ಹೊಸದಿಲ್ಲಿ: ವಿದೇಶದಲ್ಲಿ ಅನಧಿಕೃತವಾಗಿ ಭಾರೀ ಪ್ರಮಾಣದಲ್ಲಿ ಆಸ್ತಿ ಸಂಗ್ರಹಿಸಿರುವ, ರಹಸ್ಯ ಹೂಡಿಕೆ ಮಾಡಿರುವ ಮತ್ತು ಹಣ ರವಾನಿಸುವ ಭಾರತೀಯರ ವಿರುದ್ಧ ಕಪ್ಪು ಹಣ ನಿರೋಧ ಕಾನೂನಿನಡಿಯಲ್ಲಿ ಕಠಿಣ ಕ್ರಮಕ್ಕೆ ಆದಾಯ ತೆರಿಗೆ ಇಲಾಖೆ ಹೆಜ್ಜೆ ಮುಂದಿಟ್ಟಿದೆ.
ಸಾವಿರಾರು ಭಾರತೀಯರ ವಿದೇಶಿ ಬ್ಯಾಂಕ್ ಠೇವಣಿಗಳು, ವಿದೇಶಿ ಆಸ್ತಿಗೆ ಸಂಬಂಧಿಸಿದಂತೆ ಆಯಾ ದೇಶಗಗಳ ಏಜೆನ್ಸಿಯೊಂದಿಗೆ ಸಹಕರಿಸಿ ತನಿಖೆ ನಡೆಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆಯ ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಪ್ರಾಥಮಿಕ ಕ್ರಮ ಎಂಬಂತೆ ಈಗಾಗಲೇ ಹಲವು ಮಂದಿಗೆ ನೋಟಿಸು ಜಾರಿಗೊಳಿಸಲಾಗಿದೆ. ಸಮಾಜದಲ್ಲಿ ಸ್ಥಾನಮಾನ, ಪದವಿಯನ್ನು ಹೊಂದಿದವರು ಸಹಿತ ಹಲವರು ಇಲಾಖೆಯ ಪರಿಗಣನೆಯಲ್ಲಿದ್ದಾರೆ. ದೇಶಕ್ಕೆ ಸಿಗಬೇಕಾದ ತೆರಿಗೆಯಿಂದ ಪಾರಾಗಲು ವಿದೇಶಕ್ಕೆ ಹಣ ಕಳುಹಿಸಿದವರ ವಿರುದ್ಧ ಮಾತ್ರ ಕ್ರಮ ಜರಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2015 ರಲ್ಲಿ ಹೊಸದಾಗಿ ಕೇಂದ್ರ ಸರಕಾರ ಕಪ್ಪುಹಣ ನಿರೋಧ ಕಾನೂನು ತಂದಿತ್ತು. ವಿದೇಶದಲ್ಲಿ ಕಾನೂನು ಬಾಹಿರವಾಗಿ ಹೂಡಿಕೆ ನಡೆಸಿದವರಿಗೆ ಶೇ. 120 ತೆರಿಗೆ ಮತ್ತು 10 ವರ್ಷದ ಜೈಲು ಶಿಕ್ಷೆಯನ್ನು ಈ ಕಾನೂನಡಿಯಲ್ಲಿ ನೀಡಬಹುದಾಗಿದೆ.