ನವದೆಹಲಿ : ನವದೆಹಲಿ: ಪೌರತ್ವ ಮಸೂದೆ ಪರ-ವಿರೋಧ ಗುಂಪುಗಳ ನಡುವೆ ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ್ದ ಗಲಭೆ ನಿಯಂತ್ರಣಕ್ಕೆ ಬಂದಿದೆ. ಆದರೆ ಕಳೆದ 4 ದಿನಗಳ ಕಾಲ ಘಟಿಸಿದ್ದ ಹಿಂಸಾಚಾರ ನಾಗರಿಕರ ದೃತಿಗೆಡಿಸಿದ್ದು, ಹಲವು ಕುಟುಂಬಗಳು ತಮ್ಮ ಲಗ್ಗೇಜು ಸಹಿತ ಪ್ರದೇಶ ತೊರೆಯುತ್ತಿರುವ ಸನ್ನಿವೇಶ ಕಂಡುಬಂದಿದೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಶೇಷವೆಂದರೆ ಬುಧವಾರ ರಾತ್ರಿಯಿಂದ ಯಾವುದೇ ಹೊಸ ಗಲಭೆ ನಡೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಮಧ್ಯೆ ದೆಹಲಿಯ ಅಶೋಕ ನಗರದಲ್ಲಿ ನಡೆದ ಘಟನೆ ನಿಜಕ್ಕೂ ಮಾದರಿ ಎನಿಸಿಕೊಂಡಿದೆ.

ಮಸೀದಿಗೆ ಬೆಂಕಿ ಹಚ್ಚಲು ಬಂದ ಉದ್ರಿಕ್ತ ಜನರನ್ನು ಸ್ವತಃ ಹಿಂದೂಗಳೇ ತಡೆದು ಮಸೀದಿಯ ರಕ್ಷಣೆ ಮಾಡಿದ್ದಾರೆ. ಹಿಂಸಾಚಾರದಲ್ಲಿ ತೊಡಗಿದ್ದ ಗುಂಪು ಅಲ್ಲಿದ್ದ ಮುಸ್ಲಿಂ ಮನೆಗಳಿಗೆ ಮತ್ತು ಮಸೀದಿಗಳಿಗೆ ಬೆಂಕಿ ಹಚ್ಚಲು ಮುಂದಾದಾಗ ಅಲ್ಲಿನ ಹಿಂದೂಗಳು ಮುಸಲ್ಮಾನ ಬಂಧುಗಳಿಗೆ ತಮ್ಮ ಮನೆಗಳಲ್ಲಿ ಆಶ್ರಯ ಕೊಟ್ಟಿದ್ದಾರೆ. ಮಾತ್ರವಲ್ಲ ಮಸೀದಿಗೆ ಬೆಂಕಿ ಹಚ್ಚುವುದರಿಂದಲೂ ತಡೆದಿದ್ದಾರೆ. ಆ ಪ್ರದೇಶದಲ್ಲಿ ಸುಮಾರು ಹತ್ತು ಹಿಂದೂ ಕುಟುಂಬಗಳು ವಾಸವಾಗಿದ್ದರು ಎಂದು ತಿಳಿದು ಬಂದಿದೆ.

ಅದೇ ಸಂದರ್ಭದಲ್ಲಿ ದೆಹಲಿಯ ಚಾಂದ್ ಬಾಘ್ ನಲ್ಲೂ ಇಂತಹ ಸೌಹಾರ್ದ ಮಾನವೀಯ ಘಟನೆ ನಡೆದಿದೆ. ಇದು ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶವಾಗಿದ್ದು, ಇಲ್ಲಿ ಕೆಲವೇ ಕೆಲವು ಹಿಂದೂ ಮನೆಗಳಿವೆ. ಮೂರು ದೇವಸ್ಥಾನಗಳಿವೆ. ಗಲಭೆಯ ಸಂದರ್ಭದಲ್ಲಿ ಅಲ್ಲಿನ ಸ್ಥಳೀಯ ಮುಸ್ಲಿಮರು ದೇವಸ್ಥಾನಗಳಿಗೆ ಹಾನಿ ಮಾಡದಂತೆ ಉದ್ರಿಕ್ತರನ್ನು ತಡೆದು ದೇವಸ್ಥಾನವನ್ನು ಮುಸ್ಲಿಂ ಬಾಂಧವರು ರಕ್ಷಿಸಿದ್ದಾರೆ. ಮಾತ್ರವಲ್ಲ ಯಾವೊಬ್ಬ ಹಿಂದೂ ಬಾಂಧವನಿಗೂ ಯಾವುದೇ ರೀತಿಯ ಹಾನಿಯಾಗದಂತೆ ರಕ್ಷಣೆ ನೀಡಿದ್ದಾರೆ.

Leave a Reply