
ಪ್ಯಾರಿಸ್ : ಫ್ರೆಂಚ್ ಓಪನ್ ಗ್ರಾಂಡ್ ಸ್ಲಾಮ್ ಪ್ರಶಸ್ತಿಯನ್ನು 12ನೇ ಬಾರಿ ಜಯಿಸಿ ಒಟ್ಟು 18 ಗ್ರಾನ್ ಸ್ಲಾಮ್ ಗೆದ್ದಿರುವ ರಫೆಲ್ ನಡಾಲ್ ಅವರು 20 ಗ್ರಾನ್ ಸ್ಟಾಮ್ ಜಯಿಸಿರುವ ರೋಜರ್ ಫೆಡರರ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ನಡಾಲ್, ಸ್ವಿಜರ್ಲೆಂಡ್ ತಾರೆ ಫೆಡರರ್ ಅವರ ದಾಖಲೆಯೇ ನನಗೆ ಪ್ರೇರಣೆ. ಆದರೆ, ಅವರ ದಾಖಲೆ ಮುರಿಯುತ್ತೇನೆ ಎಂದು ಹೇಳುವ ಗೀಳು ಮನಸ್ಥಿತಿ ನನ್ನಲ್ಲಿ ಇಲ್ಲ. ನನ್ನ ಜೀವನದಲ್ಲಾಗುತ್ತಿರುವ ಸಂಗತಿಗಳ ಬಗ್ಗೆ ನನಗೆ ಹೆಮ್ಮೆ ಇದೆ. ಒಂದು ವೇಳೆ ನನ್ನ ವೃತ್ತಿ ಜೀವನ ಅನಿರೀಕ್ಷಿತವಾಗಿ ಇಂದೇ ಮುಕ್ತಾಯವಾದರೆ, ಇನ್ನೂ ಕೆಲವು ಗ್ರಾನ್ ಸ್ಲಾಮ್ ಗೆಲುವು ಸಾಧಿಸಲು ಸಾಧ್ಯವಾಗುವುದಿಲ್ಲ ಅಥವಾ ರೋಜರ್ ದಾಖಲೆ ಸಮೀಪ ತಲುಪಲು ಆಗುವುದಿಲ್ಲ ಎಂದರು.
“ನನ್ನ ಟೆನಿಸ್ ವೃತ್ತಿ ಜೀವನ ಸ್ವಂತಿಕೆಯಿಂದ ಕೂಡಿದೆ. ಅವಕಾಶ ಸಿಕ್ಕಾಗಲೆಲ್ಲ ಅದನ್ನು ಸದುಪಯೋಗಪಡಿಸಿಕೊಳ್ಳುವತ್ತ ಗಮನ ಹರಿಸುತ್ತೇನೆ. ಅತ್ಯುನ್ನತ ಮಟ್ಟದ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ತೋರುವ ಕಡೆ ಹೆಚ್ಚು ನನ್ನನ್ನು ತೊಡಗಿಸಿಕೊಳ್ಳುತ್ತೇನೆ.” ಎಂದು ಹೇಳಿದರು.
ರೋಜರ್ ಫೆಡೆರರ್ ಮತ್ತು ನಡಾಲ್ ಈ ಬಾರಿ ಫ್ರೆಂಚ್ ಓಪನ್ ಸೆಮಿಫೈನಲ್ ನಲ್ಲಿ ಮುಖಾಮುಖಿಯಾಗಿದ್ದರು. ದೀರ್ಘ ಕಾಲದಿಂದ ಇವರಿಬ್ಬರು ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದರೂ, ಇಬ್ಬರೂ ಪರಸ್ಪರರನ್ನು ಅಪಾರ ಗೌರವಿಸುತ್ತಾರೆ.