ಒಮ್ಮೆ ಒಬ್ಬ ಖ್ಯಾತ ಸಂಗೀತಗಾರರು ತಮ್ಮ ಮೇಲಿನ ಟೀಕೆಗಳನ್ನು ಕೇಳಿ ಬಹಳ ನಿರುತ್ಸಾಹ ಪಟ್ಟರು. ಬಹಳ ಹಿರಿಯರಾದ ಅವರಿಗೆ ಈ ಟೀಕೆಯು ತೀವ್ರ ಪರಿಣಾಮ ಬೀರಿತು. ಆತ್ಮವಿಶ್ವಾಸ ಕಳೆದುಕೊಂಡಂತೆ ಅನಿಸಿತು. ಧಾರ್ಮಿಕ ಸಮಾಲೋ ಚನೆಗೆ ಮತ್ತು ಸಲಹೆಗೆ ಅವರು ಗುರುಗಳ ಬಳಿ ಹೋದರು. ಗುರುಗಳು ಹೇಳಿದರು, “ಟೀಕಾಕಾರರು ಒಬ್ಬ ವ್ಯಕ್ತಿಯ ಬದುಕಿನಲ್ಲಿ ಬಹಳ ಪ್ರಮುಖ ಪಾತ್ರವಹಿಸುತ್ತಾರೆ. ಅವರು ತಮ್ಮ ಸ್ನೇಹಿತರು ಎಂದೂ ಹೇಳದ್ದನ್ನು ಹೇಳುತ್ತಾರೆ. ಆದರೆ ನೀನು ನಿನ್ನ ಕೌಶಲ್ಯವನ್ನು ಇನ್ನೂ ಹೇಗೆ ಉತ್ತಮಗೊಳಿಸುವುದೆಂದು ಮಾತ್ರ ಯೋಚಿಸು. ಅದು ನಿನ್ನ ಪ್ರಗತಿಗೆ ಸಹಕಾರಿಯಾಗಿದ್ದರೆ ಅವರು ನಿಜವಾಗಿ ಒಳಿತನ್ನು ಮಾಡುತ್ತಿದ್ದಾರೆಂದರ್ಥ. ತಿಳಿಯತೇ?

ಹೆಚ್ಚಿನವರು ಟೀಕೆ ವಿಮರ್ಶೆ ಗಳನ್ನು ಇಷ್ಟಪಡುವುದಿಲ್ಲ. ಹೊಗಳಿಕೆಯನ್ನು ಮಾತ್ರ ಬಹಳ ಇಷ್ಟ ಪಡುತ್ತಾರೆ. ಇದು ಒಬ್ಬ ವ್ಯಕ್ತಿ, ಸಂಘಟನೆ, ಸಮುದಾಯ ಮತ್ತು ದೇಶದ ಪರಿಸ್ಥಿತಿಯೂ ಆಗಿ ಮುಂದುವರಿಯುತ್ತದೆ. ಟೀಕಾಕಾರರನ್ನು ಶತ್ರುಗಳಂತೆ ಭಾವಿಸಲಾಗುತ್ತದೆ. ಜನರು ಟೀಕೆಗೆ ಅರ್ಹರಾದವರನ್ನು ಮಾತ್ರ ಟೀಕೆ ಮಾಡುತ್ತಾರೆ. ಸಮಾಜದಲ್ಲಿ ಏನಾದರೂ ಉಪಯೋಗವಿರುವುದನ್ನು ಮಾಡುವವರನ್ನು ಜನರು ವಿಮರ್ಶೆ ಮಾಡುತ್ತಾರೆ. ಟೀಕೆ ವಿಮರ್ಶೆ ಮಾಡುವವರ ಎಲ್ಲ ಟೀಕೆಗಳನ್ನು ಸಮಾನವಾಗಿ ಸ್ವೀಕರಿಸಬಾರದು. ಕೆಲವು ಪುರಾವೆಗಳಿಲ್ಲದೆ ಮತ್ತು ಬೇಕು ಬೇಕೂಂತಲೇ ಟೀಕೆ ಮಾಡುವವರಿದ್ದಾರೆ. ಅವರಿಗೆ ಏನೂ ಉತ್ತರ ಕೊಡದಿರುವುದೇ ಟೀಕೆಯಿಂದ ತಪ್ಪಿಸಿಕೊಳ್ಳುವ ಉತ್ತಮ ಸುಲಭ ವಿಧಾನ. ಆದರೆ ಟೀಕೆ ಟಿಪ್ಪಣಿಗಳನ್ನು ಮತ್ತು ವಿಮರ್ಶೆಗಳನ್ನು ಜ್ಞಾನದ ಆಧಾರದಲ್ಲಿ ಹಾಗೂ ಪುರಾವೆ ಸಹಿತ ಗಂಭೀರ ದೃಷ್ಟಿಕೋನವನ್ನು ಮುಂದಿಟ್ಟು ಮಾಡುವುದಾದರೆ ಅವುಗಳನ್ನು ರಚನಾತ್ಮಕವಾಗಿ ಸ್ವೀಕರಿಸಿಕೊಳ್ಳಬೇಕು. ಅದರಿಂದ ನಮಗೆ ಪ್ರಯೋಜನ, ಪ್ರಗತಿಯೇ ಹೊರತು ಅದರಿಂದ ನಮಗೆ ನಷ್ಟವಾಗುವುದಿಲ್ಲ.
ರಾಜಾಡಳಿತ ಮತ್ತು ಸರ್ವಾಧಿಕಾರವು ಟೀಕೆ ವಿಮರ್ಶೆಗಳನ್ನು ಕೇಳಲು ಇಷ್ಟಪಡುವುದಿಲ್ಲ. ಆದುದರಿಂದ ಅವರು ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಂಪೂರ್ಣ ಹನನ ಮಾಡಿ ಬಿಡುತ್ತಾರೆ. ಹಾಗೆಯೇ ಅವರು ತಮಗೆ ಬೇಕಾದಂತೆ ಸಮಾಜದ ಸಮುದಾಯದ ಚಿಂತನೆಯನ್ನು ಮಾನಸಿಕತೆಯನ್ನು ಬೆಳೆಸುತ್ತಾರೆ. ಯಾರಾದರೂ ವಿಮರ್ಶೆ ಮಾಡಿ ವಿಭಿನ್ನ ಅಭಿಪ್ರಾಯ ನೀಡಿದರೆ ಸಂಘರ್ಷಕ್ಕಿಳಿಯುತ್ತಾರೆ ಮತ್ತು ಹಿಂಸಾ ಪ್ರವೃತ್ತಿಯನ್ನು ಕೈಗೊಳ್ಳು ತ್ತಾರೆ. ಇದರಿಂದ ಆ ಸಮಾಜ ಅಥವಾ ಸಮುದಾಯ ಹಿಂದುಳಿಯುತ್ತದೆ. ಮಾತ್ರವಲ್ಲ, ಸೈದ್ಧಾಂತಿಕವಾಗಿ ಸಂಪೂರ್ಣ ಅಧಃಪತನಕ್ಕೆ ತಲಪುತ್ತದೆ. ಆ ಸಮಾಜವನ್ನು ಸಮುದಾಯವನ್ನು ಕುರಿಗಳಂತೆ ಸರ್ವಾಧಿಕಾರಿ ಹೇಗೆ ಬೇಕಾದಂತೆ ಮುನ್ನಡೆಸಬಹುದು. ತಮ್ಮ ತಾಳಕ್ಕೆ ತಕ್ಕಂತೆ ಕುಣಿಸಬಹುದು. ಈ ನಿಟ್ಟಿನಲ್ಲಿ ಟೀಕೆ ಟಿಪ್ಪಣಿಗಳಿಗೆ ಸದಾ ನಮ್ಮಲ್ಲಿ ಅವಕಾಶಗಳಿರಬೇಕು. ಟೀಕೆ ವಿಮರ್ಶೆಗಳನ್ನು ಸ್ವೀಕರಿಸುವ ಮಾನಸಿಕತೆಯನ್ನು ಪ್ರತಿಯೊಂದು ಸಮಾಜವು ಬೆಳೆಸಿಕೊಳ್ಳಬೇಕು. ಒಂದು ಸಿದ್ಧಾಂತಕ್ಕೆ ಮರುತ್ತರ ಒಂದು ಸಿದ್ಧಾಂತವೇ ಹೊರತು ಅದನ್ನು ಆವೇಶದಿಂದ ಭಾವೋದ್ವೇಗದಿಂದ ಅದನ್ನು ಎದುರಿಸುವುದು ತರವಲ್ಲ. ಹಾಗೆಯೇ ಅಧ್ಯಯನಾತ್ಮಕ ಟೀಕೆ ವಿಮರ್ಶೆ ಮತ್ತು ಅಪಹಾಸ್ಯ ಗೇಲಿಯನ್ನು ಬೇರೆ ಬೇರೆಯಾಗಿ ನೋಡಬೇಕು. ವಿಮರ್ಶೆ, ಟೀಕೆ ಟಿಪ್ಪಣಿಯ ಹೆಸರಿನಲ್ಲಿ ನಿಂದನೆ, ಗೇಲಿ ಅವಮಾನ ಮಾಡಿದರೆ ವಿರುದ್ಧ ದಿಕ್ಕಿನಿಂದಲೂ ಅದು ಪ್ರಕಟ ಗೊಳ್ಳಬಹುದು.

ಲೇಖಕರು: ಕಮರುನ್ನಿಸಾ

Leave a Reply