ರೈಲ್ವೆ ಹಳಿ ದಾಟುತ್ತಿದ್ದ ಮೂವರು ಮಹಿಳೆಯರನ್ನು ಆರ್ಪಿಎಫ್ ಕಾನ್ಸ್ಟೇಬಲ್ ಜಗ್ಬೀರ್ ಸಿಂಗ್ ರಾಣಾ ಕಾಪಾಡದಿದ್ದರೆ ಆ ಮೂವರು ಮಹಿಳೆಯರು ಕಲ್ಕಾ ಶತಾಬ್ದಿ ಎಕ್ಸ್ಪ್ರೆಸ್ನಡಿಗೆ ಬಿದ್ದು ದಾರುಣವಾಗಿ ಸಾವನ್ನಪ್ಪುತ್ತಿದ್ದರು. ಆ ಮೂವರು ಮಹಿಳೆಯರನ್ನು ರಕ್ಷಿಸಿದ ಆ ಕಾನ್ಸ್ಟೇಬಲ್ ರೈಲಿಗೆ ಡಿಕ್ಕಿಯಾಗಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದರು. ಇತರ ಕಾನ್ಸ್ಟೇಬಲ್ ಗಳ ಜೊತೆ ರಾಣಾ ಆ ಪ್ರದೇಶದಲ್ಲಿ ಗಸ್ತು ನಡೆಸುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. 9:45 ರ ವೇಳೆಗೆ ಅಲ್ಲಿ ಕಳ್ಳತನ ಮತ್ತು ಇತರ ಅಪರಾಧ ಕೃತ್ಯಗಳನ್ನು ನಿಯಂತ್ರಿಸಲು ಗಸ್ತು ನಡೆಸಲಾಗುತ್ತಿತ್ತು ಎಂದು ಡಿ.ಸಿ.ಪಿ (ರೈಲ್ವೆ) ಡಿ.ಕೆ. ಗುಪ್ತಾ ಹೇಳಿದರು. ರೈಲ್ವೆ ಹಳಿ ದಾಟುತ್ತಿದ್ದ ಮಹಿಳೆಯರ ಎದುರಿಗೆ ವೇಗವಾಗಿ ಬರುತ್ತಿದ್ದ ರೈಲಿನ ಬಗ್ಗೆ ಎಚ್ಚರಿಕೆ ನೀಡಿದರೂ ಅಲ್ಲಿನ ಶಬ್ದದಿಂದ ಮಹಿಳೆಯರಿಗೆ ಕೇಳಿಸಿಕೊಳ್ಳಲಿಲ್ಲ. ರಾಣಾ ಓಡಿ ಹೋಗಿ ಮಹಿಳೆರನ್ನು ಪಕ್ಕಕ್ಕೆ ದೂಡಿದರು ಮತ್ತು ಸ್ವತಃ ರೈಲಿನಡಿಗೆ ಬಿದ್ದು ಸಾವನ್ನಪ್ಪಿದರು. ಮೂಲತಃ ಹರ್ಯಾಣದವರಾಗಿದ್ದ ರಾಣಾ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

Leave a Reply