ಟೆಹ್ರಾನ್: ಮಹಿಳೆಯೊಬ್ಬರನ್ನು ಸಾಮೂಹಿಕ ಅತ್ಯಾಚಾರಕ್ಕೆ ಗುರಿಪಡಿಸಿದ್ದ 9 ಮಂದಿ ಅಪರಾಧಿಗಳಿಗೆ ಇರಾನ್‍ನ ಸುಪ್ರೀಂಕೋರ್ಟು ಮರಣದಂಡನೆ ಶಿಕ್ಷೆ ಎತ್ತಿಹಿಡಿದಿದ್ದು, ಅವರಿಗೆ ಗಲ್ಲುಶಿಕ್ಷೆ ಬಹಿರಂಗವಾಗಿ ಜಾರಿಗೊಳಿಸಲಾಗಿದೆ ಎಂದು ಇರಾನ್‍ನ ಪತ್ರಿಕೆಯೊಂದು ವರದಿ ಮಾಡಿದೆ.

ದಕ್ಷಿಣ ಫಾರ್ಸ್ ಪ್ರಾಂತದಲ್ಲಿ ಒಂಬತ್ತು ಮಂದಿಯ ತಂಡವೊಂದು ಮನೆಯೊಂದಕ್ಕೆ ನುಗ್ಗಿ ಅಲ್ಲಿದ್ದ ಮಹಿಳೆಯನ್ನು ಅತ್ಯಾಚಾರ ಮಾಡಿದ್ದರು. ಈ ಘಟನೆ ಯಾವಾಗ ನಡೆದಿದೆ ಎಂದು ಪತ್ರಿಕಾ ವರದಿ ಬಹಿರಂಗಪಡಿಸಿಲ. ಒಂಬತ್ತು ಮಂದಿಯ ವಿರುದ್ದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಕೆಳ ಕೋರ್ಟು ನೀಡಿದ ಗಲ್ಲು ಶಿಕ್ಷೆಯನ್ನು ಇರಾನ್‍ನ ಸುಪ್ರೀಂಕೋರ್ಟು ಎತ್ತಿಹಿಡಿದಿದ್ದು, ತದ ನಂತರ ಒಂಬತ್ತು ಮಂದಿ ಅಪರಾಧಿಗಳಿಗೆ ಮರಣ ದಂಡನೆ ಜಾರಿಗೊಳಿಸಲಾಯಿತು.

ಫಾರ್ಸ್ ಪ್ರಾಂತದ ಮುಖ್ಯ ನ್ಯಾಯಾಧೀಶರನ್ನು ಉದ್ಧರಿಸಿ ಅರ್‍ಮಾನ್ ಪತ್ರಿಕೆ ಅತ್ಯಾಚಾರಕ್ಕೊಳಗಾದ ಮಹಿಳೆ ನಂತರ ತನ್ನ ದೂರನ್ನು ಹಿಂಪಡೆದುಕೊಂಡಿದ್ದರು ಎಂದು ತಿಳಿಸಿದೆ. ಆದರೂ ಅಧಿಕಾರಿಗಳು ಆರೋಪಿಗಳಿಗೆ ಶಿಕ್ಷೆ ಜಾರಿಗೊಳಿಸಿದ್ದಾರೆ. ಇರಾನ್ ಜಗತ್ತಿನಲ್ಲಿ ಅತೀ ಹೆಚ್ಚು ಮರಣದಂಡನೆ ನೀಡುವ ದೇಶಗಳಲ್ಲಿ ಮೊದಲ ಸಾಲಿನಲ್ಲಿದೆ ಎಂದು ಮಾನವಹಕ್ಕು ಸಂಘಟನೆಗಳು ಹೇಳಿವೆ. ಜತೆಗೆ ಮರಣದಂಡನೆ ಶಿಕ್ಷಾ ವಿಧಾನವನ್ನು ಇರಾನ್ ರದ್ದುಗೊಳಿಸಬೇಕೆಂದು ಆಗ್ರಹಿಸಿವೆ.

Leave a Reply