Representational Image

ಹುಬ್ಬಳ್ಳಿ : ಜುವಾರಿ ಸಿಮೆಂಟ್ ಕಂಪನಿಯು ಮಾಜಿ ಹಾಗೂ ಹಾಲಿ ಸೈನಿಕರಿಗೆ ಯೋಜನೆಯೊಂದನ್ನು ರೂಪಿಸಿದೆ. ಕಂಪನಿಯಲ್ಲಿ ಹಣ ಹೂಡಿದರೆ ಹೆಚ್ಚಿನ ಬಡ್ತಿ ನೀಡುತ್ತದೆ. ಇದು ಸೈನಿಕರಿಗೆ ಮಾತ್ರ ಅನ್ವಯ ಎಂದು ಸ್ವತಃ ಮಾಜಿ ಸೈನಿಕನೋರ್ವ ಸುಳ್ಳು ಹೇಳಿ ನಂಬಿಸಿ, ರಾಜ್ಯದ 200 ಹಾಗೂ ಹೊರ ರಾಜ್ಯದ 326 ಸೈನಿಕರಿಂದ 27 ಕೋಟಿ ರೂ. ಸಂಗ್ರಹಿಸಿ ಯಾರ ಕೈಗೂ ಸಿಗದೆ ಪಂಗನಾಮ ಹಾಕಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ನೊಂದ ಸೈನಿಕರು ಪ್ರಧಾನಿಗೆ ಪತ್ರ ಬರೆದು ನ್ಯಾಯಕ್ಕೆ ಮೊರೆ ಹೋಗಿದಲ್ಲದೇ, ಹುಬ್ಬಳ್ಳಿಯು ಉಪನಗರ ಠಾಣೆಯ ಮೆಟ್ಟಿಲೇರಿದ್ದಾರೆ. ಮೋಸ ಹೋದವರು ಹುಬ್ಬಳ್ಳಿಯಲ್ಲಿ ರವಿವಾರ ಸಭೆ ಸೇರಿದ್ದರು. ಪೊಲೀಸರ ಮಾರ್ಗದರ್ಶನದ ಮೇರೆಗೆ ಇದೀಗ ನೊಂದವರು ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ತಮಿಳುನಾಡಿನ ಕುನೂರು ಮೂಲದ , ಮಣಿ ಎಂಬಾತ ಸೇನೆಯ ಮದ್ರಾಸ್ ರೇಜಿಮೆಂಟ್‌ನಲ್ಲಿ ಗುಮಾಸ್ತನಾಗಿ ನಿವೃತ್ತಿ ಹೊಂದಿದ. ಈತ ಜುವಾರಿ ಸಿಮೆಂಟ್ ಕಂಪನಿಯೊಂದು, ಸೈನಿಕರಿಗೆ, ಮಾಜಿ ಸೈನಿಕರಿಗೆ ವಿಶೇಷ ಯೋಜನೆಯೊಂದನ್ನು ರೂಪಿಸಿದೆ. ಬೇರೆಯವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಸೈನಿಕರಿಗೆ ಆರ್ಥಿಕ ನೆರವು ನೀಡಬೇಕೆನ್ನುವ ಉದ್ದೇಶ ಸಂಸ್ಥೆಯದ್ದಾಗಿದೆ ಎಂದು ಸುಳ್ಳು ಹೇಳಿದ್ದಾನೆ. 2017ರಲ್ಲಿ ಈ ಮೋಸದ ದಂಧೆ ಶುರು ಮಾಡಿದ ಮಣಿ, ಕಂಪನಿಯು ಮುಖ್ಯಸ್ಥ ಜಿ.ಎಂ. ಮಂಜುನಾಥ ಎಂಬುವವರು ನನ್ನ ನಿಕಟವರ್ತಿಯಾಗಿದ್ದಾರೆ. ಸಿಮೆಂಟ್ ಕಂಪನಿಯಲ್ಲಿ ಹಣ ಹೂಡಿದರೆ ಯಾವುದೇ ಮೋಸವಿಲ್ಲ. ಅಷ್ಟಕ್ಕೂ ಸೈನಿಕರ ಕುಟುಂಬಕ್ಕೆ ನೆರವಾಗುವುದು ಕಂಪನಿಯ ಉದ್ದೇಶವಾಗಿದೆ ಎಂದೆಲ್ಲಾ ಸುಳ್ಳು ಹೇಳಿ ನಂಬಿಸಿದ್ದಾನೆ. ಕಂಪನಿಗೆ 1.75 ಲಕ್ಷ ಹೂಡಿದರೆ 2.25 ಲಕ್ಷ ರೂ. ತಿಂಗಳಿಗೆ ನೀಡಲಾಗುತ್ತದೆ, 3.50 ಲಕ್ಷಕ್ಕೆ 4.50 ಲಕ್ಷ, 7 ಲಕ್ಷ ಹೂಡಿದರೆ 9 ಲಕ್ಷ, 10.50 ಲಕ್ಷ ಹೂಡಿದರೆ 13.50 ಆದಾಯ ನೀಡಲಾಗುತ್ತದೆ ಎಂದು ನಂಬಿಸಿದ್ದಾನೆ.

ಮಣಿ ಮಾತು ಕೇಳಿ 526 ಸೈನಿಕರು ಹಣ ಹೂಡಿದ್ದಾರೆ. ಹಣ ಹೂಡಿದಕ್ಕೆ ಪ್ರತಿಯಾಗಿ ಖಾಲಿ ಚಿಕ್ ಹಾಗೂ ಬಾಂಡ್ ನೀಡಲಾಗಿದೆ. ಆರಂಭದಲ್ಲಿ ಮಣಿ, ಕಂಪನಿ ಬಡ್ಡಿ ಹಣ ನೀಡಿದೆ ಎಂದು ಸರಿಯಾಗಿಯೇ ಹಣ ಪಾವತಿಸಿದ್ದಾನೆ. ಆದರೆ 2018ರ ಜೂನ್ ನಂತರ ಹಣ ನೀಡಲು ಸತಾಯಿಸಿದ್ದಾನೆ. ಈ ಬಗ್ಗೆ ಕೇಳಲಾದಾಗ , ಜಿಎಸ್‌ಟಿ, ನೋಟ್ ಬ್ಯಾನ್‌ನಿಂದ ತೋಂದರೆಯಾಗಿದೆ. ನಿಮ್ಮ ಹಣ ಮರಳಿಸುತ್ತೇನೆಂದು ಹೇಳಿ ಕಡಿಮೆ ಬಡ್ತಿ ಕೊಡುತ್ತಾ ಬಂದಿದ್ದಾನೆ. 2019 ಮಾರ್ಚ್‌ನಿಂದ ಹಣ ನೀಡುವುದನ್ನೇ ನಿಲ್ಲಿಸಿದ್ದಾನೆ. ಇದರಿಂದ ಕಂಗಾಲಾದ ಸೈನಿಕರು, 3 ಅಕ್ಟೋಬರ್ 2019ರಂದು ಮಣಿಯನ್ನು ಊಟಿಗೆ ಕರೆಯಿಸಿ ಸಭೆ ಮಾಡಿದ್ದಾರೆ. ಕಂಪನಿಯ ಮಂಜುನಾಥ, ಇರ್ಷಾದ್ ಮತ್ತು ಜಾನ್ ಸನ್ ಅವರ ಮೇಲೆ ದೂರು ನೀಡಿದ್ದೇನೆ. ಅವರ ಬಂಧನವಾದ ಬಳಿಕ ನಿಮ್ಮ ಹಣ ಕೈಸೇರುತ್ತದೆ ಎಂದು ಹೇಳಿದ್ದಾನೆ.

ಬಳಿಕ ಸೈನಿಕರು ಉಗದ ಮಂಗಳಂ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಜಿಲ್ಲಾಧಿಕಾರಿ ಅಲ್ಲಿನ ಪೊಲೀಸರಿಗೆ ತನಿಖೆಗೆ ಸೂಚಿಸಿದ್ದಾರೆ. ಆದರೆ ಪ್ರಕ್ರಿಯೆ ವಿಳಂಬವಾಗಿದೆ. ಈ ಮಧ್ಯೆ ಮಣಿ ಮೊಬೈಲ್ ಸ್ವಿಚ್ ಆಫ್ ಆಗಿದೆ, ಆತ ಕುನ್ನೂರಿನಲ್ಲಿಯೂ ಕಾಣದಾಗಿದ್ದಾನೆ. ಮೋಸ ಹೋದವರ ಪೈಕಿ ಹುಬ್ಬಳ್ಳಿಯವರು ಹೆಚ್ಚಿನವರಾಗಿರುವುದರಿಂದ, ಸೈನಿಕರು ಹುಬ್ಬಳ್ಳಿಯಲ್ಲಿ ರವಿವಾರ ಸಭೆ ಸೇರಿದ್ದರು. ಬಳಿಕ ಪೊಲೀಸರಿಗೆ ದೂರು ನೀಡಲು ಹೋಗಿದ್ದರು. ಪೊಲೀಸರು ನ್ಯಾಯಾಲಯಕ್ಕೆ ಮೊರೆ ಹೋಗುವಂತೆ ಸಲಹೆ ನೀಡಿದ್ದಾರೆ.

source : samyukthakarnataka

LEAVE A REPLY

Please enter your comment!
Please enter your name here