ಕೇರಳದ ಮಲಪ್ಪುರಂನ ಸಮೀಪದ ಕಕ್ಕೂರ್ ನಿವಾಸಿ ಮೊಹಮ್ಮದ್ ಆಶಿಕ್ ಒಂದು ಹೆಣ್ಣು ಮಗುವಿನ ತಂದೆ. ಆಶಿಕ್ ಅವರ ತಂದೆ ಕಳೆದ ಎರಡು ವರ್ಷಗಳ ಹಿಂದೆ ಕ್ಯಾನ್ಸರ್‌ನಿಂದ ತೀರಿ ಹೋಗಿದ್ದರು. ಆಶಿಕ್ ಅವರ ಸಹೋದರಿಯೊಬ್ಬರು ರೋಗದಿಂದ ನಡೆಯಲಾರದೆ ಹಾಸಿಗೆ ಹಿಡಿದಿದ್ದಾರೆ. ಆಶಿಕ್ ತನ್ನ ತಂದೆಯ ಕ್ಯಾನ್ಸರ್ ರೋಗದ ಚಿಕಿತ್ಸೆಗೆ ಬ್ಯಾಂಕ್‌ನಲ್ಲಿ ಸಿಕ್ಕಾಪಟ್ಟೆ ಸಾಲ ಮಾಡಿದ್ದರು. ತಂದೆಯ ಮರಣದ ನಂತರ ಆಶಿಕ್ ಗಲ್ಪ್‌ಗೆ ಹೋಗಿದ್ದು, ತನ್ನ ತಂದೆಯ ಚಿಕಿತ್ಸೆಗೆ ಮಾಡಿದ್ದ ಸಾಲವನ್ನು ತೀರಿಸುವ ಗುರಿಯನ್ನು ಹೊಂದಿದ್ದರು. ಎಲ್ಲವೂ ಸುಖಕರವಾಗಿ ಸಾಗುತ್ತಿದ್ದಾಗ, ಆಶಿಕ್ ಕುಟುಂಬಕ್ಕೆ ಬರಸಿಡಿಲೊಂದು ಬಂದೆರಗಿತು. ಅದು ಆಶಿಕ್ ರ ಮರಣ. ಕಳೆದ ಸೆಪ್ಟಂಬರ್ ತಿಂಗಳಲ್ಲಿ ಆಶಿಕ್ ತನ್ನ ರೂಮಿನಲ್ಲಿ ನಿಗೂಢವಾಗಿ ಸಾವಿಗೀಡಾಗಿದ್ದರು. ಆಶಿಕ್‌ನ ಮರಣದೊಂದಿಗೆ ಆಶಿಕ್‌ನ ಪುಟ್ಟ ಸಂಸಾರ ಬೀದಿ ಪಾಲಾಗುವ ಸ್ಥಿತಿಗೆ ಬಂತು. ಇತ್ತ ಮನೆಯಲ್ಲಿ ದುಡಿಯುವವರು ಯಾರೂ ಇಲ್ಲ. ಅದರ ಮೇಲೆ ಬ್ಯಾಂಕ್ ಸಾಲ. 17 ಲಕ್ಷದ ಲೋನ್ ಬಡ್ಡಿ ಸಮೇತ ಪಾವತಿ ಮಾಡಬೇಕೆಂದು ಇತ್ತೀಚೆಗೆ ಬ್ಯಾಂಕ್ ಅಧಿಕಾರಿಗಳು ಆಶಿಕ್ ಕುಟುಂಬಕ್ಕೆ ನೋಟೀಸ್ ಜಾರಿ ಮಾಡಿದ್ದರು.

ಅಸಹಾಯಕ ಹೆಣ್ಣುಮಗಳು ಆಶಿಕ್ ಪತ್ನಿ ಏನು ಮಾಡಲು ಸಾಧ್ಯ. ಆಕೆ ತನ್ನ ಕೈಲಾದ ಪ್ರಯತ್ನ ಮಾಡಿ ತನ್ನ ತವರಿನಿಂದಲೂ ಹಣ ಹೊಂದಿಸಲು ಪ್ರಯತ್ನ ಪಟ್ಟರು. ಆದರೆ ಅವರ ಪ್ರಯತ್ನವೆಲ್ಲ ವಿಫಲವಾಯಿತು. ಬ್ಯಾಂಕ್ ಹಣ ಪಾವತಿಸದಿದ್ದರೆ ಮನೆ ಬಿಟ್ಟು ಹೋಗಿ ಎಂದು ಆಜ್ಞೆ ಮಾಡಿತು.

ಕೊನೆಗೆ ಎಲ್ಲಾ ಪ್ರಯತ್ನಗಳು ವಿಫಲವಾಗಿ, ಕುಟುಂಬವು ಬೀದಿಪಾಲಾಗುವ ಹಂತದಲ್ಲಿರುವಾಗ ಆಶಿಕ್ ತಾಯಿ ಕಣ್ಣಿರು ಸುರಿಸಿ ಊರವರ ಸಹಾಯ ಬೇಡುತ್ತಿದ್ದರು. ಸ್ಥಳೀಯ ಸಮಾಜ ಸೇವಕರೊಬ್ಬರು ಈ ವಿಚಾರವನ್ನು ಕೇರಳ ಮೂಲದ ದುಬೈ ಉದ್ಯಮಿ ಎಂ.ಎ.ಯೂಸುಫ್ ಅಲಿ ಅವರ ಗಮನಕ್ಕೆ ತಂದರು.

ಯೂಸುಫ್ ಅಲಿಯವರು ಕೂಡಲೇ ಸ್ಥಳೀಯರನ್ನು ಸಂಪರ್ಕಿಸಿ ಬ್ಯಾಂಕ್ ಅಧಿಕಾರಿಗಳ ಜೊತೆ ಮಾತನಾಡಿ, ಆಶಿಕ್ ಕುಟುಂಬದ ಸಂಪೂರ್ಣ ಸಾಲವನ್ನು ತಾನೇ ತೀರಿಸುವುದಾಗಿ ಹೇಳಿ, ರಾತ್ರಿ ಬೆಳಗಾಗುವುದರೊಳಗೆ ಅಸಹಾಯಕ ಕುಟುಂಬವೊಂದನ್ನು ಮಹಾ ಸಂಕಟದಿಂದ ರಕ್ಷಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಆಶಿಕ್ ಪತ್ನಿ, “ಈ ರಮದಾನ್ ತಿಂಗಳಲ್ಲಿ ಯೂಸುಫ್ ಅಲಿಯವರನ್ನು ಅಲ್ಲಾಹು ನಮ್ಮ ಸಹಾಯಕ್ಕೆ ಕಳುಹಿಸಿದ್ದಾನೆ. ಅವರಿಗೆ ಹೇಗೆ ಕೃತಜ್ಞತೆ ಸಲ್ಲಿಸಬೇಕು ಎಂದು ನನಗೆ ತಿಳಿಯುತ್ತಿಲ್ಲ. ನಮ್ಮ ಪ್ರಾರ್ಥನೆಯಲ್ಲಿ ಅವರನ್ನು ನಾವು ಯಾವತ್ತೂ ಮರೆಯಲ್ಲ” ಎಂದು ಹೇಳಿದರು.

ಎಂ.ಎ. ಯೂಸುಫ್ ಅಲಿಯವರು ಅಬೂಧಾಬಿ ಮೂಲದ ಲುಲು ಗ್ರೂಪ್ ಅಧ್ಯಕ್ಷರಾಗಿದ್ದು, ಯೂಸುಫ್ ಅಲಿಯವರು ಅಸಹಾಯಕರ ಸಹಾಯಕ್ಕಾಗಮಿಸುತ್ತಿರುವುದು ಇದು ಮೊದಲ ಬಾರಿ ಏನಲ್ಲ, ಈ ಹಿಂದೆ ಕೇರಳದಲ್ಲಿ ನೆರೆ ಬಂದಿದ್ದಾಗ ಸುಮಾರು 28 ಕೋಟಿಯಷ್ಟು ಹಣವನ್ನು ನೀಡಿ ಸಹಾಯಮಾಡಿದ್ದರು.

Leave a Reply