ಹೊಸದಿಲ್ಲಿ; ನಿರ್ಭಯ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಜಾರಿಗೊಳಿಸುವಲ್ಲಿ ವಿಳಂಬ ಆಗುತ್ತಿರುವುದರ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ ನಿರ್ಭಯಾ ಸಂತ್ರಸ್ತೆಯ ತಾಯಿ ಆಶಾ ದೇವಿ, ನ್ಯಾಯದ ವಿಳಂಬವೇ ಅಪರಾಧಗಳು ಹೆಚ್ಚಾಗಲು ಕಾರಣ ಎಂದು ಹೇಳಿದ್ದಾರೆ.
“ದೇಶದಲ್ಲಿ ಅಪರಾಧದ ಸಂಖ್ಯೆ ಹೆಚ್ಚಾಗುತ್ತಿದ್ದು, ಸಣ್ಣ ಹುಡುಗಿಯರ ಮೇಲೆ ಅತ್ಯಾಚಾರ ಎಸಗುವ ಆರೋಪಿಗಳಿಗೆ ಶಿಕ್ಷೆ ವಿಳಂಬವಾಗುತ್ತಿದೆ. ನಮ್ಮ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ತೋರುತ್ತಾರೆ. ನಾವು ಎರಡು ತಿಂಗಳಿಂದ ಅತ್ಯಾಚಾರಿಗಳ ಮರಣದಂಡನೆಗಾಗಿ ಕಾಯುತ್ತಿದ್ದೇವೆ” ಎಂದು ಆಶಾ ದೇವಿ ಹೇಳಿದ್ದಾರೆ.
ಆರೋಪಿಗಳ ಮರಣದಂಡನೆಯ ವಿಳಂಬಕ್ಕಾಗಿ ದೆಹಲಿ ಕಮಿಷನ್ ಫಾರ್ ವುಮೆನ್ (ಡಿ.ಸಿ.ಡಬ್ಲ್ಯು ) ತಿಹಾರ್ ಜೈಲಿನ ಅಧಿಕಾರಿಗಳಿಗೆ ನೋಟಿಸ್ ಕಳುಹಿಸಿದ ಹಿನ್ನೆಲೆಯಲ್ಲಿ ಆಶಾ ದೇವಿಯ ಹೇಳಿಕೆ ಬಂದಿದೆ.
“ನಾನು ಸಹಾಯಕ್ಕಾಗಿ ಡಿಸಿಡಬ್ಲ್ಯೂಗೆ ಮನವಿ ಮಾಡಿದ್ದೇನೆ, ಅವರು ಹಿಂದೆ ಬಹಳ ಬೆಂಬಲ ನೀಡಿದ್ದಾರೆ, ಇದೀಗ ಅಧಿಕಾರಿಗಳಿಗೆ ನೋಟಿಸ್ ನೀಡಿದ್ದಾರೆ, ಆದರೆ ಇನ್ನು ಎಷ್ಟು ವಿಳಂಬ ವಾಗುತ್ತದೆ ಎಂದು ನನಗೆ ತಿಳಿದಿಲ್ಲ. ನ್ಯಾಯಾಲಯದ ಕಾರ್ಯವಿಧಾನವನ್ನು ತ್ವರಿತಗೊಳಿಸಲು ನಾನು ಸರ್ಕಾರ, ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ ಎಂದರು.
ನಿರ್ಭಯ ಪ್ರಕರಣ ನಡೆದು ಇದೀಗ ಆರು ವರ್ಷಗಳು ಕಳೆದಿದೆ. ಅಪರಾಧಿಗಳಿಗೆ ಶಿಕ್ಷೆ ವಿಧಿಸಲು ವಿಳಂಬ ಆಗುವುದರಿಂದ ದೇಶದಲ್ಲಿ ಇನ್ನಷ್ಟು ಅಪರಾಧ ಕೃತ್ಯಗಳು ಹೆಚ್ಚಾಗುತ್ತದೆ ಎಂದು ಅವರು ಅಸಮಾಧಾನ ವ್ಯಕ್ತ ಪಡಿಸಿದರು.