ಕೊಚ್ಚಿ: ಇತ್ತೀಚೆಗೆ ಮೀನು ವ್ಯಾಪಾರ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯಾಗಿದ್ದ ಹನಾನ್ ಹಮೀದ್ ಮತ್ತೊಮ್ಮೆ ಸುದ್ದಿಯಾಗಿದ್ದಾಳೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮರಳುತ್ತಿದ್ದಾಗ ಕಾರು ಅಪಘಾತದಲ್ಲಿ ಬೆನ್ನುಹುರಿಗಾದ ಗಾಯಕ್ಕೆ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿದ್ದ ಹನಾನ್ ಈಗ ಚೇತರಿಸಿಕೊಂಡಿದ್ದಾಳೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿಯೂ ಮೀನು ಮಾರಾಟ ಮಾಡಬೇಕೆಂಬುದು ಹನಾನ್‍ರ ಬಯಕೆಯಾಗಿತ್ತು. ಅದಕ್ಕಾಗಿ ಹನಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್‍ ಆದ ಕೂಡಲೇ ಈ ಪ್ರಯತ್ನಕ್ಕಿಳಿದು ಕೊನೆಗೂ ಯಶಸ್ವಿಯಾಗಿದ್ದಾಳೆ.

ಮೀನು ಮಾರಾಟ ಮಾಡುವ ಸಲುವಾಗಿ ಒಂದು ಅಂಗಡಿಯನ್ನು ಬಾಡಿಗೆಗೆ ಪಡೆದುಕೊಂಡಿದ್ದ ಹನಾನ್ ಅದರ ಮಾಲಕರೊಂದಿಗೆ ಭಿನ್ನಾಭಿಪ್ರಾಯದಲ್ಲಿ ಅದನ್ನು ಬಿಟ್ಟು ಬಿಡಬೇಕಾಗಿತ್ತು. ಆದರೆ ಛಲ ಬಿಡದ ಅವಳು ತನ್ನ ಪ್ರಯತ್ನವನ್ನಂತೂ ಕೈಬಿಟ್ಟಿರಲಿಲ್ಲ.

ನಂತರ ಆನ್‍ಲೈನ್ ಆಗಿ ಮೀನು ಮಾರುವ ಉದ್ದೇಶದಿಂದ ಸಾಲಮಾಡಿ ಒಂದು ಪಿಕ್ ಅಪ್ ವ್ಯಾನ್ ಖರೀದಿಸುವ ಸಂಕಲ್ಪ ತೊಟ್ಟ ಹನಾನ್ ಶೋರೋಮ್‍ಗೆ ತೆರಳಿ ವಾಹನದ ಬೆಲೆಯನ್ನು ವಿಚಾರಿಸಿದಾಗ ತನಗೆ ಕೈಗೆಟಕದು ಎಂದು ಮನವರಿಕೆಯಾಗಿತ್ತು. ಸಾಲಕ್ಕಾಗಿ ಹಲವು ಕಡೆ ಯತ್ನಿಸಿದರೂ ಹನಾನ್‍ಳಿಗೆ ಸಿಕ್ಕಿರಲಿಲ್ಲ. ಸ್ವಂತ ಮನೆ, ವಿಳಾಸ ಇಲ್ಲದ್ದರಿಂದ ಆಸ್ತಿ ಇರುವವರು ಜಾಮೀನು ನೀಡಿದರೆ ಸಾಲ ಸಿಗಬಹುದೆಂದು ಹನಾನ್‍ಗೆ ತಿಳಿಯಿತು.

ಈ ಸಂದರ್ಭದಲ್ಲಿ ಒಬ್ಬ ವ್ಯಕ್ತಿ ಹನಾನ್ ಸಹಾಯಕ್ಕೆ ಮುಂದೆ ಬಂದಿದ್ದಾರೆ. ಸಾಲ ಪಡೆದು ಹನಾನ್ ಟಾಟ ಏಸ್ ಪಿಕ್ ಅಪ್ ವ್ಯಾನ್ ಖರೀದಿಸಿದ್ದಾರೆ. ನಂತರ ಏಸ್‍ನಲ್ಲಿ ಆರೋಗ್ಯ ತಪಾಸಣೆಗೆ ಎರ್ನಾಕುಳಂ ಮೆಡಿಕಲ್ ಟ್ರಸ್ಟ್ ಆಸ್ಪತ್ರೆಗೆ ಬಂದಿಳಿದದ್ದು ಕಂಡು ಎಲ್ಲರಿಗೂ ಆಶ್ಚರ್ಯವಾಗಿತ್ತು. ಯಾಕೆಂದರೆ ಆಸ್ಪತ್ರೆಯಲ್ಲಿ ಹನಾನ್‍ಗಾಗಿ ವ್ಹೀಲ್ ಚೇರ್ ಸಿದ್ಧಪಡಿಸಿ ಕಾದಿದ್ದ ಆಸ್ಪತ್ರೆಯ ಅಧಿಕಾರಿಗಳಿಗೆ ಹನಾನ್‍ರ ಈ ರೀತಿಯ ಚೇತರಿಕೆ ಅನಿರೀಕ್ಷಿತವಾಗಿತ್ತು. ಕೊನೆಗೆ ಆಸ್ಪತ್ರೆಯ ಅಧಿಕಾರಿಗಳ ಒತ್ತಾಯ ಮಣಿದು ಹನಾನ್ ವ್ಹೀಲ್ ಚೇರಿನಲ್ಲಿ ಕುಳಿತು ಆರೋಗ್ಯ ತಪಾಸಣೆ ನಡೆಸಿದ ಬಳಿಕ ಆಸ್ಪತ್ರೆ ಅಧಿಕಾರಿಗಳಿಗೆ,ವೈದ್ಯರಿಗೆ ಕೃತಜ್ಞತೆ ಹೇಳಿದ ಹನಾನ್ ತನ್ನ ಟಾಟಾ ಏಸ್‍ನಲ್ಲಿ ಮರಳಿದ್ದಾರೆ.

Leave a Reply