ಬಿಹಾರದ ಬೇಗುಸಾರೈ ಜಿಲ್ಲೆಯ ಧಕ್ಜರಿ ಗ್ರಾಮದಲ್ಲಿ ವಂದನಾ ದೇವಿ ಮತ್ತು ರಾಜ್ ಕುಮಾರ್ ಮಿಶ್ರಾ ಅವರ ಮಗನಾಗಿ ಜನಿಸಿದರು ಈ ದೇವ್. ಮೂರು ಸಹೋದರರಲ್ಲಿ ಕಿರಿಯ ಮಗ ದೇವ್. ದೀರ್ಘ ಕಾಲದ ಅನಾರೋಗ್ಯದಿಂದ ತಂದೆ ತೀರಿಕೊಂಡಾಗ ದೇವ್ ಆರು ತಿಂಗಳ ಮಗು. ತಂದೆಯ ಚಿಕಿತ್ಸೆಗಾಗಿ ಬಹಳಷ್ಟು ಹಣ ಖರ್ಚು ಆಗಿತ್ತು. ತಂದೆಯ ಮರಣದ ಬಳಿಕ ಈ ಕುಟುಂಬ ಬಡತನದಲ್ಲಿ ಬಳಲುತ್ತಿತ್ತು. ತಾಯಿ ಮತ್ತು ಮೂರು ಮಕ್ಕಳು ಮಾತ್ರ. ನಂತರ ತಾಯಿ ವಂದನಾ ದೇವಿ ಕಾರ್ಮಿಕಳಾಗಿ ದುಡಿದು ಮಕ್ಕಳನ್ನು ಸಾಕಲು ತೊಡಗಿದರು. ತಾನು ಹಸಿದರೂ ಮಕ್ಕಳಿಗೆ ಆಕೆ ಹೇಗಾದರೂ ಮಾಡಿ ಊಟ ಬಡಿಸುತ್ತಿದ್ದಳು.

ಐದನೇ ವಯಸ್ಸಿನಲ್ಲೇ ದೇವ್ ತಾಯಿಯ ಜೊತೆ ಕೆಲಸಕ್ಕೆ ಹೋಗುತ್ತಿದ್ದನು. ಶಾಲೆಯ ಬಿಡುವಿನ ಸಮಯದಲ್ಲಿ ತಾಯಿಗೆ ಸಹಾಯ ಮಾಡುತ್ತಿದ್ದನು. ಎಂಟನೇ ತರಗತಿಯಲ್ಲಿ ಕಲಿಯುತ್ತಿದ್ದಾಗ ಕುಟುಂಬದಲ್ಲಿ ಆರ್ಥಿಕ ಸಮಸ್ಯೆ ಉಂಟಾದ ದೇವ್ ಕಲಿಕೆಯನ್ನು ಮೊಟಕುಗೊಳಿಸಬೇಕಾಯಿತು. ಜೂನ್ 1, 2015 ರಂದು, ದೇವ್ ವೆಲ್ಡರ್ ಆಗಿ ಕೆಲಸ ಮಾಡಲು ಹೈದರಾಬಾದ್ ಹೋಗುತ್ತಿದ್ದರು. ಆದರೆ ಈ ಪ್ರಯಾಣ ಅವರ ಜೀವನದಲ್ಲಿ ಇಂತಹದ್ದೊಂದು ಆಘಾತಕ್ಕೆ ಕಾರಣ ಆಗಬಹುದೆಂದು ದೇವ್ ಊಹಿಸಿರಲಿಲ್ಲ. ಬಾರೂನಿ ನಿಲ್ದಾಣಕ್ಕೆ ತಲಪಿದಾಗ ಅವರು ಇಳಿಯಲು ಬಾಗಿಲ ಬಳಿ ಬಂದು ನಿಂತಿದ್ದರು. ಹಿಂದಿನಿಂದ ಯಾರೂ ದೂಡಿದಂತೆ ಭಾಸವಾಯಿತು. ಅವರು ಕೆಳಗೆ ಬಿದ್ದರು. ಕಣ್ಣು ತೆರೆದು ನೋಡುವಾಗ ರೈಲು ಅವರ ಮೇಲೆ ಹರಿದು ಹೋಗಿತ್ತು ಮತ್ತು ಅವರು ತನ್ನ ಎರಡೂ ಕಾಲುಗಳನ್ನು ಕಳೆದು ಕೊಂಡರು.

ಬೆಟರ್ ಇಂಡಿಯಾ ಜೊತೆ ಮಾತನಾಡುತ್ತಾ ದೇವ್,

“ನಾನು ನೋವಿನಿಂದ ಕಿರುಚುತ್ತಿದ್ದೆ. ಯಾರೂ ಸಹಾಯ ಮಾಡಲು ಬರಲಿಲ್ಲ. ಯಾರಾದರೂ ಕಾಪಾಡಬಹುದು ಎಂದು ನಾನು ಯೋಚಿಸುತ್ತಿರುವಾಗಲೇ ಇನ್ನೊಂದು ವೇಗದ ರೈಲು ನನ್ನ ಮೇಲೆ ಹರಿಯಿತು. ಕೆಲವು ಜನರು ನನ್ನನ್ನು ಎತ್ತಿಕೊಂಡು ಪ್ಲಾಟ್ಫಾರ್ಮ್ ಒಂದು ಮೂಲೆಗೆ ಹಾಕಿದರು. ಮೂರು ಗಂಟೆಗಳ ಕಾಲ ನೋವಿನಿಂದ ಕಿರುಚುತ್ತಾ ಜನರೊಂದಿಗೆ ಸಹಾಯಕ್ಕಾಗಿ ಅಂಗಲಾಚಿದೆ. ಜನ ಮೂಕವಿಸ್ಮಿತರಾಗಿ ನೋಡುತ್ತಿದ್ದರೇ ವಿನಃ ಯಾರೂ ಸಹಾಯಕ್ಕೆ ಹತ್ತಿರ ಬರುತ್ತಿರಲಿಲ್ಲ. ಕೊನೆಗೆ ನನ್ನ ಸ್ನೇಹಿತ ಬಂದು ನನ್ನನ್ನು ಆಸ್ಪತ್ರೆಗೆ ಸಾಗಿಸಿದನು”

ಅಪಘಾತದ ಆರು ಗಂಟೆಗಳ ಬಳಿಕ ದೇವ್ ಕೊನೆಗೂ ಆಸ್ಪತ್ರೆಯನ್ನು ತಲುಪಿದರು. ಆ ಸಮಯದಲ್ಲಿ ಬಹಳ ರಕ್ತ ಹರಿದು ಹೋಗಿತ್ತು.
“ವೈದ್ಯರು ನನ್ನನ್ನು ಉಳಿಸಲು ಅಸಾಧ್ಯವೆಂದು ಹೇಳಿದರು. ಆದರೆ ನಾನು ಬದುಕಿ ಉಳಿದೆ. ಇದು ಜೀವನದಎರಡನೇ ಇನ್ನಿಂಗ್ಸ್ ” ಎಂದು ದೇವ್ ಹೇಳುತ್ತಾರೆ. ಆಸ್ಪತ್ರೆಯಲ್ಲಿ ಸುಮಾರು ಒಂದು ತಿಂಗಳ ಚಿಕಿತ್ಸೆಯ ಬಳಿಕ ದೇವ್ ಚೇತರಿಸಿಕೊಂಡರು. ಮಾತ್ರವಲ್ಲ ಅವರ ಚಿಕಿತ್ಸೆಯ 1.5 ಲಕ್ಷ ಸಾಲ ಇನ್ನೂಬಾಕಿ ಉಳಿದಿದೆ.

ದೇವ್ ಮನೆಗೆ ಮರಳಿದರು, ಅವನ ತಾಯಿ ತನ್ನೆಲ್ಲ ಕೆಲಸ ಕಾರ್ಯಗಳನ್ನು ಬದಿಗೆ ಸರಿಸಿ ಅವನನ್ನು ಮೂರು ತಿಂಗಳ ಚೆನ್ನಾಗಿ ಆರೈಕೆ ಮಾಡಿದರು.

ನಾನು ಪಾದಗಳನ್ನು ಕಳೆದು ಕೊಂಡಾಗ ನನಗೆ ಅಷ್ಟು ನೋವು ಆಗಿರಲಿಲ್ಲ. ನನ್ನ ಸಹೋದರ ನನ್ನ ಚೇತರಿಕೆಯ ನಂತರ ನನ್ನ ಮೇಲೆ ಒಂಥರಾ ಮಾಡಲು ತೊಡಗಿದ. ನಾನು ಕುಟುಂಬಕ್ಕೆ ಕೊಡುಗೆ ನೀಡಬಲ್ಲ ಒಬ್ಬ ಸದಸ್ಯ ಆಗಿದ್ದ ತನಕ, ಅವನು ನನಗೆ ಗೌರವ ಕೊಟ್ಟ. ನಾನು ಮನೆಯಲ್ಲಿ ಮಲಗಿದ್ದಾಗ ನನ್ನನ್ನು ನಿಷ್ಪ್ರಯೋಜಕ ಎಂದು ನಿಂದಿಸಿದನು. ‘ಇನ್ನು ನಿನಗೆ ಜೀವನದಲ್ಲಿ ಏನೂ ಮಾಡಲು ಸಾಧ್ಯವಿಲ್ಲ. ನೀನು ಬದುಕುವುದುದರಿಂದ್ ಹಿಡಿದು ಸಾಯುವ ತನಕ ನನ್ನ ಮೇಲೆ ಅವಲಂಬಿತವಾಗಿರುತ್ತಿ. ಈ ಮಾತು ನನ್ನ ಜೀವಕ್ಕಿಂತ ಹೆಚ್ಚು ಪ್ರೀತಿಸುವ ನನ್ನ ಅಣ್ಣ ಹೇಳಿದಾಗ ನನಗೆ ದುಃಖ ಸಹಿಸಲಾಗಲಿಲ್ಲ ಎಂದು ದೇವ್ ಹೇಳುತ್ತಾರೆ.

ಇನ್ನು ಮನೆಯಲ್ಲೆ ಬಿದ್ದು ಕೊಂಡಿದ್ದಾರೆ ಆಗದು ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂದು ನಾನು ತೀರ್ಮಾನಿಸಿದೆ. ಜೈಪುರಕ್ಕೆ ಹೋಗಿ ಪ್ರಾಸ್ಟೆಟಿಕ್ ಕಾಲುಗಳನ್ನು ಅಳವಡಿಸುವ ಬಗ್ಗೆ ವೈದ್ಯರಲ್ಲಿ ವಿಚಾರಿಸಿದೆ. ಆದರೆ ಈಗಿರುವ ಕಾಲುಗಳು ತುಂಬಾ ಚಿಕ್ಕದಾಗಿದೆ. ಆದ್ದರಿಂದ ಕೃತಕ ಕಾಲುಗಳನ್ನು ಅಳವಡಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಕೃತಕ ಕಾಲುಗಳ ಬಗ್ಗೆ ನನಗಿದ್ದ ನನ್ನ ಏಕೈಕ ಭರವಸೆ ನುಚ್ಚು ನೂರಾಯಿತು. ಅಂದು ನಾನು ಹುಚ್ಚನಂತಾಗಿದ್ದೆ. ಮನೆಗೆ ಹಿಂದಿರುಗದೆ ಜೈಪುರ ನಿಲ್ದಾಣದಿಂದ ಮುಂಬೈ ಟ್ರೈನ್ ಹತ್ತಿದೆ. ಇನ್ನು ಏನಿದ್ದರೂ ಹೊಸ ನಗರದಲ್ಲಿ ನನ್ನ ಬದುಕು ತೀರ್ಮಾನ ಆಗುವುದು ಎಂದು ಭಾವಿಸಿದೆ.

ಹತಾಶ ಜಗತ್ತಿನಲ್ಲಿ, ಕನಸುಗಳ ನಗರ ಮುಂಬೈ ನನ್ನ ಏಕೈಕ ಭರವಸೆ ಎಂದು ನಾನು ತಿಳಿದಿದ್ದೆ. ಇಲ್ಲಿ ಪ್ರವೇಶಿಸುವ ಯಾರೊಬ್ಬರೂ ಖಾಲಿಯಾಗಿ ಹಿದಿರುಗಿಲ್ಲ. ಆದ್ದರಿಂದ, ಕುರ್ಲಾ ನಿಲ್ದಾಣದಲ್ಲಿ ನನ್ನ ಜೀವನ ಹೊಸ ಪಯಣ ಆರಂಭವಾಯಿತು. ಯಾರೊಬ್ಬರೂ ಪರಿಚಯದವರಿಲ್ಲ. ನಾನು ಎದೆಗುಂದಲಿಲ್ಲ. ಕಾರ್ಟರ್ ರಸ್ತೆಯ ಬಳಿ ಬದಿಯಲ್ಲಿ ಮಲಗುತ್ತಿದ್ದೆ. ಎಂಜಲು ಆಹಾರ ತಿನ್ನುತ್ತಿದ್ದೆ. ಖಾಲಿ ಹೊಟ್ಟೆಯಲ್ಲಿ ಬಹಳ ಬಾರಿ ಮಲಗಿದೆ. ಕೆಲಸ ಅರಸಿ ಜನರ ಬಳಿ ಹೋದಾಗ ನನ್ನನು ನೋಡಿಯೇ ನಿರಾಕರಿಸುತ್ತಿದ್ದರು.

ದೇವ್ ಬಾಂದ್ರಾ ದಿಂದ ಜುಹುವಿಗೆ ಪ್ರಯಾಣ ಬೆಳಿಸಿದರು. ಯಾವುದಾದರೂ ಕೆಲಸ ಸಿಗಬಹುದು ಎಂದು ಸಿನೆಮಾ ನಟರ ಸೆಲೆಬ್ರಿಟಿಗಳ ಮನೆಗಳ ಹೊರಗೆ ಕಾಯುತ್ತಿದ್ದರು. ಒಂದಿನ ನಟ ಜಾಕಿ ಶ್ರಾಫ್ ಅವರಿಗೆ 5,000 ರೂಪಾಯಿ ಕವರ್ ನಲ್ಲಿ ಹಾಕಿ ನೀಡಿದರು. ನಿರ್ದಿಷ್ಟ ಒಂದು ತಿಂಗಳ ಬಳಿಕ ಆಭರಣ ಡಿಸೈನರ್, ಫರಾಹ್ ಖಾನ್ ಅಲಿಯವರನ್ನು ಭೇಟಿ ಮಾಡಿದಾಗ ಅದೃಷ್ಟ ಖುಲಾಯಿಸಿತು.

ಫರಾಹ್ ಖಾನ್ ಅಲಿಯೊಂದಿಗೆ

“ಆ ಅಮ್ಮ ನನಗೆ ದೇವರಂತೆ. ನನ್ನ ಹಿಂದಿರುವ ಚಾಲನಾ ಶಕ್ತಿ ಆ ಅಮ್ಮ. ನಾನು ಅವರನ್ನು ಭೇಟಿಯಾದ ದಿನ, ನನಗೆ ಈ ನಗರದಲ್ಲಿ ಬದುಕಲು ಕಷ್ಟ ಆಗುತ್ತಿದೆ ಏನಾದರೂ ಕೆಲಸ ಕೊಡಿ ಎಂದು ಆಕೆಯಲ್ಲಿ ನನ್ನ ಸ್ಟೋರಿ ಹೇಳಿದೆ. ತಕ್ಷಣವೇ ತನ್ನ ಕೆಲಸಗಾರರನ್ನು ಸಂಪರ್ಕಿಸಿ, ನನಗೆ ಟ್ರೈಸಿಕಲ್ ಅನ್ನು ಖರೀದಿಸಿದರು. ಅದೇ ದಿನ, ಅವರು ನನಗೆ ಆಹಾರ ಮತ್ತು ಇತರ ಖರ್ಚುಗಳಿಗೆ 10,000 ರೂಪಾಯಿ ನೀಡಿದರು. ನನಗೆ ವಸತಿ ಸೌಕರ್ಯವನ್ನು ಮಾಡಿಕೊಟ್ಟಳು ಅಂದಿನಿಂದ ಈಗಿನ ತನಕ ನನ್ನ ಖರ್ಚುಗಳನ್ನು ನೋಡಿಕೊಳ್ಳುತ್ತಿದ್ದಾರೆ. ನಾನು ಜೀವಂತವಾಗಿರುವ ದಿನವರೆಗೂ, ನನಗೆ ಸಾಧ್ಯವಾದಷ್ಟು ನಾನು ನಿಮಗೆ ಸಹಾಯ ಮಾಡುತ್ತೇನೆ” ಎಂದು ಆ ಅಮ್ಮ ಹೇಳಿದ್ದಾರೆ ಎಂದು ದೇವ್ ಫರಾ ಅಲಿ ಖಾನ್ ರವರ ಬಗ್ಗೆ ದೇವ್ ಹೇಳುತ್ತಾರೆ.

ದೇಹದ ತೂಕ ಹೆಚ್ಚಾದುದಕ್ಕೆ ದೇವ್ ಅಭ್ಯಾಸ ಪ್ರಾರಂಭಿಸಿದರು. ಫರಾ ಅಲಿ ಯವರು ಐದು ಲಕ್ಷ ಖರ್ಚು ಮಾಡಿ ದೇವ್ ನಿಗೆ ಪ್ರಾಸ್ತೆಟಿಕ್ಸ್ ಒದಗಿಸಿ ಕೊಟ್ಟರು. ಹತ್ತು ತಿಂಗಳ ಹಿಂದೆ ಹೀಗೆ ಅಭ್ಯಾಸ ಮಾಡುವ ವೇಳೆ ಓರ್ವ ಡ್ಯಾನ್ಸ್ ಮಾಸ್ಟರ್ ದೇವ್ ನನ್ನು ಗುರುತಿಸುತ್ತಾರೆ.

ಕೃತಕ ಕಾಲು ಅಳವಡಿಸಿದ ದೇವ್

ಡ್ಯಾನ್ಸ್ ಮಾಸ್ಟರ್ ವಿಶಾಲ್ ಪಾಸ್ವಾನ್ ರವರು ದೇವ್ ರಿಗೆ ಕೆಲವು ಸ್ಟೆಪ್ ಗಳನ್ನು ಪುನರಾವರ್ತಿಸಲು ಹೇಳುತ್ತಾರೆ. ದೇವ್ ಕೂಡಲೇ ಅದನ್ನು ಮನನ ಮಾಡಿ ಪುನರಾವರ್ತಿಸುತ್ತಾರೆ. ಅಲ್ಲಿಂದ ದೇವ್ ಜೀವನದಲ್ಲಿ ಹೊಸ ಶಕೆ ಪ್ರಾರಂಭ ಆಯಿತು.

ನನ್ನ ಪ್ರತಿಭೆಯ ಮೂಲಕ ಕನಸನ್ನು ಬೆನ್ನಟ್ಟಿ ಜನರಿಗೆ ಸ್ಪೂರ್ತಿಯಾಗುವಂತೆ ವಿಶಾಲ್ ಸರ್ ನನಗೆ ತಿಳಿಸಿದರು. ನನ್ನನ್ನು ನೋಡಿ ವಾವ್ ದಿಸ್ ಇಸ್ ಇನ್ಕ್ರೆಡಿಬಲ್ ಎಂದು ಜನರು ಹೇಳುತ್ತಾರೆ. ನನಗೆ ಡ್ಯಾನ್ಸ್ ಬಗ್ಗೆ ಕಳಿಸಿದ ವಿಶಾಲ್ ಸರ್ ರಿಗೆ ನಾನು ಋಣಿಯಾಗಿದ್ದೇನೆ ಎಂದು ದೇವ್ ಹೇಳುತ್ತಾರೆ.

ಕೆಲವು ವೇದಿಕೆಯಲ್ಲಿ ಪ್ರದರ್ಶನ ತೋರಿದ ಬಳಿಕ ದೇವ್ ಭಾರತದ ಪ್ರಖ್ಯಾತ ರಿಯಾಲಿಟಿ ಷೋ ಇಂಡಿಯಾ ಗಾಟ್ ಟ್ಯಾಲೆಂಟ್ ಪ್ರದರ್ಶನ್ ತೋರಲು ಆಡಿಷನ್ ನೀಡಲು ನಿರ್ಧರಿಸಿದರು.ಈ ಕಾರ್ಯಕ್ರಮದ ದ್ವೀತಿಯ ಸುತ್ತಿಗೆ ತಲುಪುವಾಗ ದೇವ್ ಖಾಸಗಿಯಾಗಿ ದ್ವಿತೀಯ ಪಿಯುಸಿ ತಯಾರಿ ನಡೆಸುತ್ತಿದ್ದರು.

ಡ್ಯಾನ್ಸ್ ಸ್ಪರ್ಧೆಯ ನಂತರ ಮುಂದೇನು ಎಂಬ ಪ್ರಶ್ನೆಗೆ ದೇವ್ ಉತ್ತರಿಸುತ್ತಾ, ನಾನು ಮುಂದೆ ಕಲಿಯಲು ಬಯಸುತ್ತೇನೆ. ಯಾವುದಾದರೂ ಕೆಲಸಕ್ಕೆ ಸೇರಬೇಕೆಂದಿದ್ದೇನೆ. ನನ್ನಲ್ಲಿ ಪ್ರತಿಭೆ ಇದೆ, ಆದರೆ ಸರ್ಟಿಫಿಕೇಟ್ ಇಲ್ಲ. ಆದರೆ ನಾನೋರ್ವ ಕಠಿಣ ಪರಿಶ್ರಮ ಮಾಡುವ ವ್ಯಕ್ತಿ. ನನ್ನ ಮುಂದಿನ ಜೀವನ ನನ್ನ ತಾಯಿಗಾಗಿ ಮುಡಿಪಾಗಿಟ್ಟಿದ್ದೇನೆ. ಹಳ್ಳಿಯಲ್ಲಿ ಆಕೆ ಒಂಟಿ. ಆಕೆಗೆ ಒಂದು ಉತ್ತಮ ಜೀವನ ನೀಡುವುದು ನನ್ನ ಕನಸು ಎಂದು ದೇವ್ ಭಾವನಾತ್ಮಕವಾಗಿ ಹೇಳುತ್ತಾರೆ.

ಜೀವನವನ್ನು ಯಾವ ಕಾರಣಕ್ಕೂ ಬಿಟ್ಟು ಕೊಡಬೇಡಿ. ಕಷ್ಟಗಳನ್ನು ನೋಡಿ ಭಯ ಪಡಬೇಡಿ. ನಿಮ್ಮನ್ನು ನೋಡಿ ಕಷ್ಟಗಳು ಸಮಸ್ಯೆಗಳು ಭಯ ಪಡುವಂತೆ ಬದುಕಿ ಎಂಬ ಸಂದೇಶ ದೇವ್ ಎಲ್ಲರಿಗೂ ನೀಡುತ್ತಾರೆ.

ಮೂಲ : ದಿ ಬೆಟರ್ ಇಂಡಿಯಾ ಭಾವಾನುವಾದ – ಇದು ನಮ್ಮ ಊರು Source : thebetterindia Translation – Idunammaooru

LEAVE A REPLY

Please enter your comment!
Please enter your name here