flickr

ಧ್ವನಿ: ಹೆಸರು ಬೇಡ, ನನಗೆ 18 ವರ್ಷ. ನಾನು PUC ತನಕ ಕಲಿತಿದ್ದೇನೆ. ನಾವು 5 ಜನ ಮಕ್ಕಳು 4 ಹುಡುಗಿಯರು 1 ಹುಡುಗ, ಮೂವರು ಅಕ್ಕಂದಿರಿಗೆ ಮದುವೆಯಾಗಿದೆ. ನನಗೆ ಕೂಡಾ ವಿವಾಹ ನಿಶ್ಚಿತಾರ್ಥವಾಗಿದೆ. ನನ್ನ ತಂದೆ ಕೂಲಿ ಕೆಲಸ ಮಾಡುತ್ತಾರೆ. ತಾಯಿ ಬೀಡಿ ಕಟ್ಟುತ್ತಾರೆ. ನಾವು ಬಡ ಕುಟುಂಬ ದವರು ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ನಾವು ಬಾಡಿಗೆ ಮನೆಯಲ್ಲಿ ಕೂತು ಹೊಸತರಲ್ಲಿ ಸ್ವಲ್ಪ ದೂರದ ನೆರೆಮನೆಯವರು ನಮ್ಮ ಮನೆಗೆ ಬಂದು ನನ್ನನ್ನು “ನೀನೇ ನನ್ನ ಸೊಸೆ, ನನ್ನ ಮಗನಿಗೆ ನಿಮ್ಮ ಮಗಳನ್ನು ಕೊಡುತ್ತೀರಾ? ನಮಗೆ ವರದಕ್ಷಿಣೆ ಏನೂ ಬೇಡಾ, ಖಾಲಿ ಹುಡುಗಿಯನ್ನು ನಮಗೆ ಕೊಡಿ. ಚಿನ್ನ ನಾವೇ ಹಾಕಿ ಮದುವೆ ಮಾಡುತ್ತೇವೆ’ ಎಂದು ಅವರೇ ನಮ್ಮಲ್ಲಿ ಕೇಳಿದ್ದಾರೆ.

ಅದಕ್ಕೆ ನಮ್ಮ ಅಪ್ಪ-ಅಮ್ಮ, ಭಾವಂದಿರು ಒಳ್ಳೆಯ ಹುಡುಗ ಆಗಬಹುದು. “ಖಾಲಿ ಹುಡುಗಿ ಅಲ್ಲ 2 ವರ್ಷ ಬಿಟ್ಟು ಮದುವೆ , ನನ್ನ ಮಗ ಸೌದಿಗೆ ಹೋಗಿ ಬಂದು ಮದುವೆ ಆಗುತ್ತೇನೆ” ಎಂದು ಹೇಳಿದ್ದಾರೆ. ಈಗ ನನಗೆ ನಿಶ್ಚಿತಾರ್ಥವಾಗಿದೆ. ನನ್ನ ಪ್ರಶ್ನೆಯೇನೆಂದರೆ ಸ್ವಲ್ಪ ಸಮಯದ ನಂತರ ಅವನ ತಾಯಿ ನಮ್ಮ ಮನೆಗೆ ಬಂದು ಹುಡುಗಿಗೆ 35 ಪವನ್ ಚಿನ್ನ ಹಾಕಬೇಕು ಎಂದು ಹೇಳಿದ್ದಾರೆ. ನಾವೇನು ಮಾಡಲಿ. ನಾವು ಬಡ ಕುಟುಂಬದವರು ನನ್ನ ತಂದೆತಾಯಿಯಲ್ಲಿ ಅಷ್ಟೇನೂ ಹಾಕಲು ಇಲ್ಲ.

ಅವರ ಮಗ ಏನೂ ಕೇಳಿಲ್ಲ. ಇಷ್ಟರವರೆಗೆ ಒಳ್ಳೆಯ ಹುಡುಗ, ಅವನ ತಾಯಿ ಮದುವೆ ಮುಂಚೆ ಹೀಗೆಲ್ಲ ಹೇಳಿದ್ದಾರೆ. ಇನ್ನು ಮದುವೆ ನಂತರ ಏನಲ್ಲಾ ಹೇಳಬಹುದು. ಮದುವೆ ನಂತರ ಸುಖ ಸಿಗಬಹುದಾ? ನಾನೇನು ಮಾಡಲಿ? ಇನ್ನೂ ಪುನಃ ಪುನಃ ಹೀಗೇನೆ ಹೇಳಿದ್ರೆ ನಿಮ್ಮ ಮಗನಿಗೆ ಬೇರೆ ಹುಡುಗಿ ನೋಡಿ ಮದುವೆ ಮಾಡಿ ಅಂಥ ಹೇಳಬೇಕಾ? ಇದು ಸರೀನಾ ನನ್ನ ಪ್ರಶ್ನೆಗೆ ಸರಿಯಾದ ಉತ್ತರ ಕೊಡಿ ಸಹೋದರಿ…..

ಸಾಂತ್ವನ : ನಿಮ್ಮ ಮದುವೆ ನಿಶ್ಚಿತಾರ್ಥ ಆಗುವಾಗ ನಮಗೆ ಯಾವುದೇ ಡಿಮ್ಯಾಂಡ್ ಇಲ್ಲ ಅಂದವರು ಈಗ ನಿಮ್ಮ ಹತ್ತಿರ ಬಂಗಾರ ಹಾಕಿ ಎಂದು ಹೇಳಿರುವುದು ನ್ಯಾಯವಲ್ಲ. ಮೊದಲು ಇಲ್ಲದ ಆಸೆ ಈಗ ಯಾಕಾಗಿ ಬಂತು? ಬಹುಶಃ ನಿಮ್ಮ ಪತ್ರ ಓದಿದಾಗ ತಿಳಿಯುವುದು ಈ ಆಸೆ ನಿಮ್ಮ ಅತ್ತೆಯದ್ದು. ಹುಡುಗನಿಗೆ ಬಹುಶಃ ಇದರ ಸುಳಿವು ಇದ್ದಿರಲಾರದು. ಈ ವಿಷಯವನ್ನು ನೀವು ಗಂಡಿಗೆ ತಿಳಿಸುವುದು ಒಳ್ಳೆಯದು. ಆತನೇ ಈ ಆಸೆ ಇಟ್ಟುಕೊಂಡಿರುವುದಾದರೆ ಛೀಮಾರಿ ಹಾಕಿರಿ. ಅವರೇ ಹೆಣ್ಣನ್ನು ಮದುವೆಗಾಗಿ ಕೇಳಿಕೊಂಡು ಈಗ ವರದಕ್ಷಿಣೆ ಕೇಳುವುದು ಅನ್ಯಾಯ, ಅದು ಹಣ ಅಥವಾ ಬಂಗಾರ…. ಏನೇ ಆಗಿರಲಿ, ಹೆಣ್ಣಿನ ಮನೆಯವರನ್ನು ದೋಚುವ ಈ ಕೃತ್ಯ ಒಂದು ದರೋಡೆಗೆ ಸಮ. ಹೆಣ್ಣಿನ ಕಡೆಯ ವರು ಅನುಕೂಲಸ್ಥರಾಗಿದ್ದರೆ, ‘ಉಡುಗೊರೆ’ ಎಂಬ ಹೆಸರು ಹೇಳಿ ಅರ್ಪಿಸುತ್ತಾರೆ. ಇಲ್ಲಿ ಕೇಳಿರುವುದು ‘ಭಿಕ್ಷೆ’ ನಿಜ…..

ಇಂದು ಸಮಾಜದಲ್ಲಿ ಮಹಿಳೆಯೇ ವರದಕ್ಷಿಣೆಯನ್ನು ನಿರೀಕ್ಷಿಸುವುದು. ಈ ಪಿಡುಗಿನ ವಿರುದ್ದ ಧ್ವನಿ ಎತ್ತಬೇಕಾದ ಮಹಿಳೆಯರೇ ವರದಕ್ಷಿಣೆಗೆ ಆಸೆ ಪಡುವುದು ದುರಂತವೇ ಸರಿ. ಒಂದಡೆ ಮಹಿಳೆಯರೇ ಬಲಿಪಶುಗಳು, ಇನ್ನೊಂದೆಡೆ ಶೋಷಿಸುವವಳೂ ಹೆಣ್ಣೆ. ನಿಮ್ಮ ಅತ್ತೆಗೆ ಅರಿವು ಮೂಡಿಸಿ ಹುಡುಗ ಒಳ್ಳೆಯವನಾಗಿದ್ದರೆ ಖಂಡಿತಾ ತಾಯಿಯ ಆಸರೆ ಆತ ತನನು ಮಾಡಿಕೊಳ್ಳಲಾರ ..

LEAVE A REPLY

Please enter your comment!
Please enter your name here