ಕೊಚ್ಚಿ: ಕ್ರೈಸ್ತ ಸನ್ಯಾಸಿನಿಯರ ಲೈಂಗಿಕ ಕಿರುಕುಳ ದೂರಿನಲ್ಲಿ ಜಲಂಧರ್ ಮಾಜಿ ಬಿಷಪ್ ಫ್ರಾಂಕೊ ಮುಳಯ್ಕಲ್‍ರ ಬಂಧನ ತುಂಬಾ ನೋವುಂಟು ಮಾಡಿದೆ ಎಂದು ಕೇರಳ ಕ್ಯಾಥೊಲಿಕ್ ಬಿಷಪ್ ಕೌನ್ಸಿಲ್(ಕೆಸಿಬಿಸಿ) ಹೇಳಿದೆ. ದೂರು ನೀಡಿ ಭಗಿನಿಯನ್ನಾಗಲಿ , ಆರೋಪಕ್ಕೆ ಗುರಿಯಾಗಿರುವ ಬಿಷಪ್‍ರನ್ನಾಗಲಿ ಬೆಂಬಲಿಸುವುದಿಲ್ಲ ಎಂದೂ ಪತ್ರಿಕಾ ಹೇಳಿಕೆಯಲ್ಲಿ ಕೆಸಿಬಿಸಿ ತಿಳಿಸಿದೆ.

ಬಿಷಪ್ ಬಂಧನಾಗ್ರಹಿಸಿ ಕ್ರೈಸ್ತ ಭಗಿನಿಯರು ನಡೆಸಿದ ಹೋರಾಟದಲ್ಲಿ ಭಾಗವಹಿಸಿದ್ದು, ಕ್ರೈಸ್ತ ಸನ್ಯಾಸಿ ಮಹಿಳೆಯರು ಮತ್ತು ವೈದಿಕ ಸಭೆಯ ಹಿತಕ್ಕೆ ಹಾಗೂ ಸನ್ಯಾಸ ನಿಯಮಕ್ಕೆ ವಿರುದ್ಧವಾಗಿದೆ. ಹೋರಾಟ ಸಭೆಯ ಶತ್ರುಗಳಿಗೆ ಮತ್ತು ಕ್ಯಾಥೊಲಿಕ್ ಅಧಿಕಾರಿಗಳು ಮತ್ತು ಕಾರ್ಯಕ್ರಮಗಳನ್ನು ಬಹಿರಂಗವಾಗಿ ಅವಹೇಳನ ಮಾಡಲು ಅವಕಾಶ ಮಾಡಿಕೊಟ್ಟಿದೆ. ಯಾವುದೇ ಹೆಸರಿನಲ್ಲಿ ಪ್ರತಿಭಟನೆ ನಡೆಸಿದರೂ ಅಂಗೀಕರಿಸಲು ಸಾಧ್ಯವಿಲ್ಲ.

ಅಪರಾಧ ಸಾಬೀತಾದರೆ ಮಾತ್ರವೇ ಈ ವಿಷಯದಲ್ಲಿ ನಿಲುವು ಸ್ವೀಕರಿಸಲಾಗುವುದು. ಆರೋಪ ಕೋರ್ಟಿನಲ್ಲಿ ಸಾಬೀತುಗೊಳ್ಳಲಿ. ನಿರಪರಾಧಿಯಾಗಿದ್ದರೆ ರಕ್ಷೆ ಹೊಂದಲಿ, ಅಪರಾಧಿಯಾಗಿದ್ದರೆ ಶಿಕ್ಷೆಗೊಳಗಾಗಲಿ. ಓರ್ವ ಬಿಷಪ್ ಮೇಲೆ ಬಂದ ಆರೋಪಕ್ಕಾಗಿ ಇತರ ವೈದಿಕರನ್ನು ಆಕ್ಷೇಪಿಸುವುದು ಸರಿಯಲ್ಲ ಎಂದು ಕೆಸಿಬಿಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

Leave a Reply