ಬಂಟ್ವಾಳದ ನಾವೂರು ಹಳೇಗೇಟಿನ ಯುವಕ ಹರೀಶ್ ಪೂಜಾರಿ ದುಷ್ಕರ್ಮಿಗಳ ತಲ್ವಾರಿಗೆ ಬಲಿಯಾಗಿ ಬರೋಬ್ಬರಿ 2 ವರ್ಷ, 2 ತಿಂಗಳು ಕಳೆದಿದೆ. 2015 ನವಂಬರಲ್ಲಿ ಸ್ನೇಹಿತ ಸಮೀವುಲ್ಲಾ ಜೊತೆ ಬೈಕಲ್ಲಿ ಹೋಗುತ್ತಿದ್ದಾಗ ಕಾರಲ್ಲಿ ಬಂದ ದುಷ್ಕರ್ಮಿಗಳು ಹರೀಶ್ ನನ್ನು ಆತನ ಮನೆ ಸಮೀಪವೇ ಕೊಂದಿದ್ದರು. ನಂತರ ಆರೋಪಿಗಳು ಸಿಕ್ಕಿದ ಕಾರಣ ಸಂಭಾವ್ಯ ಕೋಮು ಗಲಭೆ ತಪ್ಪಿತು. ರಾಜಕೀಯ ಪುಡಾರಿಗಳ ಜಾತಿ ರಾಜಕಾರಣಕ್ಕೂ ಕಡಿವಾಣ ಬಿತ್ತು. ಕೊಲೆಯಾದ ಒಂದಷ್ಟು ದಿನ ಕುಟುಂಬದ ಜೊತೆಗೆ ಕನಿಕರ, ಮರುಕ ಎಲ್ಲವೂ ಇತ್ತು. ಕ್ರಮೇಣ ಜನ ಮರೆತೇ ಬಿಟ್ಟರು.

ಆದರೆ ಈ ಹರೀಶ್ ಪೂಜಾರಿ ಕುಟುಂಬದ ಈಗಿನ ಪರಿಸ್ಥಿತಿ ಏನು? ಅವರೇನು ಮಾಡುತ್ತಿದ್ದಾರೆಂದು ಅರಿಯಲು ಬಂಟ್ವಾಳದ ಹಳೇಗೇಟಿನ ಮನೆ ಕಡೆ ಹೊರಟವರಿಗೆ ಬೀಗ ಜಡಿದ ಬಾಗಿಲು ಸ್ವಾಗತಿಸುತ್ತಿದೆ. ಮನೆಯ ಪರಿಸರದಲ್ಲಿ ನೀರವ ಮೌನ ತಾಂಡವವಾಡುತ್ತಿದೆ. ಹರೀಶನ ಸಾವಿನ ಜೊತೆಗೆ ಆ ಮನೆಯ ದೀಪವೂ ಆರಿದೆ. ಮನೆ ಅಕ್ಷರಶಃ ಅನಾಥವಾಗಿದೆ.

ಹರೀಶ್ ಪೂಜಾರಿ ಹತ್ಯೆಯಾದ ಒಂದೇ ತಿಂಗಳಲ್ಲಿ ತಂದೆ ಶ್ರೀನಿವಾಸ ಪೂಜಾರಿ ಇಹಲೋಕ ತ್ಯಜಿಸಿದರು. ತಾಯಿ ಸೀತಮ್ಮಳ ಆರೋಗ್ಯದಲ್ಲೂ ಏರುಪೇರು ಕಾಣಿಸಲಾರಂಭಿಸಿತು. ಇರುವ ಏಕೈಕ ಸಹೋದರಿ ಮಿತಾಲಕ್ಷ್ಮಿ ಕುಟುಂಬದ ಹೊಣೆ ಹೊರಬೇಕಾಯಿತು. ಖಾಸಗಿ ಸಂಸ್ಥೆಯಲ್ಲಿ ಕೆಲಸವನ್ನು ಮುಂದುವರೆಸಿದರು. ಹರೀಶ್ ಹತ್ಯೆಯಾದಾಗ ರಾಜಕೀಯ ನಾಯಕರು ಆಕೆಗೆ ಕೆಲಸ ಕೊಡುವ ಭರವಸೆ ನೀಡಿ ಅರ್ಜಿ, ಬಯೋಡೆಟಾ ಪಡಕೊಂಡು ಹೋದವರು ಮತ್ತೆ ಬಂದಿಲ್ಲ. ಹರೀಶ್ ತಾಯಿ ಮತ್ತು ಮಗಳು ಅನಿವಾರ್ಯವಾಗಿ ಶಂಭೂರಿನಲ್ಲಿರುವ ಮಾವನ ಮನೆ ಸೇರಬೇಕಾಯಿತು. ಸ್ವಂತ ಮನೆಗೆ ಬೀಗ ಬಿತ್ತು. ಒಬ್ಬ ಮಗನನ್ನು ಕಳಕೊಂಡ ಮನೆ ಆಧಾರಸ್ಥಂಭವಿಲ್ಲದೆ ಅನಾಥವಾಯಿತು. ಬಹುಶಃ ಹರೀಶ್ ಇರುತ್ತಿದ್ದರೆ ಇವರ ಜೀವನ ಶೈಲಿಯೇ ಬದಲಾಗುತ್ತಿತ್ತೇನೋ. ಕರಾವಳಿಯಲ್ಲಿ ಹತ್ಯೆಯಾದ ಬಹುತೇಕ ಕುಟುಂಬಗಳ ಕಥೆ ಇದೇ ರೀತಿ ದಾರುಣವಾಗಿದೆ. ಇದಕ್ಕೆ ಹೊಣೆ ಯಾರು?
-ರಶೀದ್ ವಿಟ್ಲ.

Leave a Reply