ನವದೆಹಲಿ: ಕೊರೊನಾ ವೈರಸ್ ಹಾವಳಿಯಿಂದಾಗಿ ಅನಿರ್ಧಿಷ್ಟ ಅವಧಿಗೆ ಮುಂದೂಡಲಾಗಿರುವ “ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) 13 ನೇ ಆವೃತ್ತಿಯು ನಡೆಯುವ ಸಾಧ್ಯತೆಗಳು ನಿಚ್ಚಳವಾಗಿದೆ. ಐಪಿಎಲ್ ಟೂರ್ನಿಯನ್ನು ಯುನೈಟೆಡ್ ಅರಬ್ ಅಮಿರೇಟ್ಸ್ನಲ್ಲಿ (ಯುಎಇ) ನಡೆಸುವ ಕುರಿತು ಚಿಂತನೆ ನಡೆದಿದೆ.
ಮುಂದೂಡಲಾಗಿರುವ ಐಪಿಎಲ್ ಅನ್ನು ಸೆಪ್ಟೆಂಬರ್ 26 ರಿಂದ ನವೆಂಬರ್ 6 ರ ವರೆಗೆ ಯುಎಇಯಲ್ಲಿ ನಡೆಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಐಪಿಎಲ್ ಸಂಘಟನಾ ಸಮಿತಿ ಗಂಭೀರ ಚಿಂತನೆ ನಡೆಸಿದ್ದು, ಪಂದ್ಯಾವಳಿ ನಡೆಸಲು ಅಗತ್ಯವಾದ ಸಿದ್ದತೆಗಳ ಕುರಿತು ಮಾತುಕತೆ ನಡೆದಿವೆ ಎಂದೂ ಹೇಳಲಾಗುತ್ತಿದೆ. ಐಪಿಎಲ್‌ನ ಉದ್ಘಾಟನಾ ಪಂದ್ಯ ಸೆಪ್ಟೆಂಬರ್ 26 ರಂದು ನಡೆಯಲಿದೆ. ಒಟ್ಟು 42 ದಿನಗಳ ನಡೆಯಲಿರುವ ಈ ಚುಟುಕು ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯ ನವೆಂಬರ್ 6 ರಂದು ಜರುಗಲಿದೆ. ಅಂತೂ ಕ್ರಿಕೆಟ್ ಪ್ರೇಮಿಗಳು ತೀವ್ರ ಆಸಕ್ತಿಯಿಂದ ನೋಡುತ್ತಿದ್ದ ಐಪಿಎಲ್ ನಡೆಯುವುದಕ್ಕೆ ವೇದಿಕೆ ಸಜ್ಜಾದಂತಾಗಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಐಪಿಎಲ್‌ನ ಹದಿಮೂರನೇ ಆವೃತ್ತಿ ಮಾರ್ಚ್ 29 ಕೈ ಆರಂಭವಾಗಿ, ಮೇ 17 ರಂದು ನಡೆಯಲಿದ್ದ ಫೈನಲ್ ಪಂದ್ಯದೊಂದಿಗೆ ವಿಶ್ವದ ಅತ್ಯಂತ ಜನಪ್ರಿಯ ಟಿ-20 ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿ ಎನಿಸಿರುವ ಐಪಿಎಲ್ ಅಂತ್ಯವಾಗುತ್ತಿತ್ತು.

ಆದರೆ ಭಾರತವೂ ಸೇರಿದಂತೆ ವಿಶ್ವದ ಬಹುತೇಕ ರಾಷ್ಟಗಳಲ್ಲಿ ಕೊರೊನಾ ವೈರಸ್ ಅಟ್ಟಹಾಸದಿಂದಾಗಿ ನಲುಗಿಹೋಗಿದ್ದು, ಕಳೆದ ನಾಲ್ಕು ತಿಂಗಳಿಂದ ವಿಶ್ವದ ಎಲ್ಲೆಡೆ ಕ್ರೀಡಾ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಇತ್ತೀಚಿನ ದಿನಗಳಲ್ಲಿ ನಿಧಾನವಾಗಿ ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳು ಮರು ಆರಂಭಗೊಂಡಿವೆ. ಇಂಗ್ಲೆಂಡ್ ಪ್ರವಾಸ ಕೈಗೊಂಡಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡ, ಮೂರು ಟೆಸ್ಟ್ ಪಂದ್ಯಗಳ ಸರಣಿ ಆಡುತ್ತಿದ್ದು, ಮೊದಲ ಟೆಸ್ಟ್ ಪಂದ್ಯ ಅಂತ್ಯವಾಗಿದೆಯಲ್ಲದೇ ಎರಡನೇ ಟೆಸ್ಟ್ ಪಂದ್ಯ ನಡೆದಿದೆ. ಕೊರೋನಾ ಭೀತಿಯ ಹಿನ್ನೆಲೆಯಲ್ಲಿ ಈ ಕ್ರಿಕೆಟ್ ಸರಣಿ ಪ್ರೇಕ್ಷಕರಿಲ್ಲದೇ ಖಾಲಿ ಮೈದಾನದಲ್ಲಿ ನಡೆಯುತ್ತಿದೆ. ಹದಿಮೂರನೇ ಐಪಿಎಲ್‌ ಸೆಪ್ಟೆಂಬರ್ 26 ರಿಂದ ನವೆಂಬರ್ 6 ರ ವರೆಗೆ ನಡೆಸಲು ತೀವ್ರ ಚಿಂತನೆ ನಡೆದಿದ್ದು, ಪಂದ್ಯಗಳ ವೇಳಾಪಟ್ಟಿಯನ್ನು ಸಿದ್ದಪಡಿಸುವ ಕಾರ್ಯ ನಡೆಯುತ್ತಿದೆ. ಶೀಘ್ರವೇ ಸಂಪೂರ್ಣ ವೇಳಾಪಟ್ಟಿ ಸಿದ್ಧವಾಗಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ಬಿಡುಗಡೆ ಮಾಡುವ ಸಾಧ್ಯತೆಯಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಪಂದ್ಯಾವಳಿಯ ಆರಂಭಕ್ಕೆ ಮುನ್ನ ಐಪಿಎಲ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಭಾರತೀಯ ಆಟಗಾರರಿಗೆ ಯುಎಇನಲ್ಲಿ ಐದು ವಾರಗಳ ತರಬೇತಿ ಶಿಬಿರವನ್ನೂ ಕೂಡ ಏಪರ್ಷಡಿಸಲು ಬಿಸಿಸಿಐ ತೀರ್ಮಾನಿಸಿದೆ. ಇದಕ್ಕಾಗಿ ಬಿಸಿಸಿಐ ಕೂಡ ಐಪಿಎಲ್ ಫ್ರಾಂಚೈಸಿಗಳಿಗೆ ತಮ್ಮದೇ ಆದ ತರಬೇತಿ ಶಿಬಿರಗಳನ್ನು ಸ್ಥಾಪಿಸಲು ಅವಕಾಶ ನೀಡುವ ಬಗ್ಗೆ ಚರ್ಚಿಸಿದೆ ಎಂದು ಹೇಳಲಾಗಿದೆ. ಐಪಿಎಲ್ ಪಂದ್ಯಾವಳಿಯನ್ನು ಯುಎಇಯಲ್ಲಿ ನಡೆಯಲ್ಲಿ ನಡೆಸುವುದರಿಂದ ಟೂರ್ನಿಯಲ್ಲಿ ಪಾಲ್ಗೊಳ್ಳುವ ಇಂಗ್ಲೆಂಡ್, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ದಕ್ಷಿಣ ಆಫ್ರಿಕಾ, ವೆಸ್ಟ್ ಇಂಡೀಸ್‌ನಿಂದ ಆಟಗಾರರನ್ನು ಐಪಿಎಲ್ ಆಡಲು ಯುಎಇಗೆ ಕರೆತರುವುದು ಕೂಡ ಸುಲಭವಾಗಲಿದೆ.
ಬಿಸಿಸಿಐ ಯುಎಇಯಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ನಡೆಸಲು ಅನುಮೋದನೆಗಾಗಿ ಕಾಯುತ್ತಿದೆ. ಸರ್ಕಾರದಿಂದ ಅನುಮತಿ ಸಿಕ್ಕರೆ, ಅಬುಧಾಬಿ, ದುಬೈ ಮತ್ತು ಶಾರ್ಜಾ ಖಾಲಿ ಮೈದಾನದಲ್ಲಿ ಐಪಿಎಲ್ ಟೂರ್ನಿ ನಡೆಯಲಿದೆ. ಭಾರತದಲ್ಲಿನ ಸಾರ್ವತ್ರಿಕ ಚುನಾವಣೆ ನಿಮಿತ್ತ ಈ ಹಿಂದೆ 2014 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನ 20 ಪಂದ್ಯಗಳನ್ನು ಯುಎಇನಲ್ಲಿ ಆಯೋಜಿಸಲಾಗಿತ್ತು. ಇದೀಗ ಕೊರೋನಾ ಕಾರಣದಿಂದ ಮತ್ತೊಮ್ಮೆ ಮಧ್ಯಪ್ರಾಚ್ಯ ದೇಶವನ್ನು ಆಯ್ಕೆ ಮಾಡಲಾಗಿದೆ.

Leave a Reply