ಚೆನ್ನೈ: ನಾನು ನನ್ನ ಜೀವನೋಪಾಯಕ್ಕಾಗಿ ತಮಿಳು ಕಲಿಯಬೇಕಾಯಿತು. ಆದರೆ ನನ್ನ ಮಾತೃ ಭಾಷೆ ಕನ್ನಡ ಎಂದು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರು ಶನಿವಾರ ಚೆನ್ನೈನ ರಾಘವೇಂದ್ರ ಮಂಟಪದಲ್ಲಿ ಹೇಳಿಕೊಂಡರು.
ಚೆನ್ನೈನ ರಾಘವೇಂದ್ರ ಮಂಟಪದಲ್ಲಿ ನಡೆಯುತ್ತಿರುವ ಅಭಿಮಾನಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಜನಿಕಾಂತ್, ತಮ್ಮ ಬಾಲ್ಯ ಮತ್ತು ಚಿತ್ರರಂಗದ ಏಳುಬೀಳುಗಳ ಬಗ್ಗೆ ನೆನಪಿಸಿಕೊಂಡರು. ಇದೇ ಸಂದರ್ಭದಲ್ಲಿ ತನ್ನ ಕುಟುಂಬದ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ತಮ್ಮದು ಮಧ್ಯಮ ವರ್ಗಕ್ಕಿಂತ ಕೆಳಗಿರುವ ಬಡ ಕುಟುಂಬ. ಜೀವನಕ್ಕಾಗಿ ಸರಕಾರಿ ಬಸ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದೆ. ನಾನು ಕನ್ನಡ ಮಾಧ್ಯಮದಲ್ಲೇ ವಿದ್ಯಾಭ್ಯಾಸ ಮಾಡಿದ್ದು, ನನ್ನ ಕುಟುಂಬಸ್ಥರು ಕೂಡ ಕನ್ನಡದಲ್ಲೇ ಮಾತನಾಡುತ್ತಾರೆ. ಅದಲ್ಲದೆ ತನ್ನ ಸಹೋದರ, ಸಂಬಂಧಿಕರೊಡನೆ ಕನ್ನಡದಲ್ಲೇ ಮಾತನಾಡುತ್ತೇವೆ ಎಂದು ರಜನಿಕಾಂತ್ ಹೇಳಿದ್ದಾರೆ.
ಇದೇ ವೇಳೆ ತಮ್ಮ ಚಿತ್ರರಂಗ ಪ್ರವೇಶದ ಬಗ್ಗೆ ಮಾತನಾಡಿದ ಅವರು, ನನ್ನ ಪ್ರತಿಭೆಯನ್ನು ಮೊದಲಿಗೆ ಗುರುತಿಸಿದ್ದು ನನ್ನ ಸ್ನೇಹಿತ ರಾಜ್ ಬಹದ್ದೂರ್ ಎನ್ನುವಂಥ ವ್ಯಕ್ತಿ. ಅವರು ಅಂದು ನಾನು ಸರಕಾರಿ ಬಸ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾಗ ನನ್ನನ್ನು ನಾಟಕಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅವರಿಗೂ ಸಿನಿಮಾ ನಾಟಕಗಳೆಂದರೆ ಪಂಚಪ್ರಾಣವಾಗಿತ್ತು. ನಾವಿಬ್ಬರು ಒಟ್ಟಿಗೆ ನಾಟಕ ಕೂಡ ಮಾಡಿದ್ದೆವು. ನನ್ನ ಪ್ರತಿಭೆಯನ್ನು ಗುರುತಿಸಿದ್ದ ಬಹದ್ದೂರ್ ನಾಟಕವೊಂದರಲ್ಲಿ ದುರ್ಯೋಧನನ ಪಾತ್ರ ನೀಡಿ ಆತ ಭೀಷ್ಮನ ಪಾತ್ರ ಮಾಡಿದ್ದರು. ಅವರ ಒತ್ತಾಯದಿಂದಲೇ ನಾನು ಮದ್ರಾಸ್ ಸೇರಿದ್ದು. ನಾನು ಸಾಕಷ್ಚು ಕಾರ್ಯಕ್ರಮಗಳಲ್ಲಿ ನಿರ್ದೇಶಕ ಬಾಲಚಂದರ್ ಅವರ ಬಗ್ಗೆ ಹೇಳಿದ್ದೇನೆ. ನಾನು ಮದ್ರಾಸ್ ಗೆ ಬಂದ ಹೊಸತರಲ್ಲಿ ಬಾಲಚಂದರ್ ಅವರನ್ನು ಭೇಟಿ ಮಾಡಿ ಸಿನಿಮಾದಲ್ಲಿ ನಟಿಸುವ ಕುರಿತು ಕೇಳಿದ್ದೆ. ಅಂದು ಅವರು ನನ್ನಲ್ಲಿ ನಟನೆ ಮಾಡಿ ತೋರಿಸುವಂತೆ ಹೇಳಿದ್ದರು. ವಿಶೇಷ ಎಂದರೆ ಅಂದು ನನಗೆ ತಮಿಳು ಗೊತ್ತಿರಲಿಲ್ಲ.
ನಾನು ಓದಿದ್ದು ಕನ್ನಡ ಮಾಧ್ಯಮ ಶಾಲೆಯಲ್ಲಿ ಎಂದಿದಕ್ಕೆ ಅವರು ಇಂಗ್ಲಿಷ್ ಭಾಷೆಗಳಲ್ಲಿ ಮಾತನಾಡಲು ಹೇಳಿದ್ದರು. ಆದರೆ ನನಗೆ ಇಂಗ್ಲಿಷ್ ಕೂಡ ಬರುತ್ತಿರಲಿಲ್ಲ. ನಾನು ಪಕ್ಕ ಕನ್ನಡಿಗನಾಗಿದ್ದೆ. ಅದಕ್ಕೆ ಅವರು ಗೊತ್ತಿರುವ ಭಾಷೆಯಲ್ಲಿ ಮಾತನಾಡಲು ಹೇಳಿದಾಗ ನಾನು ಅಭಿನಯಿಸಿ ತೋರಿಸಿದೆ. ನನ್ನ ಅಭಿನಯವನ್ನು ನೋಡಿದ ಅವರು ನಿನಗೊಂದು ಪುಟ್ಟ ಪಾತ್ರವನ್ನು ಕೊಡುತ್ತೇನೆ. ನೀನು ಅಭಿನಯಿಸಿ ನೋಡು ಎಂದಿದ್ದರು. ‘ಅಪೂರ್ವ ರಾಗಾಂಙಳ್’ ಎಂಬ ಚಿತ್ರದಿಂದ ಪ್ರಾರಂಭಗೊಂಡ ನನ್ನ ಈ ಪಯಣ ಇವತ್ತು ನಿಮ್ಮ ಮುಂದೆ ಈ ರೀತಿಯಲ್ಲಿ ತಂದು ನಿಲ್ಲಿಸಿದೆ ಎಂದರು.