ಪ್ರೊ| ಎ.ಎಫ್. ಲಕ್ಷ್ಮೇಶ್ವರ ಹುಬ್ಬಳ್ಳಿ

2019ರ ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮುಸ್ಲಿಮರ ಬಗ್ಗೆ ಹಿಂದೂಗಳ ಮನಸ್ಸಿನಲ್ಲಿ ದ್ವೇಷ ಭಾವನೆಗಳು ಪುಟಿದೇಳುವಂತೆ ಮಾಡಿ, ಹಿಂದೂಗಳ ಮತಗಳಿಂದಲೇ ಆರಿಸಿ ಬರುವ ತಯಾರಿ ಬಹಳ ಜೋರಾಗಿ ನಡೆಯುತ್ತಿದೆ.

ಬಹಳಷ್ಟು ಟಿ.ವಿ. ಚಾನೆಲ್‍ಗಳ ಅಧಿಕಾರಿಗಳನ್ನು, ಪತ್ರಿಕಾ ಮಾಲಿಕರನ್ನು ಹಣದ ಆಮಿಷ ತೋರಿಸಿ, ಆಮಿಷಕ್ಕೆ ಒಳಗಾಗದಿದ್ದರೆ ಹೆದರಿಸಿ, ಇಸ್ಲಾಮ್, ವಿಪಕ್ಷದ ರಾಜಕಾರಣಿಗಳ ಕುರಿತು ಸುಳ್ಳು ಸುದ್ದಿ, ದ್ವೇಷ ಹುಟ್ಟಿಸುವ ಒಪ್ಪಂದವನ್ನು ಪ್ರಭುತ್ವ ಮಾಡಿಕೊಂಡಿರುವಂತಿದೆ.

ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕಾ ಸ್ವಾತಂತ್ರ್ಯವನ್ನು ದಾಸ್ಯಕ್ಕೆ ಒಳಪಡಿಸಲಾಗಿದೆ. ಸಿ.ಬಿ.ಐ, ಇ.ಡಿ.ಗಳ ಮುಖಾಂತರವೂ ಹೆದರಿಸಲಾಗುತ್ತದೆ. ತಮ್ಮ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆಂದು ಎಷ್ಟೋ ಅಧಿಕಾರಿಗಳು ಈ ದಾಳಕ್ಕೆ ಬಲಿಯಾಗಿದ್ದಾರೆ. ಧಮಕಿಗಳಿಗೆ ಒಪ್ಪಿಕೊಂಡಿದ್ದಾರೆ. ಇದು ದೇಶದ ಅತ್ಯಂತ ದೊಡ್ಡ ದುರ್ದೈವ. ಸರಕಾರದ ಈ ನಡೆಯನ್ನು ಸುಪ್ರೀಮ್ ಕೋರ್ಟಿನ ಹಿರಿಯ ವಕೀಲರಾದ ಶ್ರೀ ಪ್ರಶಾಂತ್ ಭೂಷಣ್ ಖಂಡಿಸಿದ್ದಾರೆ. ಭಾರತದ ಭವಿಷ್ಯದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸರಕಾರದ ಲೋಪದೋಷಗಳನ್ನು ಎತ್ತಿ ತೋರಿಸುತ್ತಿದ್ದ ಎನ್.ಡಿ.ಟಿ.ವಿ. ಮೇಲೆ ಆಡಳಿತಗಾರರು ಗದಾಪ್ರಹಾರ ನಡೆಸುತ್ತಿದ್ದಾರೆ. ಬಿಜೆಪಿ ಪರ ಪ್ರಚಾರ ಮಾಡಲು ಒತ್ತಡ ಹೇರುತ್ತಿದ್ದಾರೆ. ಪ್ರಧಾನಿಯವರು ಒಂದು ಭಾಷಣದಲ್ಲಿ ಓರ್ವ ಮಹಿಳೆಗೆ “ನಿನ್ನ ಮಾಸಿಕ ಉತ್ಪನ್ನ ಎಷ್ಟಾಗಿದೆ?” ಎಂದು ಕೇಳಿದ್ದರು. ಅವಳು ಎದ್ದು ನಿಂತು “ನಮ್ಮ ಮಾಸಿಕ ಉತ್ಪನ್ನ ದುಪ್ಪಟ್ಟಾಗಿದೆ” ಎಂದು ಬಹಿರಂಗವಾಗಿ ಹೇಳಿದ್ದಳು. ಈ ಹೇಳಿಕೆಯ ಸತ್ಯಾಸತ್ಯತೆಯನ್ನರಿಯಲು ಎ.ಬಿ.ಪಿ. ನ್ಯೂಸ್‍ನ ವರದಿಗಾರ ಆ ಮಹಿಳೆಯನ್ನು ಭೇಟಿಯಾಗಿ ವಿಚಾರಿಸಿದಾಗ “ರಾಜಕಾರಣಿಗಳು ಬಂದು ಹಣ ಕೊಟ್ಟು ಹೀಗೆ ಹೇಳು ಎಂದು ಹೇಳಿದ್ದರಿಂದ ನಾನು ಹಾಗೆ ಹೇಳಿದೆ” ಎಂದು ಆ ಮಹಿಳೆ ಹೇಳಿದರು. ಇದನ್ನು ಎ.ಬಿ.ಪಿ. ನ್ಯೂಸ್‍ನ ಪುಣ್ಯ ಪ್ರಸೂನ್ ವಾಜಪೇಯಿ ರಾತ್ರಿ 9 ಗಂಟೆಗೆ `ಮಾಸ್ಟರ್ ಸ್ಟ್ರೋಕ್’ ಕಾರ್ಯಕ್ರಮದಲ್ಲಿ ಬಿತ್ತರಿಸಿದರು. ಇಷ್ಟು ಸಾಕು, ಅವರ ಮೇಲೆ ಒತ್ತಡ ಪ್ರಾರಂಭವಾಯಿತು. ಒತ್ತಡ ಎಷ್ಟು ಜೋರಾಯಿತೆಂದರೆ ಅವರು ನೌಕರಿಗೆ ರಾಜೀನಾಮೆ ನೀಡಿದರು. ಅಂಜುಬುರುಕರು ಪಾದಗಳನ್ನು ನೆಕ್ಕುತ್ತಾರೆ, ಧೀರರು ರಾಜೀನಾಮೆ ನೀಡುತ್ತಾರೆ ಎನ್ನುವ ಮೆಸೇಜ್‍ಗಳು ಹರಿದಾಡ ತೊಡಗಿದವು. ಇವರೊಂದಿಗೆ ಇನ್ನೊಬ್ಬ ವರದಿಗಾರ ಅಭಿಸಾರ ಶರ್ಮರಿಗೆ 15 ದಿನಗಳ ರಜೆ ಹಾಕಿ ಹೋಗಲು ತಿಳಿಸಲಾಯಿತು. ಮಿಲಿಂದ ಖಾಂಡೆಕರ್ ಎಂಬ ಅಧಿಕಾರಿಗೂ ರಾಜೀನಾಮೆ ನೀಡಲು ಒತ್ತಡ ಬರ ತೊಡಗಿತು.

ಓರ್ವ ಸ್ತ್ರೀಯಂತೂ ಬಹಿರಂಗ ಸಭೆಯಲ್ಲಿ ಮುಸ್ಲಿಮರ ಅಝಾನ್ ಕೊಡುವುದರ ಕುರಿತು, ಐದು ಹೊತ್ತಿನ ನಮಾಝ್ ಹಾಗೂ ಹಜ್ಜ್ ಕುರಿತು ಇಲ್ಲ ಸಲ್ಲದ ಆರೋಪಗಳನ್ನು ಮಾಡ ತೊಡಗಿದ ಭಾಷಣ, ಮೊಬೈಲ್‍ಗಳಲ್ಲಿ ವೈರಲ್ ಆಗ ತೊಡಗಿದೆ. ಮುಸ್ಲಿಮರು ಕೇವಲ ಅಲ್ಲಾಹನ ಮೇಲೆ ಹಾಗೂ ಆತನ ಪ್ರವಾದಿಗಳ ಮೇಲೆ ವಿಶ್ವಾಸವಿಡುತ್ತಾರೆ. ಇವರಿಬ್ಬರನ್ನು ಬಿಟ್ಟು ನಾವು ಅನ್ಯರ ಮೇಲೆ ನಂಬಿಕೆ ಇಡುವುದಿಲ್ಲವೆಂದು ಅವರು ಸ್ಪಷ್ಟವಾಗಿ ಹೇಳುತ್ತಾರೆ. ಐದು ಸಲದ ನಮಾಝ್‍ನಲ್ಲಿ ಇವರಿಬ್ಬರ ಬಗ್ಗೆಯೇ ಪವಿತ್ರ ಭಾವನೆಗಳನ್ನು ಭಕ್ತರ ಮನಸ್ಸಿನಲ್ಲಿ ತುಂಬುತ್ತಾರೆ. ಹಾಗಾದರೆ ನಾವು ಹಿಂದುಗಳು ಅನ್ಯ ದೇವರುಗಳ ಬಗ್ಗೆ ಮಾತನಾಡಿದರೆ ಮುಸ್ಲಿಮರು ಖಡ್ಗ ತೆಗೆದು ಕೊಂಡು ಬರುವುದಿಲ್ಲವೇ? ಹಿಂದೂಗಳ ಮೇಲೆ, ಅವರ ದೇವಾಲಯಗಳ ಮೇಲೆ ಆಕ್ರಮಣ ಮಾಡುವುದಿಲ್ಲವೇ” ಎಂದು ಆಕೆ ಪ್ರಶ್ನಿಸುತ್ತಾಳೆ.

ಭಾರತ್ ಮಾತಾಕೀ ಜೈ, ವಂದೇ ಮಾತರಂ ಹೇಳದಿದ್ದರೆ ಪಾಕಿಸ್ತಾನಕ್ಕೆ ಹೋಗಿ ಎನ್ನುವ ಹೇಳಿಕೆಗಳು ಬಹಳ ಹಿಂದೆಯೇ ಬಂದಿವೆ. ವಂದೇ ಮಾತರಂ ಗೀತೆಯನ್ನು ಸಂಪೂರ್ಣವಾಗಿ ಹೇಳಲು ಬಿ.ಜೆ.ಪಿ.ಯ ಎಷ್ಟೋ ನಾಯಕರಿಗೇ ಬರುವುದಿಲ್ಲವೆನ್ನುವುದು ಟಿ.ವಿ. ಮಾಧ್ಯಮಗಳು ತೋರಿಸಿಕೊಟ್ಟಿವೆ. ತಮಗೆ ಹೇಳಲು ಬಾರದಿದ್ದರೂ, ಮುಸ್ಲಿಮರು ಹೇಳಬೇಕೆನ್ನುವುದು, ತನ್ಮೂಲಕ ಅವರ ಧಾರ್ಮಿಕ ಭಾವನೆಗಳನ್ನು ಕೈ ಬಿಡುವಂತೆ ಮಾಡುವುದು ಅವರ ಉದ್ದೇಶ. ಭಾರತದಿಂದ ಇಸ್ಲಾಮ್ ಮುಗಿಸಿ ಬಿಡಬೇಕೆನ್ನುವುದು ಅವರ ರಹಸ್ಯ ಕಾರ್ಯಸೂಚಿ. ಭಾಷಣದಲ್ಲಿ ಮೋಹನ್ ಭಾಗವತ್ ಒಮ್ಮೆ ಹೇಳಿದ್ದರು- “ಮುಸ್ಲಿಮರು ಮೂಲದಲ್ಲಿ ಹಿಂದೂಗಳೇ, ಅವರು ತಮ್ಮ ಇಸ್ಲಾಮ್ ಸಂಬಂಧಿ ಕಟ್ಟರ್ ಭಾವನೆಗಳನ್ನು ತ್ಯಜಿಸಬೇಕು, ಹಿಂದೂಗಳೊಂದಿಗೆ ಸೌಹಾರ್ದದಿಂದ ಇರಬೇಕು.”

ಕಟ್ಟರ್ ಎಂದರೇನು? ಸತ್ಯವಾದದ್ದನ್ನು ಸತ್ಯವಾಗಿದೆ ಎಂದು ಹೇಳುವುದು ಕಟ್ಟರ್‍ತನವೇ? ಸುಳ್ಳನ್ನೇ, ಸತ್ಯವೆಂದು ಹೇಳುವುದು, ಅದನ್ನೇ ನಂಬಲು ಒತ್ತಾಯ ಮಾಡುವುದು ಇಲ್ಲವಾದರೆ ಕೊಲ್ಲುವುದು, ಇದು ಕಟ್ಟರ್‍ತನವಲ್ಲವೇ?

ಗೋಮಾಂಸವನ್ನು ನೆವನ ಮಾಡಿಕೊಂಡು ಉತ್ತರ ಪ್ರದೇಶ, ಹರಿಯಾಣಗಳಲ್ಲಿ 27 ಮುಸ್ಲಿಮರ ಹತ್ಯೆಗಳಾಗಿವೆ. ಪ್ರಧಾನಿಗಳು, ಗೋರಕ್ಷರ ಬಗ್ಗೆ ಒಮ್ಮೆ ಖಾರವಾಗಿ ಹೇಳಿದ್ದನ್ನು ಬಿಟ್ಟರೆ, ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಗಂಭೀರವಾಗಿ ಹೇಳಿಲ್ಲ.

ಹರ್ಯಾಣದ ಒಂದು ಹಳ್ಳಿಯಲ್ಲಿ ನಮಾಝ್ ಮಾಡುತ್ತಿರುವಾಗ ಕೆಲ ಪುಂಡರು ಪ್ರವೇಶಿಸಿ “ನೀವು ಮಸೀದಿಯಲ್ಲಿ ನಮಾಝ್ ಮಾಡುವಂತಿಲ್ಲವೆಂದು ಹೆದರಿಸಿ, ಲೌಡ್ ಸ್ಪೀಕರ್ ಹಾಗೂ ಇನ್ನಿತರ ವಸ್ತುಗಳನ್ನು ಹಾಳುಗೆಡವಿ ಹೋಗಿದ್ದಾರೆ.”

ಇನ್ನೊಂದು ಹಳ್ಳಿಯಲ್ಲಿ ಶುಕ್ರವಾರದ ಪ್ರಾರ್ಥನೆಗೆ ಹೆಚ್ಚಿಗೆ ಜನ ಸೇರ ತೊಡಗಿದ್ದರಿಂದ ಮಸೀದಿಯ ಪಕ್ಕದ ಜಮೀನನ್ನು ಬಾಡಿಗೆ ಪಡೆದುಕೊಂಡು ನಮಾಝ್ ಮಾಡುವ ವಿಚಾರದಲ್ಲಿದ್ದಾಗ ಅಲ್ಲಿಯೂ ಪುಂಡರು ಬಂದು ಅಡ್ಡಿಪಡಿಸಿದರು. ಮುಸ್ಲಿಮರು ಕಾನೂನುಬದ್ಧವಾಗಿ ಜಮೀನು ಖರೀದಿಸಿ, ಕಾರ್ಪೋರೇಶನ್ ಅನುಮತಿ ಪಡೆದು ಮಸೀದಿ ಕಟ್ಟ ತೊಡಗಿದರೆ ಅದಕ್ಕಾಗಿ ಅಡ್ಡಿಪಡಿಸುತ್ತಾರೆ. ಲಂಡನಿನ ಥೇಮ್ಸ್ ನದಿಯ ದಡದಲ್ಲಿ ಬಸವೇಶ್ವರರ ಪುತ್ಥಳಿ ಸ್ಥಾಪಿಸಲು ಅಲ್ಲಿಯ ಸರಕಾರ ಅನುಮತಿ ನೀಡಿದೆ. ಆದರೆ ಇಲ್ಲಿಯ ನಾಗರಿಕರಿಗೆ ಮಸೀದಿ ಕಟ್ಟಲು ನೂರೆಂಟು ವಿಘ್ನಗಳನ್ನು ಒಡ್ಡುತ್ತಿದ್ದಾರೆ. ಅಬುಧಾಬಿಯಲ್ಲಿ ದೇವಸ್ಥಾನ ಕಟ್ಟಲು, ಅಮೇರಿಕಾ, ಇಂಗ್ಲೆಂಡಿನ ಅನೇಕ ನಗರಗಳಲ್ಲಿ ದೇವಸ್ಥಾನಗಳನ್ನು ಕಟ್ಟಲು ಅಲ್ಲಿನ ಸರಕಾರಗಳು ಒಪ್ಪಿಗೆ ನೀಡಿವೆ. ಆದರೆ ಇಲ್ಲಿನ ಮುಸ್ಲಿಮ್ ನಾಗರಿಕರಿಗೆ ಈ ಸವಲತ್ತು ನಿರಾಕರಿಸುವುದೇಕೆ?

ಚುನಾವಣೆಗಳಲ್ಲಿ ಮುಸ್ಲಿಮರಿಗೆ ಬಿ.ಜೆ.ಪಿ.ಯಿಂದ ಸ್ಪರ್ಧಿಸಲು ಟಿಕೆಟ್ ಇಲ್ಲ. ಕೊಲಿಜಿಯಂ ಶಿಫಾರಸು ಮಾಡಿದ ಇಬ್ಬರ ನೇಮಕಕ್ಕೆ ಕೇಂದ್ರ ಸರಕಾರ ತಡೆ ಹಾಕಿತು. ಉತ್ತರ ಪ್ರದೇಶದಲ್ಲಿ ಮಾಂಸದ ವಿಷಯದಲ್ಲಿ ಓರ್ವ ಮುಸ್ಲಿಮನನ್ನು ಕೊಂದು ಗೋಮಾಂಸ ಹೌದೋ ಅಲ್ಲವೇ ಪರೀಕ್ಷಿಸಲು ಸರಕಾರಿ ಪ್ರಯೋಗಾಲಯಕ್ಕೆ ಕಳಿಸಲಾಯಿತು. ಅವರು ಪರೀಕ್ಷಿಸಿ ಕುರಿ ಮಾಂಸವೆಂದು ಪ್ರಮಾಣ ಪತ್ರ ನೀಡಿದರು. ನಂತರ ಮಥುರಾದಲ್ಲಿದ್ದ ಖಾಸಗೀ ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ಕಳಿಸಿ ಅಲ್ಲಿಂದ ಅದು ಗೋಮಾಂಸವೆಂದು ಪ್ರಮಾಣ ಪತ್ರ ಪಡೆದು ಮುಸ್ಲಿಮನ ಮೇಲೆ ಕೇಸು ಹಾಕಿದರು. ಎಷ್ಟು ಅನ್ಯಾಯ?

ಉತ್ತರ ಪ್ರದೇಶದಲ್ಲಿ ಓರ್ವ ಹಿಂದೂ ತನ್ನ ಮನೆಯನ್ನು ಓರ್ವ ಮುಸ್ಲಿಮನಿಗೆ ಮಾರಿದ. ಇದು ಪುಂಡರಿಗೆ ಗೊತ್ತಾಗಿ ದಾಂಧಲೆ ಮಾಡುತ್ತ `ಘರ್ ಜಿಹಾದ್’ ಎಂದು ಹುಯಿಲೆಬ್ಬಿಸಿದರು.

2021ಕ್ಕೆ ಇಸ್ಲಾಮ್ ಹಾಗೂ ಕ್ರಿಶ್ಚಿಯನ್ ಮುಕ್ತ ಭಾರತ ಮಾಡುತ್ತೇವೆಂದು ಬಿ.ಜೆ.ಪಿ. ನಾಯಕರು ಹೇಳಿಕೊಳ್ಳುತ್ತಿದ್ದಾರೆ. ಸಾಧ್ವಿ ಪ್ರಾಚೀ, ಪ್ರವೀಣ್ ತೊಗಡಿಯಾರ ಹೇಳಿಕೆಗಳಿಗೆ ಬ್ರೆಕ್ ಹಾಕುವವರೇ ಇಲ್ಲ. ವಿಜಯಪುರದ ಎಂ.ಎಲ್.ಎ. ಬಸವರಾಜ ಪಾಟೀಲ ಯತ್ನಾಳ ಅವರಂತೂ “ಮುಸ್ಲಿಮರು ಯಾವುದೇ ಕೆಲಸಕ್ಕೆ ನನ್ನ ಹತ್ತಿರ ಬರಬೇಡಿ. ಯಾಕೆಂದರೆ ಅವರು ನನಗೆ (ಬಿ.ಜೆ.ಪಿ.) ಮತ ಹಾಕಿಲ್ಲ” ಎಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ಸುಳ್ಳು ಸುದ್ದಿಯ ಎರಡು ಉದಾಹರಣೆಗಳನ್ನು ನೋಡಿ. ಮಕ್ಕಾ-ಮದೀನಾದಲ್ಲಿ 11 ಮುಖಗಳುಳ್ಳ ಶಿವಲಿಂಗವಿದೆಯೆಂದು ತೋರಿಸುವ ಒಂದು ಫೋಟೋ ಟಿ.ವಿ.ಯಲ್ಲಿ ಇತ್ತೀಚೆಗೆ ಪ್ರಸಾರ ಮಾಡಲಾಗಿತ್ತು. ಫೋಟೋದಲ್ಲಿ ಒಂದು ಕಂಬ ಕಾಣಿಸುತ್ತಿದೆ. ಕಂಬದ ಕೆಳಗೆ 6 ಮುಖಗಳು, ಅದರ ಮೇಲೆ 5 ಮುಖಗಳು ಕಾಣುತ್ತವೆ. ಇದು ಮಕ್ಕಾ ಮದೀನಾದ ದೇವಸ್ಥಾನದ ಚಿತ್ರವೆಂದು ಹೇಳುತ್ತಾರೆ. ಟಿ.ವಿ.ಯವರು ಇದರ ಸತ್ಯಾಸತ್ಯತೆಯನ್ನು ಪತ್ತೆ ಹಚ್ಚಲು ಗೂಗಲ್‍ನಲ್ಲಿ ಹುಡುಕುತ್ತಾರೆ. 11 ಮುಖಗಳುಳ್ಳ ಶಿವಲಿಂಗ ರಾಜಸ್ಥಾನದ ಜಯಪುರದಿಂದ ಸುಮಾರು ದೂರದಲ್ಲಿರುವ `ವಿರಾಟ’ ಎಂಬ ಹಳ್ಳಿಯಲ್ಲಿದೆ ಎಂದು ಗೂಗಲ್‍ನಲ್ಲಿ ಗೊತ್ತಾಗುತ್ತದೆ. ಟಿ.ವಿ. ಪ್ರತಿನಿಧಿಗಳು ಅಲ್ಲಿಗೆ ಹೊರಡುತ್ತಾರೆ. ವಿರಾಟ ಹಳ್ಳಿಗೆ ಬಂದು ಜನರನ್ನು ವಿಚಾರಿಸಿದಾಗ 11 ಮುಖಗಳುಳ್ಳ ಶಿವಲಿಂಗ ಇರುವ ದೇವಸ್ಥಾನದ ದಾರಿ ತೋರಿಸುತ್ತಾರೆ. ಟಿ.ವಿ.ಯವರು ಅಲ್ಲಿಗೆ ಬಂದು ನೋಡಿದಾಗ ಮಕ್ಕಾ-ಮದೀನಾದಲ್ಲಿದೆ ಎಂದು ಹೇಳಿ ಮೊದಲಿಗೆ ಹಾಕಿದ ಮಂದಿರದ ಚಿತ್ರವೇ ಅದು. ವಿರಾಟ ಎಂಬ ಹಳ್ಳಿಯ ಶಿವಲಿಂಗವಿರುವ ದೇವಸ್ಥಾನವು ಮಕ್ಕಾದಲ್ಲಿದೆ ಎಂದು ತೋರಿಸಿ ಶಿವ ಭಕ್ತರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುವ ಕುಹಕ ಉಪಾಯವಿದು.

ಇನ್ನೊಂದು ಉದಾಹರಣೆ. ಅಜ್ಮೀರದ ಪ್ರಸಿದ್ಧ ಸಂತ ಖ್ವಾಜಾ ಮುಈನುದ್ದೀನ್ ಚಿಶ್ತಿ ಕುರಿತ ಸುಳ್ಳು ಸುದ್ದಿ ವೈರಲ್ ಆಗಿದೆ. ಮುಹಮ್ಮದ್ ಘೋರಿ ಪೃಥ್ವಿರಾಜನನ್ನು ಸೋಲಿಸಿದ ನಂತರ ಅಜ್ಮೀರದ ಸಂತರು, ಪೃಥ್ವಿರಾಜನ ಪತ್ನಿ ಸಂಯುಕ್ತಾಳನ್ನು ಬಂಧಿಸಿ ಅವಳ ಮಾನಭಂಗ ಮಾಡಲು ಸೈನಿಕರಿಗೆ ಪ್ರೇರೇಪಿಸಿದ್ದಾರಂತೆ. ಅದ್ಹೇಗೋ ಸೈನಿಕರ ಕೈಯಿಂದ ಸಂಯುಕ್ತ ಪಾರಾಗಿ ಮತ್ತೊಮ್ಮೆ ರಜಪೂತ ಸೈನ್ಯದೊಂದಿಗೆ ಬಂದು ತನ್ನ ಸೇಡು ತೀರಿಸಿಕೊಳ್ಳಲು ಸಂತರನ್ನು ತುಂಡು ತುಂಡಾಗಿ ಕತ್ತರಿಸುವಂತೆ ಆಜ್ಞಾಪಿಸುತ್ತಾಳಂತೆ. ಇಂಥ ಸುಳ್ಳು ಆರೋಪಗಳಿಂದ, ಅಜ್ಮೀರ ದರ್ಗಾಕ್ಕೆ ಬರುವ ಹಿಂದೂ ಭಕ್ತರನ್ನು ತಡೆಯುವುದು ಅವರ ಉದ್ದೇಶ. ಕೆಲ ತಿಂಗಳುಗಳ ನಂತರ ಬರುವ ರಾಜಸ್ಥಾನದ ಚುನಾವಣೆಯಲ್ಲಿ ಮುಸ್ಲಿಮರ ವಿರುದ್ಧ ಮತ ಚಲಾಯಿಸುವಂತೆ ಮಾಡುವುದು ಇದರ ಹಿಂದಿರುವ ಹುನ್ನಾರ.

ಹಿಂದೂ ಧರ್ಮವನ್ನು ದ್ವೇಷಿಸಲು ಕುರ್‍ಆನ್ ಕಲಿಸುವುದಿಲ್ಲ. ಭಾರತದಲ್ಲಿನ ಮಸೀದಿಗಳನ್ನು ಕೆಡವಲು ಶ್ರೀರಾಮ ಹೇಳಲಿಲ್ಲ. ರೊಟ್ಟಿಗೆ ಯಾವುದೇ ಧರ್ಮವಿಲ್ಲ. ನೀರಿಗೆ ಯಾವುದೇ ಜಾತಿ ಇಲ್ಲ, ಮಾನವೀಯತೆ ಜೀವಂತವಿರುವಲ್ಲಿ ಧರ್ಮದ ಕುರಿತು ಮಾತನಾಡುವುದಿಲ್ಲ. ಕೆಲವರು ಹೇಳುತ್ತಾರೆ, ಹಿಂದೂ ಸಂಕಟದಲ್ಲಿದ್ದಾನೆ, ಕೆಲವರು ಹೇಳುತ್ತಾರೆ ಮುಸ್ಲಿಮ್ ಸಂಕಟದಲ್ಲಿದ್ದಾನೆ. ಧರ್ಮದ ಕನ್ನಡಿ ತೆಗೆದು ನೋಡಿ ಮಿತ್ರರೇ. ರಾಜಕಾರಣಿಗಳಿಂದ ನಮ್ಮ ಭಾರತವೇ ಸಂಕಟದಲ್ಲಿದೆ.

Leave a Reply