ಅಂಕಾರ: ನೆದರ್ಲೆಂಡ್ನಲ್ಲಿ ಇಸ್ಲಾಮ್ ವಿರೋಧಿ ಡಚ್ ಸಂಸದ ಗಿರ್ಟ್ ವಿಲ್ಡಸ್ ಇಸ್ಲಾಮ್ ಧರ್ಮದ ಪ್ರವಾದಿ ಮುಹಮ್ಮದ್(ಸ)ರ ಕಾರ್ಟೂನು ಸ್ಪರ್ಧೆ ಏರ್ಪಡಿಸುವುದಾಗಿ ಕರೆ ನೀಡಿದ ಬಳಿಕ ಜಗತ್ತಿನಾದ್ಯಂತ ಮುಸ್ಲಿಮರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದಲ್ಲಿ ಈ ಕಾರ್ಯಕ್ರಮದ ವಿರುದ್ಧ ಭಾರೀ ವಿರೋಧ ವ್ಯಕ್ತವಾಗಿದೆ.
ಪಾಕಿಸ್ತಾನ ಸರಕಾರ ನೆದರ್ಲೆಂಡ್ ರಾಯಭಾರಿಯನ್ನು ಕರೆಯಿಸಿಕೊಂಡು ತನ್ನ ವಿರೋಧವನ್ನು ವ್ಯಕ್ತಪಡಿಸಿದೆ. ಪಾಕಿಸ್ತಾನದ ವಿದೇಶ ಸಚಿವ ಶಾ ಮೆಹಮೂದ್ ಕುರೇಶಿ ಒಐಸಿ ಪ್ರಧಾನ ಕಾರ್ಯದರ್ಶಿಗೆ ಒಂದು ಪತ್ರ ಬರೆದು ತುರ್ತು ಸಭೆ ಕರೆಯುವಂತೆ ಆಗ್ರಹಿಸಿದ್ದಾರೆ. ಪಾಕಿಸ್ತಾನದ ಬೇಡಿಕೆಯನ್ನು ಟರ್ಕಿ ಬೆಂಬಲಿಸಿದೆ.
ಟರ್ಕಿ ಹಾಗೂ ಪಾಕಿಸ್ತಾನ ಒಐಸಿಯ ಮುಂದಾಳುತ್ವದಲ್ಲಿ ಧ್ವನಿಯೆತ್ತಲು ಸಹಮತ ವ್ಯಕ್ತಪಡಿಸಿದೆ. ಪಾಕಿಸ್ತಾನದ ಸರಕಾರದ ಅಧಿಕೃತ ಟ್ವಿಟರ್ ಹ್ಯಾಂಡೆಲ್ನ ಪ್ರಕಾರ ಪಾಕಿಸ್ತಾನ ಮತ್ತು ಟರ್ಕಿ ನಡುವೆ ಒಐಸಿಯ ನೇತೃತ್ವದಲ್ಲಿ ಧ್ವನಿಯೆತ್ತಲು ಮತ್ತು ಡಚ್ ಸರಕಾರಕ್ಕೆ ಕಾರ್ಟೂನ್ ಸ್ಪರ್ಧೆಯ ಕುರಿತು ಖಂಡನೆ ವ್ಯಕ್ತಪಡಿಸಲು ಸಹಮತ ವ್ಯಕ್ತವಾಗಿದೆ.”
ಮಂಗಳವಾರ ಕುರೇಶಿ ಪಾರ್ಲಿಮೆಂಟಿನಲ್ಲಿ ಖಂಡನಾತ್ಮಕ ಸಾಮಗ್ರಿಗಳ ವಿಚಾರದಲ್ಲಿ ಇಸ್ಲಾಮೀ ಸಹಯೋಗಿ ಸಂಘಟನೆ ಒಐಸಿಯ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿರುವುದಾಗಿ ತಿಳಿಸಿದರು. ಜಿದ್ದಾದಲ್ಲಿ ಈ ವಿಚಾರದಲ್ಲಿ ಒಂದು ಬೈಠಕ್ ಕರೆಯುವಂತೆ ಒಐಸಿಗೆ ಪತ್ರ ಮುಖೇನ ಸೂಚಿಸಿದ್ದಾಗಿ ಅವರು ತಿಳಿಸಿದರು.
ಈ ಘಟನೆಯ ಕುರಿತು ನಾವು ಹೆಜ್ಜೆ ಮುಂದಿಡದಿದ್ದರೆ ಅದು ಉಗ್ರವಾದಕ್ಕೆ ದಾರಿ ತೆರೆಯಬಹುದು ಎಂದು ಕುರೇಶಿ ಹೇಳಿದರು. ಮುಸ್ಲಿಂ ದೇಶಗಳಲ್ಲಿ ಒಗ್ಗಟ್ಟು
ಇಲ್ಲದಿರುವುದರಿಂದ ಇಂತಹ ಘಟನೆಗಳು ನಡೆಯುತ್ತಿವೆ. ತನ್ನ ಸರಕಾರ ವಿಶ್ವಸಂಸ್ಥೆಯಲ್ಲಿ ಈ ವಿಚಾರವನ್ನು ಎತ್ತಲಿದೆ ಎಂದು ತಿಳಿಸಿದ್ದಾರೆ.
ಮುಸ್ಲಿಮ್ ಅಂತಾರಾಷ್ಟ್ರೀಯ ನೀತಿಯಿಲ್ಲದಿರುವುದು ಮುಸ್ಲಿಂ ದೇಶಗಳ ಸಾಮೂಹಿಕ ವಿಫಲತೆ ಎಂದು ಇಮ್ರಾನ್ ಖಾನ್ ಬೆಟ್ಟು ಮಾಡಿದ್ದಾರೆ. ವಿಶ್ವ ಸಂಸ್ಥೆಯಲ್ಲಿ ಈ ವಿಷಯವನ್ನು ಎತ್ತಲಾಗುವುದು ಮತ್ತು ಒಐಸಿಯ ಮುಂದಾಳುತ್ವದಲ್ಲಿ ಒಂದು ಅಂತಾರಾಷ್ಟ್ರೀಯ ನೀತಿ ರೂಪಿಸಲು ಪ್ರಯತ್ನಿಸಲಾಗುವುದು ಎಂದು ಇಮ್ರಾನ್ ಹೇಳಿದರು.