ಸಹರನಾಪುರ: ಬಿಜೆಪಿಯ ಹಿರಿಯ ನಾಯಕಿ ಹಾಗೂ ದೇವ್‍ಬಂದ್‍ನ ಮಾಜಿ ಶಾಸಕಿ ಶಶಿಬಾಲ ಪುಂಡೀರ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದು, ಸಹರನಾಪುರ ರಾಜಕೀಯದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ. ಶಶಿಬಾಲ ರಾಜೀನಾಮೆ ನೀಡಿದ ನಂತರ ಮುಖ್ಯಮಂತ್ರಿ ಆದಿತ್ಯನಾಥರ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾರೆ.
ಯೋಗಿಗೆ ಅಧಿಕಾರಿಗಳ ಮೇಲೆ ಯಾವ ಹಿಡಿತವೂ ಇಲ್ಲ. ಆಡಳಿತಾತ್ಮ ಕ ಜ್ಞಾನದ ಕೊರತೆ ಇದೆ. ಅವರನ್ನು ಅಧಿಕಾರಿಗಳು ದಾರಿ ತಪ್ಪಿಸುತ್ತಿದ್ದಾರೆ. ಯೋಗಿಯನ್ನು ಅವರ ಸಚಿವಾಲಯದಲ್ಲಿಯೇ ತಪ್ಪುದಾರಿಗೆಳೆಯಲಾಗುತ್ತಿದೆ ಎಂದು ಶಶಿಬಾಲ ಆರೋಪಿಸಿದ್ದಾರೆ.
ಶಶಿಬಾಲ ಬಿಜೆಪಿಯ ಪ್ರಭಾವಿ ನಾಯಕರಿಯರಲ್ಲಿ ಒಬ್ಬರಾಗಿದ್ದು ಕಳೆದ ಹಲವು ದಶಕಗಳಿಂದ ಬಿಜೆಪಿಯ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. ಉತ್ತರ ಪ್ರದೇಶದ 12ನೆ ವಿಧಾನಸಭೆಗೆ ಅವರು ದೇವಬಂದ್ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಬಂದಿದ್ದರು.
ಶಶಿಬಾಲ ತನ್ನ ಲೆಟರ್‍ಹೆಡ್‍ನಲ್ಲಿ ಬಿಜೆಪಿ ಉತ್ತರಪ್ರದೇಶ ಅಧ್ಯಕ್ಷ ಮಹೇಂದ್ರನಾಥ್ ಪಾಂಡ್ಯರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದು,ತನಗೆ ಪಾರ್ಟಿಯ ರಾಜ್ಯಾಧ್ಯಕ್ಷರಲ್ಲಿ ಯಾವುದೇ ದೂರುಗಳಿಲ್ಲ. ಆದರೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‍ಗೆ ಸರಿಯಾಗಿ ಸರಕಾರ ಮುನ್ನಡೆಸಲು ಸಾಧ್ಯವಾಗುತ್ತಿಲ್ಲ. ನಾಲ್ಕು ಕಡೆಗಳಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿದೆ. ಜಿಲ್ಲೆಯಿಂದ ಹಿಡಿದು ಸಚಿವಾಲಯಗಳವರೆಗೂ ಲಂಚವಿಲ್ಲದೆ ಕೆಲಸ ಆಗುವುದಿಲ್ಲ ಎಂದು ಆರೋಪಿಸಿದ್ದಾರೆ.
ಮುಖ್ಯಮಂತ್ರಿ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ. ಇನ್ನೂ ಮೂರುವರೆ ವರ್ಷ ಸರಕಾರವನ್ನು ಮುನ್ನಡೆಸಬೇಕಾಗಿದೆ. ಸಹರನಾಪುರದ ಜನರಿಗೆ ಸಮಸ್ಯೆಗಳಿವೆ. ಹಲವು ಸಲ ಮುಖ್ಯಮಂತ್ರಿಯನ್ನು ಭೇಟಿಯಾದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಶಿಬಾಲ ಹೇಳಿದ್ದಾರೆ.