ಮನುಷ್ಯ ಮನುಷ್ಯನನ್ನು ಕೊಲ್ಲುವುದು ದೊಡ್ಡ ವಿಷಯವಲ್ಲ.‌‌ ಸಣ್ಣ ಸೂಜಿಯನ್ನು ಮನುಷ್ಯನ ದೇಹಕ್ಕೆ ‌ಚುಚ್ಚಿದರೂ ಒಬ್ಬ ಮನುಷ್ಯನ ಪ್ರಾಣವನ್ನು ಹಾರಿಸಬಹುದು. ಆದರೆ ಇಲ್ಲಿರುವ ವಿಷಯ ಅದಲ್ಲ ಸತ್ತ ಮನುಷ್ಯನಿಗಿರುವ ಪರಿವಾರಗಳಿಗೆ ಯಾರಿಲ್ಲಿ ದಿಕ್ಕು, ದೆಸೆ?

ನಿನ್ನೆ ದೀಪಕ್ ಎಂಬ ಮಂಗಳೂರಿನ ಕಾಟಿಪಳ್ಳದ ಯುವಕನನ್ನು ಕಿಡಿಗೇಡಿಗಳು ಬರ್ಬರವಾಗಿ ಕಡಿದು ಹತ್ಯೆ ನಡೆಸಿದರು.‌ ಇಲ್ಲಿ ನಡೆಸಿದವರು ಯಾರು? ಯಾಕಾಗಿ‌ ನಡೆಸಿದರು ಅನ್ನುವ ವಿಚಾರಕ್ಕಿಂತ ಇವರು ಯಾರು ಮನುಷ್ಯರೇ? ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಯಾಕೆಂದರೆ ದೀಪಕ್ ಎನ್ನುವ ಮೃತ ಯುವಕನನ್ನು ನಂಬಿಕೊಂಡ ಎರಡು ಬಡ ಜೀವಗಳು ಮನೆಯಲ್ಲಿ ಅನಾಥರಾಗಿದ್ದಾರೆ. ತನ್ನ ಮಗ ದುಡಿದು ತರುವ ಒಂದಿಷ್ಟು ಹಣದಿಂದ ಬದುಕುವ ವೃದ್ಧ ತಾಯಿ, ಮೂಕ ತಮ್ಮ ಕಾಯುತ್ತಿದ್ದರು. ಇನ್ನು ಅವರುಗಳಿಗೆ ಯಾರು ಆಸರೆ?

ಪರಿಹಾರದ ಮಹಾಪೂರವೇ ಹರಿದು ಬರಬಹುದು. ಅದು ಶಾಶ್ವತ ಪರಿಹಾರವೇ? ಅದರಲ್ಲಿ ಎಷ್ಟು ದಿನ ಸಂತೋಷವಾಗಿ ಆ‌ ಜೀವಗಳು ತಿಂದು ಬದುಕಬಹುದು? ಆ ಹೆತ್ತಬ್ಬೆಗೆ ಹೊಟ್ಟೆ ತುಂಬಾ ಉನ್ನಲು ಸಾಧ್ಯವೇ? ಸ್ವತಃ ನಮಗಾದರು ಸಾಧ್ಯವೇ ನಮ್ಮವರನ್ನು ಕಳೆದುಕೊಂಡು ದುಃಖದಲ್ಲಿ ಸಾಧ್ಯವಿಲ್ಲ ತಾನೇ? ಅದೇ ಪರಿಸ್ಥಿತಿಯಲ್ಲಿ ಇಂದು ಮೃತ ದೀಪಕ್‌ನ ಕುಟುಂಬ.

ರಾಜಕಾರಣಿಗಳು ಒಂದಿಷ್ಟು ಮೊಸಳೆ ಕಣ್ಣೀರು ಸುರಿಸಿ, ಹಣ ಪರಿಹಾರ ಘೋಷಿಸಿ ಹೋಗುವರು. ಆದರೆ ಇಂತಹ ಘಟನೆಗಳು ಮರಕಳಿಸದಂತೆ ಎಚ್ಚರಿಕೆಯನ್ನು ವಹಿಸುವುದಿಲ್ಲ. ಪ್ರತಿಬಾರಿ ಕಠಿಣ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ನೀಡುತ್ತಾರೆ ಆದರೆ ಅದು ಒಂದೆರಡು ದಿನಕ್ಕೆ ಮಾತ್ರವೇ ಸೀಮಿತವಾಗಿರುತ್ತದೆ.

ಕೊಳಕು ರಾಜಕೀಯ ಮಾಡದೆ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಲು ನಾವೆಲ್ಲ ಪ್ರಯತ್ನಿಸೋಣ. ಆ ತಾಯಿ ನಮ್ಮ ತಾಯಿ ಯಾಗಿದ್ದರೆ, ? ಆ ಮೂಗ ತಮ್ಮ ನಾವಾಗಿದ್ದರೆ ? ನಮ್ಮ ರೋಧನ ಹೇಗಿರುತ್ತಿತ್ತು ? ಧರ್ಮ ಯಾವುದಿರಲಿ. ಆತ ನಮ್ಮಂತೇ ಮನುಷ್ಯ. ಮಾನವತೆಯ ಶತ್ರುಗಳ ವಿರುದ್ದ ಒಂದಾಗೋಣ. ಸರ್ಕಾರ ದೀಪಕ್ ಕುಟುಂಬದ ಸಂಪೂರ್ಣ ಜವಾಬ್ದಾರಿ ಹೊರಬೇಕು. ಅದಕ್ಕಿಂತ ಮೊದಲಾಗಿ ಆ ತಾಯಿಗೆ ನ್ಯಾಯ ನೀಡಬೇಕು.

ತನ್ನಂತಿರುವ ಇನ್ನೊಬ್ಬ ಮನುಷ್ಯನನ್ನು ಕೊಲ್ಲುವಷ್ಟು ಅಸ್ವಾಭಾವಿಕ ಕೆಲಸ ಈ ಜಗತ್ತಿನಲ್ಲಿ ಬೇರೊಂದಿಲ್ಲ.

ಲೇಖಕರು: ಸಹನಾ ಎಂ

Leave a Reply