವ ರೀತಿಯ ಬಟ್ಟೆ ಧರಿಸಿದ್ದಳು?
ನಾನೆಂದೆ, ಆಕೆ ಸತ್ತಳು
ಅವರು ಮತ್ತೆ ಕೇಳಿದರು, ಅವಳ ಧರ್ಮ ಯಾವುದು, ಮತ ಯಾವುದು? ಯಾವ ಮತದವಳು?
ನಾನು ಹೇಳಿದೆ, ಆಕೆ ಸತ್ತಳು, ಆಕೆಯ ಭರವಸೆ, ಕನಸು, ಭವಿಷ್ಯ, ತಂದೆ, ತಾಯಿ, ಮನುಷ್ಯತ್ವವೇ ಇಡಿಯಾಗಿ ಸತ್ತಿತು…..

ಟರ್ಕಿಯ ಹೆಣ್ಣುಮಗಳೊಬ್ಬರು ಟ್ವಿಟರ್ ನಲ್ಲಿ ಬರೆದ ಸಾಲುಗಳಿವು. ಆಕೆಯೊಬ್ಬಳಲ್ಲ, ಟರ್ಕಿಯ ಸಾವಿರಾರು ಹೆಣ್ಣುಮಕ್ಕಳು ಕಂಬನಿಗೆರೆಯುತ್ತಿದ್ದಾರೆ, ಬೀದಿಗೆ ಬಂದು ಘೋಷಣೆ ಕೂಗುತ್ತಿದ್ದಾರೆ. ಸಾಕಿನ್ನು ನಿಲ್ಲಿಸಿ ಎಂದು ಚೀರುತ್ತಿದ್ದಾರೆ.

ಪಿನಾರ್ ಗುಲ್ಟೆಕಿನ್ ಎಂಬ 27 ವರ್ಷ ವಯಸ್ಸಿನ ಟರ್ಕಿ ಹೆಣ್ಣುಮಗಳು ಮೂಗ್ಲಾ ಎಂಬಲ್ಲಿ ದಾರುಣವಾಗಿ ಹತ್ಯೆಯಾದಳು. ಆಕೆಯ ಮೇಲೆ ಅತ್ಯಾಚಾರವೆಸಗಲಾಯಿತು, ಭೀಕರವಾಗಿ ಥಳಿಸಿ ಕೊಲ್ಲಲಾಯಿತು, ಬ್ಯಾರಲ್ ಒಂದರಲ್ಲಿ ತುರುಕಿ ಬೆಂಕಿ ಹಚ್ಚಲಾಯಿತು, ಕೊನೆಗೆ ಪಳೆಯುಳಿಕೆ ಸಿಗದಂತೆ ಸಿಮೆಂಟು ತುಂಬಲಾಯಿತು. ಪಿನಾರ್ ಐದು ದಿನಗಳಿಂದ ಕಣ್ಮರೆಯಾಗಿದ್ದಳು, ಅವಳ ಸುಟ್ಟ ಅವಶೇಷ ಮಂಗಳವಾರ ಸಿಕ್ಕ ನಂತರವೇ ಅವಳ ಕೊಲೆಯ ಕಥಾನಕ ತೆರೆದುಕೊಂಡಿತು. ಇದೆಲ್ಲ ಮಾಡಿದ್ದು ಮತ್ತ್ಯಾರೂ ಅಲ್ಲ, ಆಕೆಯ ಪ್ರೇಮಿಯೇ. ಇದರಲ್ಲೇನು‌ ವಿಶೇಷ, ಇಂಥ ಹತ್ತಾರು ಪ್ರಕರಣಗಳು ನಮ್ಮಲ್ಲೂ ಆಗುತ್ತವಲ್ಲವೇ ಎಂದು ನೀವು ಕೇಳಬಹುದು. ಅಸಲಿ‌ ವಿಷಯವೇನೆಂದರೆ ಟರ್ಕಿಯಲ್ಲಿ ಇಂಥ ಸಾವುಗಳು ದಿನೇದಿನೇ ಹೆಚ್ಚುತ್ತಲೇ ಇವೆ. ‘ಹೆಣ್ಣು’ ಎಂಬ ಒಂದೇ ಕಾರಣಕ್ಕೆ ಹೆಣ್ಣುಮಕ್ಕಳು ಬಲಿಯಾಗುತ್ತಿದ್ದಾರೆ. ಇದನ್ನು ಟರ್ಕಿ ಮಾದರಿಯ Femicide ಎಂದು ಅಲ್ಲಿನ ಮಹಿಳಾ ಕಾರ್ಯಕರ್ತೆಯರು ಬಣ್ಣಿಸುತ್ತಿದ್ದಾರೆ.

ಕಳೆದ ಆರು ತಿಂಗಳಲ್ಲಿ ಪಿನಾರ್ ಳಂತೆ ಹೆಣ್ಣುದ್ವೇಷಕ್ಕೆ ಬಲಿಯಾದವರ ಸಂಖ್ಯೆ 146, ಕಳೆದ ವರ್ಷ ಹೀಗೆ ಗಂಡಸರ ಕ್ರೌರ್ಯಕ್ಕೆ‌ ಸತ್ತವರು 474. ಕೌಟುಂಬಿಕ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಈ ವರ್ಷದ ಜನವರಿ 1ರಿಂದ 2020ರವರೆಗೆ ದಾಖಲಾಗಿರುವ ಪ್ರಕರಣಗಳ ಸಂಖ್ಯೆ 88,491. ಕೇವಲ ಕೌಟುಂಬಿಕ ದೌರ್ಜನ್ಯಗಳಿಗೆ ಬಲಿಯಾದ ಹೆಣ್ಣುಮಕ್ಕಳ ಸಂಖ್ಯೆ 81. ಕಳೆದ ಹಲವು ವರ್ಷಗಳಿಂದ ಈ ಸಂಖ್ಯೆ ಹೆಚ್ಚುತ್ತಲೇ ಬಂದಿದೆ. ನೋಡುವಷ್ಟು ನೋಡಿ ಟರ್ಕಿಯ ಹೆಣ್ಣುಮಕ್ಕಳು ಬೀದಿಗೆ ಬಂದು ಕೂಗಿಡುತ್ತಿದ್ದಾರೆ. ಹೆಣ್ಣು ಮಕ್ಕಳನ್ನು ರಕ್ಷಿಸಿ ಎಂದು ಹೇಳಿದ್ದು ಸಾಕು, ನಿಮ್ಮ ಗಂಡುಮಕ್ಕಳಿಗೆ ಒಳ್ಳೆಯ ಬುದ್ಧಿ ಕಲಿಸಿ ಎಂದು ಅವರು ಹೇಳುತ್ತಿದ್ದಾರೆ‌.

ಅವರ ಸಿಟ್ಟು ಸಹಜವಾಗಿಯೇ ರೆಸೆಪ್ ಟಾಯ್ಯಿಪ್
ಎರ್ಡೋಗಾನ್ ಮೇಲೆ ತಿರುಗಿದೆ‌. ಟರ್ಕಿಯ ಅಧ್ಯಕ್ಷನಾಗಿ ಅಲ್ಲಿನ ಹೆಣ್ಣುಮಕ್ಕಳ ರಕ್ಷಣೆ ಅವನ‌ ಹೊಣೆಯಲ್ಲವೇ? ಆದರೆ ಎರ್ಡೋಗಾನ್ ಹೇಳುವುದೇ ಬೇರೆ, ಮಹಿಳೆಯರ ಮೇಲಿನ ದೌರ್ಜನ್ಯ ಅನ್ನೋದೆಲ್ಲ ಉತ್ಪ್ರೇಕ್ಷೆ ಕಣ್ರೀ.‌ ಹಾಗೆ ನೋಡಿದರೆ ನಾನು ಈ ಲಿಂಗ ಸಮಾನತೆಯ ಕಾನ್ಸೆಪ್ಟನ್ನೇ ಒಪ್ಪುವುದಿಲ್ಲ ಎನ್ನುತ್ತಾನವನು.

ಅಲ್ಲಿನ ಮಹಿಳೆಯರು ಪ್ರತಿಭಟನೆಗೆ ಇಳಿದಿದ್ದಾರೆ. ಇನ್ನು ಇದನ್ನೆಲ್ಲ ಸಹಿಸಿಕೊಂಡಿರಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ.‌ ಪ್ರತಿನಿತ್ಯ ಕೊಲೆಗೀಡಾಗುತ್ತಿರುವ ಟರ್ಕಿಯ ಪ್ರತಿ ತಾಯಂದಿರು, ಅಕ್ಕತಂಗಿಯರಿಗೆ ನ್ಯಾಯ ಸಿಗಲೇಬೇಕು. ಇನ್ನೆಷ್ಟು Femicide ಗಳು ನಡೆಯಬೇಕು? ಟರ್ಕಿಯಲ್ಲಿ ಹೆಣ್ಣು ಮಕ್ಕಳು ಬದುಕುವ ಹಾಗೆಯೇ ಇಲ್ಲವೇ ಎಂದು ಅವರು ಪ್ರಶ್ನಿಸುತ್ತಿದ್ದಾರೆ.

ಟರ್ಕಿ ಯಾಕೆ ಹೀಗಾಗಿ ಹೋಯಿತು? ಅದು ಇಸ್ಲಾಂ ಬಹುಸಂಖ್ಯಾತರ ದೇಶವಾದರೂ ಇಸ್ಲಾಮಿಕ್ ದೇಶವಲ್ಲ. ಧರ್ಮನಿರಪೇಕ್ಷತೆ, ಸಹಬಾಳ್ವೆ, ಆಧುನಿಕತೆಯನ್ನು ಒಪ್ಪಿ, ಅಪ್ಪಿ, ಅನುಸರಿಸಿ‌ ನಡೆಯುತ್ತಿರುವ ಪ್ರಗತಿಪರ ದೇಶ. ತಾನು ಅನುಸರಿಸುವ ತತ್ತ್ವಗಳನ್ನು ಅದು ಕೆಮಲಿಸಂ (Kemalism) ಎಂದು ಕರೆಯುತ್ತದೆ. ಇದನ್ನು ಅಟಟರ್ಕಿಸಂ ಎಂದೂ ಕರೆಯುತ್ತಾರೆ. (ಟರ್ಕಿಯ ನುಡಿಯಲ್ಲಿ ಆರು ಬಾಣಗಳು). ರಿಪಬ್ಲಿಕ್ ಆಫ್ ಟರ್ಕಿಯಲ್ಲಿ ಈ ಕೆಮಲಿಸಂ ಅನ್ನು ಅನುಷ್ಠಾನಕ್ಕೆ ತಂದಿದ್ದು ಮುಸ್ತಾಫಾ ಕೆಮಲ್ ಅಟಟರ್ಕ್. ಆಟೋಮನ್ ತುರುಷ್ಕರ ಕಾಲಘಟ್ಟದ ನಂತರ ಮುಸ್ತಾಫಾ ಟರ್ಕಿಯನ್ನು ಉದಾರವಾದಿ ರಾಷ್ಟ್ರವನ್ನಾಗಿ ಬದಲಾಯಿಸಿದರು. ಜಾತ್ಯತೀತತೆಯ ತಳಹದಿಯ ಪ್ರಜಾಪ್ರಭುತ್ವ ನೆಲೆಗೊಳಿಸಿದರು. ಮಕ್ಕಳಿಗೆಲ್ಲ ಉಚಿತ ಶಿಕ್ಷಣ, ವಿಜ್ಞಾನಕ್ಕೆ ಒತ್ತು ನೀಡುವುದು ಸೇರಿದಂತೆ ಎಲ್ಲ ಬಗೆಯ ಪ್ರಗತಿಪರ ನಿಲುವುಗಳನ್ನು ಜಾರಿಗೊಳಿಸಲಾಯಿತು. ಯೂರೋಪ್ ಮತ್ತು ಏಷಿಯಾ ಖಂಡಗಳು ಸಂಧಿಸುವ ಭಾಗದಲ್ಲಿರುವ (ಯುರೇಷಿಯಾ) ಟರ್ಕಿ ಯೂರೋಪಿಯನ್ ದೇಶಗಳಿಗೆ ಸರಿಸಮಾನವಾಗಿ ಬೆಳೆಯುತ್ತ ಹೋಯಿತು.

ಒಂದು ವಿಶೇಷವೆಂದರೆ 2011ರಲ್ಲಿ ಟರ್ಕಿಯ ಇಸ್ತಾಂಬುಲ್ ನಲ್ಲಿ ಒಂದು ಐತಿಹಾಸಿಕ ಅಧಿವೇಶನ ನಡೆಯಿತು. ಸುಮಾರು ನಲವತ್ತು ದೇಶಗಳು ಈ ಅಧಿವೇಶನದಲ್ಲಿ ಪಾಲ್ಗೊಂಡು ಅಂತಾರಾಷ್ಟ್ರೀಯ ಒಪ್ಪಂದವೊಂದಕ್ಕೆ ಸಹಿಹಾಕಿದವು. ಇದನ್ನು ಕೌನ್ಸಿಲ್ ಆಫ್ ಯೂರೋಪಿಯನ್ ಕನ್ವೆನ್ಷನ್ ಅಥವಾ ಇಸ್ಟಾಂಬುಲ್ ಒಡಂಬಡಿಕೆ ಎಂದು ಕರೆಯಲಾಗುತ್ತದೆ. ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಕೌಟುಂಬಿಕ ಹಿಂಸಾಚಾರಗಳ ವಿರುದ್ಧ ಕಠಿಣ ನಿಲುವುಗಳನ್ನು ತೆಗೆದುಕೊಳ್ಳಲು ನಡೆಸಲಾದ ಅಧಿವೇಶನ ಇದು. ಆತಿಥೇಯ ರಾಷ್ಟ್ರ ಟರ್ಕಿ ಐತಿಹಾಸಿಕ ಒಪ್ಪಂದಕ್ಕೆ ಮೊದಲ ಸಹಿಯನ್ನು ಹಾಕಿತು. ಆದರೆ ಕ್ರೂರ ವ್ಯಂಗ್ಯ ನೋಡಿ, ಈಗ ಯಾವ ದೇಶದಲ್ಲಿ ಇಂಥ ಅಧಿವೇಶನ ನಡೆಯಿತೋ ಅದೇ ದೇಶದಲ್ಲಿ ಹೆಣ್ಣುಮಕ್ಕಳ ದಾರುಣ ಹತ್ಯೆಗಳು ನಡೆಯುತ್ತಿವೆ ಮತ್ತು ಇಸ್ತಾಂಬುಲ್ ಒಡಂಬಡಿಕೆಯನ್ನು ಸರಿಯಾಗಿ ಓದಿಕೊಳ್ಳಿ ಎಂದು ಅಲ್ಲಿನ ಮಹಿಳೆಯರು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ.

ಇದೆಲ್ಲ ಯಾಕಾಯಿತು? ಹೇಗಾಯಿತು ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೋದರೆ ಮತ್ತೆ ಬೆರಳು ಅಲ್ಲಿನ ಅಧ್ಯಕ್ಷ ಎರ್ಡೋಗಾನ್ ಕಡೆಯೇ ತೋರಿಸುತ್ತದೆ. ಎರ್ಡೋಗಾನ್ ಪಕ್ಷವಾದ ಎಕೆಪಿ ( ಜಸ್ಟೀಸ್ ಅಂಡ್ ಡೆವೆಲಪ್ಮೆಂಟ್ ಪಾರ್ಟಿ) ಉಪಾಧ್ಯಕ್ಷ ಖುರ್ತುಲ್ಮಸ್ ಇತ್ತೀಚಿಗೆ ಮಾತನಾಡುತ್ತ ಟರ್ಕಿಯು ಇಸ್ತಾಂಬುಲ್ ಒಪ್ಪಂದದಿಂದ ಹೊರಗೆ ಬರಬೇಕಿದೆ ಎಂದು ಹೇಳಿದರು. ನಿಶ್ಚಿತವಾಗಿ ಅದು ಸರ್ಕಾರದ ಮಾತು. ಈ ಹೇಳಿಕೆಯನ್ನು ತೀವ್ರವಾಗಿ ಖಂಡಿಸುತ್ತಿರುವ ಸಾಮಾಜಿಕ ಕಾರ್ಯಕರ್ತರು, ಟರ್ಕಿಯಲ್ಲಿ ಹೆಣ್ಣುಮಕ್ಕಳ ಮೇಲಿನ ಪುರುಷರ ದೌರ್ಜನ್ಯ ಮತ್ತು ಹತ್ಯಾ ಸರಪಳಿಯನ್ನು ಕಾನೂನುಬದ್ಧಗೊಳಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ಹೇಳುತ್ತಿದ್ದಾರೆ.

ಎರ್ಡೋಗಾನ್ ಯಾವುದಕ್ಕೂ ತಲೆ ಕೆಡಿಸಿಕೊಂಡಿಲ್ಲ. ಟರ್ಕಿ ಈಗ ಕವಲುದಾರಿಯಲ್ಲಿ ಬಂದುನಿಂತಿದೆ. ಅದು ಕೇವಲ ಕೆಟ್ಟ ಕಾರಣಗಳಿಗೆ ಸುದ್ದಿಯಾಗುತ್ತಿದೆ. ನೆರೆಯ ಸಿರಿಯಾ‌ ಬಿಕ್ಕಟ್ಟಿನಲ್ಲಿ ಅದರ ಪಾತ್ರ ದೊಡ್ಡದು, ಲಿಬಿಯಾದ ಒಳಗೂ ಟರ್ಕಿ ಸೈನ್ಯ ಕಾಲಿಟ್ಟಿದೆ. ಎಂಟು‌ ದೇಶಗಳ ಗಡಿಯನ್ನು ಹೊಂದಿರುವ ಟರ್ಕಿ ಎಲ್ಲ ದೇಶಗಳ ಒಳಗೂ ಒಂದಲ್ಲ ಒಂದು ಸಂಘರ್ಷದ ಪರೋಕ್ಷ ಅಥವಾ ಪ್ರತ್ಯಕ್ಷ ಭಾಗವಾಗಿದೆ. ಇದೆಲ್ಲದರ ನಡುವೆ ಎರ್ಡೋಗಾನ್ ಸರ್ಕಾರ LGBT ಸಮುದಾಯಗಳನ್ನು ಹತ್ತಿಕ್ಕುವ ಪ್ರಯತ್ನಗಳನ್ನು ನಡೆಸುತ್ತಿದೆ. ಗೇ ಸಂಬಂಧಿತ ಸಿನಿಮಾಗಳಿವೆ ಎಂಬ ಕಾರಣಕ್ಕೆ Netflix ಬ್ಯಾನ್ ಮಾಡುತ್ತಿದೆ. ಸಾಮಾಜಿಕ ಜಾಲತಾಣಗಳ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಸೆನ್ಸಾರ್ ಶಿಪ್ ಆರಂಭಿಸುತ್ತಿದೆ. ಹಾಗೆ ನೋಡಿದರೆ ನೆರೆಯ ಜೋರ್ಡಾನ್ ಮತ್ತು ಪ್ಯಾಲೆಸ್ಟೈನ್ ಗಳಲ್ಲೂ ಮಹಿಳೆಯರ ಮೇಲಿನ ಅತ್ಯಾಚಾರ, ಹತ್ಯೆಗಳು ಹೆಚ್ಚುತ್ತಿವೆ. ಆದರೆ ಟರ್ಕಿಗೆ ಇದ್ದ ಇಮೇಜೇ ಬೇರೆಯಲ್ಲವೇ? ಹೀಗಾಗಿಯೇ ಟರ್ಕಿಯ ಬೆಳವಣಿಗೆಗಳು ಹೆಚ್ಚು ಆಘಾತ ಮೂಡಿಸುತ್ತಿವೆ. ಟರ್ಕಿಗೆ ಅದರ ಉದಾರವಾದಿ ನಿಲುವುಗಳಿಂದಾಗಿ ಪ್ರಾಪ್ತವಾಗಿದ್ದ ಜಾಗತಿಕ ಮೌಲ್ಯ ಕುಸಿಯುತ್ತಾ ಬರುತ್ತಿದೆ.

ಇಷ್ಟೆಲ್ಲ ಹೇಳಿದ ಮೇಲೆ ಹಾಜಿಯಾ ಸೋಫಿಯಾ‌ ಚರ್ಚ್ ವಿಷಯ ಹೇಳದೇ ಹೋದರೆ ಈ ಲೇಖನ ಅಪೂರ್ಣವಾಗಿಬಿಡುತ್ತದೆ. ಹಾಜಿಯಾ ಸೋಫಿಯಾ ಎಂದರೆ ಪವಿತ್ರ ಜ್ಞಾನ.‌ 1453ರಲ್ಲಿ ಹಾಜಿಯಾ ಸೋಫಿಯಾ ಚರ್ಚ್ ಅನ್ನು ಆಗಿನ ಆಟೋಮನ್ ದೊರೆ ಮಸೀದಿಯನ್ನಾಗಿ ಪರಿವರ್ತಿಸಿದ.‌ 1923ರಲ್ಲಿ ಟರ್ಕಿ ಆಧುನಿಕತೆಗಳಿಗೆ ತೆರೆದುಕೊಂಡು, ಧರ್ಮ‌ನಿರಪೇಕ್ಷ ದೇಶವಾಗಿ ಬದಲಾಯಿತಲ್ಲ. ಕೆಮಲಿಸಂ ಪ್ರತಿಪಾದಕರಿಗೆ ಮಸೀದಿಯಾಗಿ ಬದಲಾದ ಚರ್ಚ್ ಒಂದು ಕಳಂಕದಂತೆ‌ ತೋರಿತು. ಹೀಗಾಗಿ 1936ರಲ್ಲಿ ಇದನ್ನು ಮ್ಯೂಸಿಯಂ ಆಗಿ ಬದಲಾಯಿಸಿದರು. ಟರ್ಕಿಯ ಆಧುನಿಕ‌ ವಿಚಾರಧಾರೆ-ಸಹಬಾಳ್ವೆಗಳ ಪ್ರತೀಕದಂತಿತ್ತು ಈ ಮ್ಯೂಸಿಯಂ. ಆದರೆ ಈಗ ಮ್ಯೂಸಿಯಂ ಅನ್ನು ಮತ್ತೆ ಮಸೀದಿಯನ್ನಾಗಿ ಪರಿವರ್ತಿಸುವುದಾಗಿ ಎರ್ಡೋಗಾನ್ ಹೇಳಿದ. ವಿಶ್ವಸಮುದಾಯ ಇದನ್ನು ಟೀಕಿಸಿತು. ಎರ್ಡೋಗಾನ್ ಇದು ನಮ್ಮ ಆಂತರಿಕ ವಿಷಯ, ಬೇರೆಯವರು ಮೂಗು ತೂರಿಸುವಂತಿಲ್ಲ ಎಂದ.

ಇದೆಲ್ಲ ಏನನ್ನು ಸೂಚಿಸುತ್ತಿವೆ ಎಂದರೆ ಎರ್ಡೋಗಾನ್ ಮತ್ತವನ AKP ಪಕ್ಷ ನಿಧಾನವಾಗಿ ಟರ್ಕಿಯನ್ನು ಮೂಲಭೂತವಾದಿ ದೇಶವನ್ನಾಗಿ ಬದಲಾಯಿಸುತ್ತಿರುವ ಹಾಗೆ ಕಾಣುತ್ತಿದೆ. ಆಟೋಮನ್ ತುರುಷ್ಕರ ಕಾಲದಲ್ಲಿ ಅರ್ಧ ಜಗತ್ತನ್ನೇ ಗೆದ್ದುಕೊಂಡಿತ್ತು ಟರ್ಕಿ. ಬ್ರಿಟಿಷರ ವಿರುದ್ಧ ಅಲ್ಲಿನ ಖಲೀಫರು ನಡೆಸಿದ ಚಳವಳಿ ಐತಿಹಾಸಿಕ. ಅದನ್ನು ಬೆಂಬಲಿಸಿಯೇ ಮಹಾತ್ಮ ಗಾಂಧೀಜಿ ಇಂಡಿಯಾದಲ್ಲಿ ಖಿಲಾಫತ್ ಚಳವಳಿ ಆರಂಭಿಸಿದ್ದು. ಟರ್ಕಿಗೆ ಅದರದ್ದೇ ಆದ ವೈಭವದ ಇತಿಹಾಸವಿದೆ. ಶೇ. 99ರಷ್ಟು ಮುಸ್ಲಿಮರೇ ಇದ್ದರೂ, ತನ್ನನ್ನು ತಾನು ಧರ್ಮನಿರಪೇಕ್ಷ ದೇಶ ಎಂದು ಕರೆದುಕೊಂಡ ಹೆಮ್ಮೆ ಟರ್ಕಿಯದು. ಎರ್ಡೋಗಾನ್ ಆ ಹೆಮ್ಮೆಯನ್ನೇ ಕತ್ತರಿಸಿ ಹಾಕುತ್ತಿದ್ದಾನೆ.

ಕೊನೇದಾಗಿ ಒಂದು ಮಾತು, ಎರ್ಡೋಗಾನ್ ಹೆಸರು ಇರುವ ಜಾಗದಲ್ಲಿ ನೀವು ರಣಬೇಟೆಗಾರನ ಹೆಸರು ಓದಿಕೊಂಡು ಇನ್ನೊಮ್ಮೆ ಈ‌ ಲೇಖನ‌ ಓದಿಕೊಳ್ಳಿ, ಅಂಥ ವ್ಯತ್ಯಾಸವೇನೂ ಆಗದು. ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.‌ ದೇಶ ಕಟ್ಟುವುದು ಕಷ್ಟ, ಒಡೆದುಹಾಕುವುದು ಎಷ್ಟು ಸುಲಭ ನೋಡಿ.

ಈ ನಡುವೆ ಈ ಸುಂದರ ಹುಡುಗಿ ಪಿನಾರ್ ದೇಶದ ಆತ್ಮಸಾಕ್ಷಿಯನ್ನು ಸತ್ತ‌ಮೇಲೆ ಬಡಿದೆಬ್ಬಿಸುತ್ತಿದ್ದಾಳೆ.‌ ಟರ್ಕಿ ತನ್ನತನ ಉಳಿಸಿಕೊಂಡೀತೇ? ಅಂದಹಾಗೆ ಈ ಚಪ್ಪಲಿಗಳ ಸಾಲು ಏನು ಗೊತ್ತೆ? ಟರ್ಕಿಯಲ್ಲಿ ದೌರ್ಜನ್ಯಕ್ಕೆ ಒಳಗಾಗಿ ಸತ್ತ ನೂರಾರು ಹೆಣ್ಣುಮಕ್ಕಳನ್ನು ಪ್ರತಿನಿಧಿಸಲು ಈ ಚಪ್ಪಲಿಗಳನ್ನು ಜೋಡಿಸಿಟ್ಟು ಪ್ರತಿಭಟಿಸಲಾಗುತ್ತಿದೆ.

– ದಿನೇಶ್ ಕುಮಾರ್ ಎಸ್.ಸಿ.

Leave a Reply