ಗಾಂಧಿನಗರ: ಗಾಂಧಿನಗರದ ಸಚಿವಾಲಯದಲ್ಲಿ ಶುಕ್ರವಾರ ಹಲವು ಸಚಿವರು ಅಧಿಕಾರ ಸ್ವೀಕರಿಸಿದರೂ ಉಪ ಮುಖ್ಯಮಂತ್ರಿಯಾಗಿ ನಿತಿನ್ ಪಟೇಲ್ ಅವರು ತಮ್ಮ ಕಚೇರಿಯಲ್ಲಿ ಗೈರು ಹಾಜರಾಗಿರುವುದು ಗುಜರಾತ್ ರಾಜಕೀಯ ವಲಯದಲ್ಲಿ ತಲ್ಲಣವುಂಟು ಮಾಡಿದೆ.
ವಿತ್ತ, ನಗರಾಭಿವೃದ್ಧಿ, ಪೆಟ್ರೋಲಿಯಂ ಖಾತೆಗಳು ಕೈ ತಪ್ಪಿರುವುದಕ್ಕೆ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಅಸಮಾಧಾನಗೊಂಡಿರುವುದು ಅವರ ಆಪ್ತ ಮೂಲಗಳಿಂದ ತಿಳಿದು ಬಂದಿದೆ. ಒಂದು ವೇಳೆ ಉನ್ನತ ನಾಯಕರು ಇದನ್ನು ಸರಿಪಡಿಸದಿದ್ದರೆ ಅವರು ಹೊರ ಬರುವ ಸಂಭವ ಇದೆಯೆಂದು ಹೇಳಲಾಗುತ್ತಿದೆ.
ರಾಜ್ಯ ಬಿಜೆಪಿಯಲ್ಲಿ ಯಾವುದೇ ಬಿಕ್ಕಟ್ಟು, ವಿವಾದ ಇಲ್ಲ. ಹಾಗೇನಾದರೂ ಇದ್ದರೆ ನಾವು ಪರಿಹರಿಸಿಕೊಳ್ಳುತ್ತೇವೆ ಎಂದು ಬಿಜೆಪಿ ರಾಜ್ಯ ಅಧ್ಯಕ್ಷ ಜಿತು ವಘಾನಿ ಹೇಳಿದ್ದಾರೆ
ಪ್ರಮುಖ ಖಾತೆಗಳಾದ ವಿತ್ತ ಖಾತೆಯನ್ನು ಕಿರಿಯ ಸಹೋದ್ಯೋಗಿ ಸೌರಭ್ ಪಟೇಲ್‌ಗೆ ಮತ್ತು ನಗರಾಭಿವೃದ್ಧಿ ಖಾತೆಯನ್ನು ಮುಖ್ಯಮಂತ್ರಿ ವಿಜಯ್ ರೂಪಾನಿ ಇರಿಸಿಕೊಂಡಿದ್ದು, ಪಟೇಲ್ ಅಸಮಾಧಾನಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಮುಂದೇನಾಗಬಹುದು ಎಂದು ಕಾದು ನೋಡಬೇಕಾಗಿದೆ.