ಹೊಸದಿಲ್ಲಿ: 328 ಸ್ಥಿರ ಡೋಸ್ ಸಂಯೋಜನೆ (ಎಫ್ಡಿಸಿ) ಇರುವ ಅಸುರಕ್ಷಿತ ನೋವು ನಿವಾರಕ ಔಷಧಿಗಳ ಮಾರಾಟ ಅಥವಾ ವಿತರಣೆಯನ್ನು ಕೇಂದ್ರ ಸರಕಾರ ನಿಷೇಧಿಸಿದೆ.
ಮಾತ್ರವಲ್ಲ ಆರು ಎಫ್ಡಿಸಿಗಳ ತಯಾರಿಕೆ, ಮಾರಾಟ ಅಥವಾ ವಿತರಣೆಯ ಮೇಲೆ ನಿರ್ಬಂಧ ಹೇರಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಪೈನ್ ಕಿಲ್ಲರ್ ಔಷಧಿಗಳಲ್ಲಿ ಸ್ಕಿನ್ ಕ್ರೀಮ್ ಪೆಂಡ್ರೆಮ್, ಡಯಾಬಿಟಿಕ್ ಡ್ರಗ್ಸ್ ಗ್ಲೂಕೋನಾರ್ಮ್ ಪಿಜಿ, ಆಂಟಿ ಬಯಾಟಿಕ್ ಲೂಪಿಡಾಕ್ಸ್, ಹಾಗೂ ಆಂಟಿ ಬ್ಯಾಕ್ಟೀರಿಯಲ್ ಟಾಕ್ಸಿಮ್ ಎಜೆಡ್ ಮುಂತಾದ ಬ್ರ್ಯಾಂಡ್ ಗಳು ಸೇರಿ ಒಟ್ಟು 328 ಅಸುರಕ್ಷಿತ ನೋವು ನಿವಾರಕ ಔಷಧಿಗಳ ಮಾರಾಟ ಅಥವಾ ವಿತರಣೆಗೆ ಆರೋಗ್ಯ ಸಚಿವಾಲಯವು ನಿಷೇಧ ಹೇರಿದೆ.
ಸರಕಾರದ ಮೂಲಗಳ ಪ್ರಕಾರ, Rs 2,000-2,500 ಕೋಟಿ ಮಾರುಕಟ್ಟೆ ಹೊಂದಿರುವ ವಿವಿಧ ಕಂಪೆನಿಗಳಿಗೆ ಸೇರಿದ ಸುಮಾರು 6,000 ಔಷಧಿ ಬ್ರಾಂಡ್ಗಳು ಶೀಘ್ರದಲ್ಲೇ ದೇಶದ ಔಷಧಿ ಮಾರುಕಟ್ಟೆಯಿಂದ ಮರೆಯಾಗುವ ಸಾಧ್ಯತೆಯಿದೆ ಎಂದು ಸರ್ಕಾರ ಮೂಲಗಳು ತಿಳಿಸಿವೆ. ಕಳೆದ ಎರಡು ವರ್ಷಗಳಿಂದ ದೇಶದ ಹಲವು ಹೈಕೋರ್ಟ್ಗಳು ಹಾಗೂ ಸುಪ್ರೀಂಕೋರ್ಟ್ ನಲ್ಲಿ ಈ ಬಗ್ಗೆ ವಿಚಾರಣೆ ನಡೆಯುತ್ತಲೇ ಇತ್ತು. ಈ ಮಧ್ಯೆ, ಇದೀಗ ಎರಡು ವರ್ಷಗಳ ಅವಧಿಯಲ್ಲಿ ಔಷಧಿಗಳಲ್ಲಿ ಬಳಸುವ ಅಂಶಗಳನ್ನು ಶೇ.2ರಷ್ಟು ಪ್ರಮಾಣವನ್ನು ಕಡಿತಗೊಳಿಸಿದ್ದೇವೆ ಅಂತ ಕಂಪನಿಗಳು ವಾದಿಸಿದ್ದವು. 328 ಎಫ್ಡಿಸಿಗಳಲ್ಲಿ ಒಳಗೊಂಡಿರುವ ಔಷಧಿಗಳಲ್ಲಿ ಯಾವುದೇ ಚಿಕಿತ್ಸಕ ಸಮರ್ಥಕ ಅಂಶಗಳು ಇಲ್ಲ, ಮಾತ್ರವಲ್ಲ ಇವು ಮನುಷ್ಯರಿಗೆ ಅಪಾಯಕಾರಿ ಎಂದು ಹೇಳಿದೆ. ಆರೋಗ್ಯ ಇಲಾಖೆ ಮತ್ತು ಡ್ರಗ್ ಕಂಪೆನಿಗಳ ಮಧ್ಯೆ 2016ರಿಂದಲೇ ಈ ಬಗ್ಗೆ ಚರ್ಚೆ ನಡೆಯುತ್ತಿದೆ.