ಬಳ್ಳಾರಿ : ಇಡೀ ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದಿದ್ದ ಹುಡುಗಿಯರು ಯುಪಿಎಸ್‌ಸಿ ಪರೀಕ್ಷೆ ಬರೆದು ಉನ್ನತ ಹುದ್ದೆ ಅಲಂಕರಿಸುವ ಗುರಿ ಹೊಂದಿರುವುದಾಗಿ ಅಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಆದರೆ, ಅವರು ಈಗ ಆಗಿರುವುದು ಗ್ರಾಮ ಲೆಕ್ಕಿಗರು!

ಹೌದು ಇದು ಕೊಟ್ಟೂರಿನ ಇಂದು ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾಗಿ, ರಾಜ್ಯಕ್ಕೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರ ನೈಜ ಕಥೆ ಇದು. ಕೆಲವೊಮ್ಮೆ  ಸಾಮಾನ್ಯವಾಗಿ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದು ಭಾರೀ ಸುದ್ದಿಮಾಡುವ ಹುಡುಗಿಯರು ಎಲ್ಲಿ ಹೋಗುತ್ತಾರೆ ಎಂದು ಪ್ರಶ್ನಿಸುವುದುಂಟು.  ಈ ಪ್ರಶ್ನೆಗೆ ತಕ್ಕ ಉತ್ತರ ಎಂಬಂತೆ ಬಳ್ಳಾರಿ ಜಿಲ್ಲೆ ಕೊಟ್ಟೂರು ಪಟ್ಟಣದ ಇಂದು ಪಿಯು ಕಾಲೇಜಿನಲ್ಲಿ ಓದಿ ರಾಜ್ಯಕ್ಕೆ ಅತಿ ಹೆಚ್ಚು ಅಂಕ ಪಡೆದ ಹಲವು ವಿದ್ಯಾರ್ಥಿಗಳು ಇಂದು ಹಾಲಿ ಜಿಲ್ಲೆ, ಅನ್ಯ ಜಿಲ್ಲೆಯ ವಿವಿಧ ಕಡೆ ಗ್ರಾಮ ಲೆಕ್ಕಿಗರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ರಾಜ್ಯಕ್ಕೆ ಪ್ರಥಮ ರಾಂಕ್ ಪಡೆದ ನಾಲ್ವರ ಮನೆಯಲ್ಲೂ ಬಡತನದ ಸಮಸ್ಯೆ ಇದೆ. ಕೃಷಿ ಕಾರ್ಮಿಕ, ಸಣ್ಣ ವ್ಯಾಪಾರಿ, ಪಂಕ್ಟರ್‌ ಅಂಗಡಿ ಹೊಂದಿದ ಹೀಗೆ ಬಡತನದ ಕುಟುಂಬದ ಹಿನ್ನೆಲೆಯಿಂದ ಬಂದ ಈ ವಿದ್ಯಾರ್ಥಿನಿಯರು ಶೈಕ್ಷಣಿಕವಾಗಿ ಉನ್ನತ ಸಾಧನೆ ತೋರಿದ್ದಾರೆ. ಮುಂದೆಯೂ ಸಾಧಿಸುವ ಹೆಬ್ಬಯಕೆ ಹೊಂದಿದ್ದಾರೆ. ಆದರೆ, ಬಡತನವೇ ಅವರ ಮುಂದಿನ ಸಾಧನೆಗೆ ಅಡ್ಡಿಯಾಯಿತು. ಇದೇ ಕಾರಣಕ್ಕೆ ಇಂದು ಕೈಗೆ ಸಿಕ್ಕ ಕೆಲಸ ಮಾಡಿಕೊಂಡು ಕುಟುಂಬ ನಿರ್ವಹಣೆಗೆ ತಮ್ಮ ತಂದೆ, ತಾಯಿಯರ ಕೈ ಬಲಪಡಿಸುತ್ತಿದ್ದಾರೆ.

ಸಹಾಯ ಮಾಡಲಿಲ್ಲ

2015ರಲ್ಲಿ ನೇತ್ರಾವತಿ 579 ಅಂಕ ಪಡೆದು ರಾಜ್ಯಕ್ಕೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು. ಅವರು ಇಂದು ಜಗಳೂರು ತಾಲ್ಲೂಕು ಮುನ್ನೂರು ಗ್ರಾಮದ ಲೆಕ್ಕಿಗರಾಗಿ ಕೆಲಸಮಾಡುತ್ತಿದ್ದಾರೆ. ರಾಂಕ್ ಬಂದ ಸುದ್ದಿ ತಿಳಿದಾಗ ಅನೇಕರು ಮುಂದೆ ಬಂದು ನಿಮಗೆ ಧನ ಸಹಾಯ ಮಾಡುತ್ತೇವೆ. ಉಚಿತ ದಾಖಲಾತಿ ಕೊಡಿಸುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ, ಡಿಗ್ರಿ ಪ್ರವೇಶದ ವೇಳೆ ಯಾರೂ ಬರಲಿಲ್ಲ. ಹಾಗಾಗಿ ನಾನು ವಿವಿ ಆಗಿ ಕೆಲಸಮಾಡಲು ಮುಂದಾದೆ. ನನಗೆ ಯಾರೂ ಸಹಾಯ ಮಾಡಲಿಲ್ಲ ಎಂಬ ಬೇಸರ ಇಲ್ಲ. ಸಿಕ್ಕ ಸಣ್ಣ ಕೆಲಸ ಕುಟುಂಬ ನಿರ್ವಹಣೆಗೆ ಸಹಕಾರಿ ಆಗಿದೆ. ಹಾಗಾಗಿ ನಾನು ಇದರಲ್ಲೇ ಇದ್ದು, ಉನ್ನತ ವಿದ್ಯಾಭ್ಯಾಸ ಮಾಡುತ್ತೇನೆ ಎಂದು ಹೇಳುತ್ತಾರೆ.

ಆರ್ಥಿಕ ಸ್ಥಿತಿ ಸುಧಾರಣೆಗೆ ಕೆಲಸ

2016ರಲ್ಲಿ 585 ಅಂಕ ಪಡೆದ ಟಿ. ಅನಿತಾ ಹಾಲಿ ಕೂಡ್ಲಿಗಿ ತಾಲ್ಲೂಕು ಖಾನಾ ಹೊಸ ಹಳ್ಳಿಯಲ್ಲಿ ಗ್ರಾಮ ಲೆಕ್ಕಿಗರಾಗಿ ಕೆಲಸಮಾಡುತ್ತಿದ್ದಾರೆ. ತಂದೆ ಬಸಪ್ಪ ಕೊಟ್ಟೂರಿನಲ್ಲಿ ತಳ್ಳುವ ಗಾಡಿಯಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದರು. ಅಣ್ಣ ಡಿಗ್ರಿ ಮುಗಿಸಿ, ಕೆಲಸ ಹುಡುಕುತ್ತಿದ್ದಾನೆ, ತಮ್ಮ ದ್ವಿತೀಯ ಪಿಯು ಓದುತ್ತಿದ್ದಾನೆ. ಹೀಗಾಗಿ ಮನೆಯ ಆರ್ಥಿಕ ಸ್ಥಿತಿ ಸುಧಾರಣೆಗೆ ಕೆಲಸ ಒಪ್ಪಿಕೊಂಡೆ. ದೂರ ಶಿಕ್ಷಣದ ಮೂಲಕ ಡಿಗ್ರಿ ಮುಗಿಸಿ, ಮುಂದೆ ಐಎಎಸ್ ಮಾಡುವೆ. ಮನೆಯ ಪರಿಸ್ಥಿತಿ ಹೀಗಿರುವಾಗ ನಾನು ಈ ನಿರ್ಧಾರ ತೆಗೆದುಕೊಳ್ಳಲೇಬೇಕಾಗಿತ್ತು. ಹಾಗಾಗಿ ಗ್ರಾಮ ಲೆಕ್ಕಿಗ ಹುದ್ದೆ ಒಪ್ಪಿಕೊಂಡೆ ಎನ್ನುತ್ತಾರೆ ಅನಿತಾ.

2017ರಲ್ಲಿ ಟಾಪರ್ ಆಗಿದ್ದ ಬಿ. ಚೈತ್ರ 2018ರಲ್ಲಿ ರಾಜ್ಯಕ್ಕೆ ಅತಿ ಹೆಚ್ಚು ಅಂಕ ಗಳಿಸಿದ ಎಸ್. ಸ್ವಾತಿ ಕೂಡ ಹಾಲಿ ಗ್ರಾಮ ಲೆಕ್ಕಿಗರು. ಈ ಇಬ್ಬರಿಗೂ ಸಹ ಮುಂದೆ ವಿದ್ಯಾಭ್ಯಾಸ ಮಾಡಲು ಹಣದ ಅಡಚಣೆ ಆಯಿತು. ಮನೆಯ ಸ್ಥಿತಿ, ಹಿರಿಯರ ಸಲಹೆಯಂತೆ ಹಾಲಿ ಇವರು ಗ್ರಾಮ ಲೆಕ್ಕಿಗರಾಗಿ ಕಾರ್ಯ ನಿರ್ವಹಿಸುವಂತೆ ಆಗಿದೆ.

ಇನ್ನು ಈ ವರ್ಷ ಕಲಾ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಕುಸುಮಾ ಸಹ ಇದೀಗ ಇದೇ ಹಾದಿ ಹಿಡಿದಿದ್ದಾರೆ. ಕುಸುಮಾ ತಂದೆ ಪಂಕ್ಚರ್ ಅಂಗಡಿ ಇಟ್ಟುಕೊಂಡಿದ್ದಾರೆ. ಇದರಿಂದ ಬರುತ್ತಿರುವ ಆದಾಯ ತೀರಾ ಕಡಮೆ ಇದೆ. ಹೀಗಾಗಿ ಸರ್ಕಾರಿ ಕೆಲಸ ಹುಡುಕಿಕೊಂಡು ಮನೆ ನೋಡಿಕೊಳ್ಳಲು ತಂದೆ, ತಾಯಿ ಅಣ್ಣನಿಗೆ ನೆರವಾಗುವ ದಾರಿಯಲ್ಲಿ ಸಾಗಿದ್ದಾರೆ.
ಪ್ರಾಥಮಿಕ, ಪ್ರೌಢ ಶಿಕ್ಷಣಕ್ಕೆ ಒತ್ತುಕೊಡುವ ಸರ್ಕಾರ ಉನ್ನತ ವಿದ್ಯಾಭ್ಯಾಸದ ಕಡೆ ತಿರುಗಿಯೂ ನೋಡಲ್ಲ. ಬಡ ವಿದ್ಯಾರ್ಥಿಗಳು ಅದೆಂತಹುದೇ ಪ್ರತಿಭೆ ಹೊಂದಿದ್ದರೂ ಉನ್ನತ ವಿದ್ಯಾಭ್ಯಾಸ ಮಾಡುವುದು ಅಸಾಧ್ಯ ಎಂಬಂತಹ ಸ್ಥಿತಿ ಸದ್ಯ ರಾಜ್ಯದಲ್ಲಿದೆ ಎಂಬುದಕ್ಕೆ ಈ ಪ್ರತಿಭೆಗಳೇ ಸಾಕ್ಷಿ.

Courtesy : ಸಂ.ಕ.ಸಮಾಚಾರ

Leave a Reply