ಉತ್ತರ ಕರ್ನಾಟಕದಲ್ಲಿ ಎಡೆಬಿಡದೆ ನಿರಂತರವಾಗಿ ಸುರಿದು ವ್ಯಾಪಕ ಅನಾಹತ ಉಂಟು ಮಾಡಿರುವ ಮಳೆ ರಾಜ್ಯದ ದಕ್ಷಿಣ ಭಾಗದತ್ತ ತಿರುಗಿದ್ದು ಕೊಡಗು, ಚಿಕ್ಕಮಗಳೂರು, ಮೈಸೂರು, ಹಾಸನ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲೂ ಭಾರೀ ಆವಾಂತರ ಸೃಷ್ಟಿಸಿದ್ದು, ಶಾಲೆಗಳಿಗೆ ರಜೆಯನ್ನು ಮೊಂದೂಡಲಾಗಿದೆ. ಮಳೆ ಪ್ರವಾಹದ ಹೆಚ್ಚಿನ ಅನಾಹುತವನ್ನು ತಡೆಯುವ ನಿಟ್ಟಿನಲ್ಲಿ ಸೇನೆಯ ನೆರವು ಪಡೆಯಲಾಗಿದ್ದು ಅಗ್ನಿಶಾಮಕದಳ ಮತ್ತು ಪೊಲೀಸ್ ಇಲಾಖೆ ಕೂಡಾ ಶಕ್ತಿಮೀರಿ ಶ್ರಮಿಸುತ್ತಿವೆ.

ಮಳೆ ಅನಾಹುತಕ್ಕೆ ರಾಜ್ಯದಲ್ಲಿ ಮತ್ತೆ ನಾಲ್ವರು ಬಲಿಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ನಾಗರಮುನ್ನೋಳಿ ಗ್ರಾಮದ ಶಿಲ್ಪಾ ಮನಗೂಳಿ ಎಂಬ ಹತ್ತು ವರ್ಷದ ಬಾಲಕಿ ಹಳ್ಳ ದಾಟುವಾಗ ತಂದೆ-ತಾಯಿ ಎದುರಿಗೆ ನೀರುಪಾಲಾಗಿದ್ದು, ಧಾರವಾಡ-ದಾಂಡೇಲಿ ರಸ್ತೆಯಲ್ಲಿ ಆಟೋ ಸಮೇತ ಚಾಲಕನೋರ್ವ ಕೊಚ್ಚಿ ಹೋಗಿರುವ ಘಟನೆಗಳು ವರದಿಯಾಗಿವೆ.
ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣಕನ್ನಡ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮಳೆ ಆರ್ಭಟ ಮುಂದುವರಿದಿದ್ದು ಮನೆಗಳು ಜಲಾವೃತಗೊಂಡಿದ್ದು ಹಲವಡೆ ರಸ್ತೆ ಸಂಪರ್ಕ ಕಡಿದುಹೋಗಿದೆ. ನೆರವಿಗಾಗಿ ಕೊಡಗು ಜಿಲ್ಲೆಯಲ್ಲಿ ನೆರವಿಗಾಗಿ ಹಾತೊರೆಯುವಂತ ಸ್ಥಿತಿ ಸೃಷ್ಟಿಯಾಗಿದೆ. ಮಳೆಯ ರಭಸ ಬೆಳಗಾವಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಕಮ್ಮಿಯಾಗಿದ್ದು ನೀರಿನ ಪ್ರವಾಹ ಇಳಿಮುಖಗೊಂಡಿದೆ. ಮಳೆಯಿಂದಾಗಿ ಕೆಂಗೆಟ್ಟಿದ್ದ ಬೆಳಗಾವಿ ನಗರಕ್ಕೆ ಮಳೆ ಕೊಂಚ ಬಿಡುವು ನೀಡಿದ್ದು ಜನರು ನಿಟ್ಟುಸಿರು ಬಿಡುವಂತಾಗಿದೆ. ಇನ್ನುಳಿದಂತೆ ಪ್ರವಾಹ ಪರಿಸ್ಥಿತಿ ಯಥಾರೀತಿ ಮುಂದುವರಿದಿದೆ, ಮಳೆ ಹಾವಳಿಗೆ ಧಾರವಾಡ ಹುಬ್ಬಳ್ಳಿ ಹಾಗೂ ಬಾಗಲಕೋಟೆ ಜಿಲ್ಲೆ ಸೇರಿದಂತೆ ಮಳೆ ಬಾಧಿತ ಪ್ರದೇಶಗಳಲ್ಲಿ ನೂರಾರು ಮನೆಗಳು ಕುಸಿದಿವೆ.

ಈ ನಿಟ್ಟಿನಲ್ಲಿ ಕರ್ನಾಟಕದಾದ್ಯಂತ ಮಸೀದಿಗಳಲ್ಲಿ ಮುಸ್ಲಿಂ ಸಂಘ ಸಂಸ್ಥೆಗಳು ಸಾರ್ವಜನಿಕರಿಂದ ಹಣ ಸಂಗ್ರಹಿಸಿ ನೆರೆ ಸಂತ್ರಸ್ತರಿಗೆ ನೆರವನ್ನು ನೀಡುವ ಕೆಲಸವನ್ನು ಮಾಡುತ್ತಿದ್ದಾರೆ. ಶುಕ್ರವಾರ ಜುಮಾ ನಮಾಜ್ ಬಳಿಕ ಮಸೀದಿಗಳಲ್ಲಿ ನೆರೆ ಪೀಡಿತರಿಗಾಗಿ ಹಣ ಸಂಗ್ರಹ ಮಾಡುವ ಕೆಲಸದಲ್ಲಿ ತೊಡಗಿ ಕೊಂಡಿದೆ. ಜಮಾತೆ ಇಸ್ಲಾಮಿ ಹಿಂದ್ ಅಂಗ ಸಂಸ್ಥೆ ಹೆಚ್ ಆರ್ ಎಸ್ ಸೇರಿದಂತೆ ಮತ್ತಿತರ ಮುಸ್ಲಿಂ ಸಂಘಟನೆಗಳು ನೆರೆ ಪರಿಹಾರ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ಮನುಷ್ಯ ದ್ವೇಷ, ಅಸೂಯೆ, ಪರಸ್ಪರ ಕಚ್ಚಾಡುವ ಈ ಸಂದರ್ಭದಲ್ಲಿ ಪ್ರಕೃತಿ ವಿಕೋಪಗಳು ಎಲ್ಲರನ್ನೂ ಮತ್ತೆ ಮತ್ತೆ ಒಂದಾಗಿಸುವ ಕೆಲಸವನ್ನು ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಎಲ್ಲರೂ ಜಾತಿ ಮತ ಭೇಧ ಮರೆತು ಮಾನವೀಯತೆ ತೋರಬೇಕಾದ ಅವಶ್ಯಕತೆ ಇದೆ.

LEAVE A REPLY

Please enter your comment!
Please enter your name here