1993 ರಲ್ಲಿ ದ.ಕ.ಜಿಲ್ಲೆ ಕೋಮು ದಳ್ಳುರಿಗೆ ಸಿಲುಕಿತ್ತು. ಸೌದಿ ಅರೇಬಿಯಾಕ್ಕೂ ಇದರ ಬಿಸಿ ತಾಗಿತ್ತು. ಕೆಲ ಮುಸ್ಲಿಮರು ಆ ಸಮಯದಲ್ಲಿ ಸೌದಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಂಗಳೂರಿನ ಪ್ರಭಾಕರ್ ಮೇಲೆ ದಾಳಿಗೆ ಮುಂದಾದರು. ಆಗ ಪ್ರಭಾಕರ್ ಗೆ ರಕ್ಷಣೆ ನೀಡಿ “ಪ್ರಭಾಕರ್ ನಮ್ಮವನು. ಅವನ ಮೈ ಮುಟ್ಟಿದರೆ ಜಾಗ್ರತೆ…” ಎಂದು ಹೇಳಿ ರಕ್ಷಿಸಿದವರು ಮತ್ಯಾರೂ ಅಲ್ಲ. ಕೊಟ್ಟಾರ ಚೌಕಿಯಲ್ಲಿ ಧರ್ಮಾಂಧರ ಮಚ್ಚಿನೇಟಿಗೆ ಸಿಲುಕಿ ಇಂದು ಆಸ್ಪತ್ರೆಯಲ್ಲಿ ನಿಧನರಾದ ಇದೇ ಬಶೀರ್.

ಮಂಗಳೂರಿನ ಆಕಾಶಭವನದ ಜನರಿಗೆ ಬಶೀರ್ ಎಂದರೆ ತುಂಬಾ ಪ್ರೀತಿ. ಬಶೀರ್ ತನ್ನೂರಿನ ಪರೋಪಕಾರಿ. ಹಿಂದೂ, ಮುಸ್ಲಿಮ್ ಎನ್ನದೆ ಎಲ್ಲರೊಂದಿಗೆ ಬೆರೆಯುವವರು. ಸೌದಿಯಲ್ಲಿದ್ದಾಗ ಪ್ರಭಾಕರ್ ಮತ್ತು ಬಶೀರ್ ಒಂದೇ ತಟ್ಟೆಯಲ್ಲಿ ಉಂಡವರು. ಪ್ರಭಾಕರ್ ಕುಟುಂಬ ಊರಲ್ಲಿ ಸಂಕಷ್ಟದಲ್ಲಿದ್ದಾಗ ಅವರ ತಾಯಿ ಚಿಕಿತ್ಸೆಗೆ ಬಶೀರ್ ಎಷ್ಟೋ ಬಾರಿ ಆರ್ಥಿಕ ಸಹಾಯ ಚಾಚಿದ್ದಾರೆ. ಧರ್ಮ, ಜಾತಿ ನೋಡದೆ ಯಾರೇ ಸಹಾಯ ಯಾಚಿಸಿದರೂ ಬಶೀರ್ ಇಲ್ಲ ಎಂದವರಲ್ಲ. ಧರ್ಮ ಮೀರಿ ನಿಂತ ಈ ಹಸನ್ಮುಖಿ ಬಶೀರ್ ಗೆ ಎಂಥಾ ಶಿಕ್ಷೆ?

ಕಾಟಿಪಳ್ಳ ದೀಪಕ್ ಕೊಲೆಗೆ ಪ್ರತೀಕಾರವಾಗಿ ಅದೇ ದಿನ ರಾತ್ರಿ ಕೊಟ್ಟಾರಚೌಕಿಯಲ್ಲಿ ಅಮಾಯಕ ಆಕಾಶಭವನದ ಬಶೀರ್ ಗೆ ಮತಾಂಧರು ಗಂಭೀರವಾಗಿ ಹಲ್ಲೆ ಮಾಡಿದ್ದರು. ಜೀವನ್ಮರಣ ಹೋರಾಟದಲ್ಲಿದ್ದ ಬಶೀರ್ ಇಂದು ದೇವರ ಅನುಲ್ಲಂಘನೀಯ ವಿಧಿಗೆ ವಿದೇಯರಾದರು. ಪರೋಪಕಾರಿ ಬಶೀರ್ ಅಮರರಾದರು. 25 ವರ್ಷಗಳ ಕಾಲ ವಿದೇಶದಲ್ಲಿ ದುಡಿದು ಕಳೆದೊಂದು ವರ್ಷದಿಂದ ಮಂಗಳೂರಲ್ಲಿ ಫಾಸ್ಟ್ ಫುಡ್ ವ್ಯಾಪಾರ ಮಾಡುತ್ತಾ ಬದುಕು ಕಟ್ಟಿಕೊಳ್ಳುತ್ತಿದ್ದ ಬಶೀರ್ ಇಹಲೋಕ ತ್ಯಜಿಸಿ ಕರಾವಳಿಯನ್ನು ದುಖದ ಕಡಲಲ್ಲಿ ಮುಳುಗಿಸಿದ್ದಾರೆ. ಬಶೀರ್ ನನ್ನು ಉಳಿಸಲು ಉಪವಾಸ, ಪ್ರಾರ್ಥನೆ, ಕುರ್ಆನ್ ಪಠಣ ನಿರ್ವಹಿಸಿದ ಪತ್ನಿ, ಮಕ್ಕಳು, ಕುಟುಂಬಿಕರು, ಸ್ನೇಹಿತರ ಪ್ರಯತ್ನ ಇಹಲೋಕದಲ್ಲಿ ಸಫಲವಾಗಿಲ್ಲವಾದರೂ ಪರಲೋಕದಲ್ಲಿ ಪ್ರತಿಫಲ ಸಿಕ್ಕೀತು. 48 ರ ಹರೆಯದ ಬಶೀರ್ ಸ್ವರ್ಗಸ್ಥರಾಗಲಿ, ಅವರ ಕುಟುಂಬಕ್ಕೆ ದುಖ ಸಹಿಸುವ ಶಕ್ತಿಯನ್ನು ಅಲ್ಲಾಹನು ನೀಡಲಿ. ಹತ್ಯೆಗೈದ ದುಷ್ಕರ್ಮಿಗಳಿಗೆ ದೇವರು ತಕ್ಕ ಶಿಕ್ಷೆ ನೀಡಲಿ.

-ರಶೀದ್ ವಿಟ್ಲ.

Leave a Reply