ಚಂಡಮಾರುತ, ಭೂಕಂಪ ಮುಂತಾದ ಪ್ರಕೃತಿ ವಿಕೋಪದ ಪ್ರತಿಯೊಂದು ಸಂದರ್ಭಗಳಲ್ಲೂ ಜಾತಿಬೇಧವನ್ನು ತೊರೆದು ಮಾನವರೆಂಬ ಬುನಾದಿಯಲ್ಲಿ ನಾವೆಲ್ಲ ಒಂದಾಗಲಿಲ್ಲವೇ? ಪರಸ್ಪರ ಸಹಕರಿಸಲಿಲ್ಲವೇ? ಬೇಡ ಬಿಡಿ, ಈಗಲೂ ಆಸ್ಪತ್ರೆಯ ವಾರ್ಡ್‌ಲ್ಲಿ ಚಿಕಿತ್ಸೆ ಪಡೆಯುವಾಗ ಪಕ್ಕದ ಹಾಸಿಗೆಯಲ್ಲಿರುವ ವ್ಯಕ್ತಿಯ ಜಾತಿಯ ಬಗ್ಗೆ ತಲೆಕೆಡಿಸದೆ ಕುಶಲೋಪಚರಿ ಹಂಚುವುದಿಲ್ಲವೇ? ಪರಸ್ಪರ ಕನಿಕರ ವ್ಯಕ್ತಪಡಿಸುವುದಿಲ್ಲವೇ? ಪಕ್ಕದ ರೋಗಿಯ ಜತೆನಿಂತ ಸಂಬಂಧಿಯೊಂದಿಗೆ ಚೀಟಿ ಮತ್ತು ಹಣ ಕೊಟ್ಟು ನಮಗೂ ಔಷಧಿ ತರಿಸುವುದಿಲ್ಲವೇ? ರೋಗಿಗಳಿಗೆ ಊಟ ವಿತರಿಸುವ ಸಂದರ್ಭದಲ್ಲೂ ಬಟ್ಟಲು ಕೊಟ್ಟು ಪಕ್ಕದವರನ್ನೇ ಸರತಿಯ ಸಾಲಲ್ಲಿ ನಿಲ್ಲಿಸುವುದಿಲ್ಲವೇ? ನಮ್ಮ ಅನಿವಾರ್ಯತೆಯನ್ನು ಅರ್ಥಮಾಡಿಕೊಂಡು ಅವರೂ ನಮ್ಮೊಂದಿಗೆ ಸಹಕರಿಸಲಿಲ್ಲವೇ? ಇದಲ್ಲದೆ ಮಾನವೀಯ ನೆಲೆಯಲ್ಲಿ ಬೇರೆಬೇರೆ ಸಹಾಯ-ಸಹಕಾರ, ಸುಖ-ದುಃಖಗಳನ್ನು ಬದುಕಲ್ಲಿ ವಿನಿಮಯಿಸಿ ಕೊಳ್ಳುವಾಗ ಅಂದು ಜಾತಿದ್ವೇಷ ಎಲ್ಲಿ ಸತ್ತು ಹೋಗಿತ್ತು? ಪ್ರತಿಯೊಬ್ಬರೂ ಮತ್ತೆಮತ್ತೆ ಯೋಚಿಸಿ ನೋಡಿ!

ಇತರ ಧರ್ಮೀಯರನ್ನು ದ್ವೇಷಿಸುವಂತೆ ಪ್ರಚೋದಿಸುವ ಧರ್ಮರಕ್ಷಣೆ ಖಂಡಿತ ಹಿಂದೂ ಧರ್ಮದ್ದೂ ಅಲ್ಲ. ಇಸ್ಲಾಮ್‌ ಧರ್ಮದ್ದೂ ಅಲ್ಲ. ಅದು ಜನರನ್ನು ಪರಸ್ಪರ ವಿಭಜಿಸಿ ಓಟಿನ ಲೆಕ್ಕಾಚಾರ ನಡೆಸುವ ಷಂಡ ರಾಜಕೀಯದ್ದು. ಪ್ರಜಾಪ್ರಭುತ್ವದ ಕಾವಲುನಾಯಿಯೆಂಬ ಜವಾಬ್ದಾರಿಕೆಗೆ ದ್ರೋಹಬಗೆದು, ತುಪ್ಪಕ್ಕೆ ಕಡ್ಡಿಗೀರಿ ಕೇಕೆ ಹಾಕುವ ಕೆಲವು ಮಾಧ್ಯಮಗಳದ್ದು. ಅವರು ಅಮಾಯಕರ ಶವಗಳನ್ನೇ ಮೆಟ್ಟಿಲುಗಳನ್ನಾಗಿಸಿ ಮತ್ತಷ್ಟು ಶ್ರೀಮಂತರಾಗುತ್ತಾರೆ.* ಈ ಸಮಾಜದ್ರೋಹಿಗಳನ್ನು ಗುರುತಿಸಲು ನಮ್ಮಲ್ಲಿ ಪ್ರತಿಯೊಬ್ಬರಿಗೂ ಸಾಧ್ಯವಾಗಬೇಕು. ನಾವು ಬರೀ ಮೂಕ ಪಿಶಾಚಿಗಳಾಗಬಾರದು. ಒಟ್ಟಿನಲ್ಲಿ ಸಾಮರಸ್ಯ ಎಂಬುದು ಒಂದು ದಿನಕ್ಕೋ ವೇದಿಕೆಗೋ ಅನಾರೋಗ್ಯದ ಸಂದರ್ಭಕ್ಕೋ ಸೀಮಿತವಾಗಬಾರದು. ಅದು ಬದುಕಿನುದ್ದಕ್ಕೂ ಪಾಲನೆಯಾಗಬೇಕು. ಅದರ ಸೌಂದರ್ಯಕ್ಕೆ ನಮ್ಮ ಪರಿಸರ ಬೆಳಗಬೇಕು. ಮಿನುಗಬೇಕು.

ಹೌದು! ಸಾಮಾಜಿಕ ಜೀವನದ ಭದ್ರತೆಗೆ ಇಸ್ಲಾಮ್‌ ವಿಶೇಷ ಮಹತ್ವ ನೀಡಿದೆ. ಸಹಬಾಳ್ವೆಯ ಬೆಳವಣಿಗೆಗೆ ಅದು ಸಾಕಷ್ಟು ನಿಯಮ ನಿಬಂಧನೆಗಳನ್ನು ರೂಪಿಸಿದೆ. ಕೋಮುವಾದದ ವಿಷ ಚಿಂತನೆಯತ್ತ ಕರೆ ನೀಡುವವ ಮತ್ತು ಅದಕ್ಕಾಗಿ ಸಾಯುವವ ಮುಸ್ಲಿಮನಲ್ಲವೆಂಬ ಇಸ್ಲಾಮ್‌ನ ಆದರ್ಶ, ಸಾರ್ವಕಾಲಿಕ. ಆರಾಧನೆಗಳು ಸ್ವೀಕರಿಸಲ್ಪಡ ಬೇಕಾದರೆ, ಆತ ಕೋಮುವಾದದ ವಿಷ ಚಿಂತನೆಯಿಂದ ದೂರ ಸರಿಯಲೇ ಬೇಕು. ಅಂದರೆ ಯಾವ ಕಾರಣಕ್ಕೂ ಸಾಮಾಜಿಕ ಶಾಂತಿಯನ್ನು ಕದಡಬಾರದೆಂದರ್ಥ. ಹಾಗೆಯೇ ಸಮಾಜಕ್ಕೆ ಹಾನಿಕರವಾದ ಎಲ್ಲ ಕೆಡುಕುಗಳ ದ್ವಾರಗಳನ್ನು ಮುಚ್ಚಿ ಹಾಕುವಂತೆ ಅದು ತಾಕೀತು ನೀಡಿದೆ. ಈ ನಿಟ್ಟಿನಲ್ಲಿ ಒಟ್ಟು ಸಮಾಜದ ಶಾಂತಿ, ಸಾಮರಸ್ಯ ಬೆಳೆಸುವಲ್ಲಿ ಎಲ್ಲರೂ ಮಹತ್ತರವಾದ ಪಾತ್ರವಹಿಸ ಬೇಕಾಗಿದೆ. ಪರಿಸ್ಥಿತಿಯ ಸುಧಾರಣೆಗೆ ಸಹಕರಿಸ ಬೇಕು. ವೈವಿಧ್ಯತೆಯಲ್ಲಿ ಏಕತೆ ಎಂಬುದು ಈ ಮಣ್ಣಿನ ಗುಣ. ಆದ್ದರಿಂದ ಅದರ ಋಣ ತೀರಿಸೋಣ! ಪರಸ್ಪರ ಅರಿತು ಸಾಮರಸ್ಯ-ಸಹಬಾಳ್ವೆಯ ಸವಿಯನ್ನು ಆಸ್ವದಿಸುತ್ತಲೇ ನಾಡಿನುದ್ದಕ್ಕೂ ಅದನ್ನು ಪಸರಿಸೋಣ. ಹೃದಯಗಳನ್ನು ಬೆಸೆದು ಸಂತುಲಿತ ಸಮಾಜ ನಿರ್ಮಾಣಕ್ಕೆ ಕಟಿಬದ್ಧರಾಗೋಣ. ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಏನೂ ಕೆಲಸ ಮಾಡದೆ, ಬರೀ ಜಾತಿಯ ವಿಷಬೀಜವನ್ನು ಬಿತ್ತಿ ಬೆಂಕಿ ಹಚ್ಚಿ ಬಿಸಿನೀರು ಕಾಯಿಸುವ ಅಪಾಯಕಾರಿ ರಾಜಕೀಯ ಸಿದ್ಧಾಂತಕ್ಕೆ ಯಾರೂ ಬಲಿಪಶುಗಳಾಗಬಾರದು. ಪ್ಲೀಸ್‌…

ಮುಹಮ್ಮದ್‌ ‌ಸಿದ್ದೀಕ್‌, ಜಕ್ರಿಬೆಟ್ಟು

Leave a Reply