Sugar free Candies coming out of the bag on white background

ನಮ್ಮ ಡಾ. ಕಕ್ಕಿಲ್ಲಾಯ ಸರ್ ಕೆಲ ವರ್ಷಗಳ ಹಿಂದೆ “ಸುಧಾ” ದಲ್ಲಿ ಬರೆದ ಲೇಖನವೊಂದರಲ್ಲಿ ಹೀಗೆ ಬರೆದಿದ್ದರು “ಮನುಷ್ಯನಿಗೆ ಸಕ್ಕರೆಯ ಅಗತ್ಯವಿಲ್ಲ.. ಮನುಷ್ಯ ಟೇಸ್ಟ್‌ಗಾಗಿ ತಿನ್ನುತ್ತಾನಷ್ಟೆ. ಆದರೆ ಸಕ್ಕರೆಯೆನ್ನುವುದು‌‌ ಮನುಷ್ಯನನ್ನು ನಿಧಾನವಾಗಿ ಕೊಲ್ಲುತ್ತದೆ. ಬಿಳಿ ಸಕ್ಕರೆ ಎಂದರೆ ಬಿಳಿ ವಿಷ.”

ಇದೀಗ ಕೊರೋನಾದಿಂದ ಹೆಚ್ಚಿನವರಿಗೆ ದುಡಿಮೆ ಇಲ್ಲವಾಗಿದೆ. ಈಗ ನಾವು ಖರ್ಚು ಕಡಿಮೆ ಮಾಡುವ ನಿಟ್ಟಿನಲ್ಲಿ ಶುಗರ್‌ಲೆಸ್ ಆಗಿಬಿಡೋಣ. ಆ ಮೂಲಕ ನಮ್ಮ ಆರೋಗ್ಯಕ್ಕೂ ಮಹತ್ವದ ಕೊಡುಗೆ ನೀಡೋಣ.

ಶುಗರ್ ಇಲ್ಲದೇ ಬದುಕಲು ಸಾಧ್ಯವಿಲ್ಲವೇ…,?

ಖಂಡಿತಾ ಸಾಧ್ಯವಿದೆ. ನಮ್ಮ ಶರೀರಕ್ಕೆ ಬೇಕಾಗಿರುವುದು ಅಗತ್ಯ ಪ್ರಮಾಣದ ಕಾರ್ಬೋ ಹೈಡ್ರೇಟ್ ಹೊರತು ಸಿಹಿಯಲ್ಲ. ‌ಕಾರ್ಬೋಹೈಡ್ರೇಟ್‌ಗಾಗಿ ಸಿಹಿ ತಿನ್ನಬೇಕೆಂದಿಲ್ಲ. ನಮ್ಮ ದೈನಂದಿನ ಆಹಾರಗಳಲ್ಲಿ ಧಾರಾಳವಾಗಿ ಕಾರ್ಬೋಹೈಡ್ರೇಟ್ ಸಿಗುತ್ತದೆ. ಆದುದರಿಂದ ಸಕ್ಕರೆ ತಿನ್ನದೇ ಹೈಪರ್‌ಗ್ಲೈಸೀಮಿಯಾ (ಸಕ್ಕರೆಯಂಶ ಕಡಿಮೆಯಾಗಿ ) ಆಗಿ ನೀವು ಚಕ್ಕರ್ ಬಂದು ಬೀಳಲಾರಿರಿ.

ಸಕ್ಕರೆ ವರ್ಜಿಸುವುದು ಹೇಗೆ…?

ಉದಾಹರಣೆಗೆ : ನೀವು ಪ್ರತಿದಿನ ಎರಡು ಬಾರಿ‌ ಸಕ್ಕರೆ ಹಾಕಿದ ಚಹಾ ಸೇವಿಸುತ್ತಿದ್ದೀರೆಂದಿಟ್ಟುಕೊಳ್ಳಿ..

ಒಂದು ಶುಭಮುಂಜಾನೆ ಸಕ್ಕರೆ ರಹಿತ ಚಹಾ ಪ್ರಾರಂಭಿಸಿ.. ಮೊದಲ ಮೂರು ದಿನ ನಿಮಗೆ ತುಂಬಾನೇ ಕಷ್ಟವಾಗುತ್ತದೆ.ನಾಲ್ಕನೇ ದಿನ ನಿಮಗೆ ಪರವಾಗಿಲ್ಲ, ಶುಗರ್ ಲೆಸ್ ಮ್ಯಾನೇ‌ಜ್ ಮಾಡಬಹುದು ಎಂದೆನಿಸುತ್ತದೆ. ಹೀಗೆ ಹೋಗ್ತಾ ಹೋಗ್ತಾ ಹತ್ತನೇ ದಿನಕ್ಕಾಗುವಾಗ ನಿಮಗೆ ” ಚಹಾ” ಟೇಸ್ಟೇ ಹೀಗೆಂದೆನಿಸುವಷ್ಟು ನಿಮ್ಮ ನಾಲಿಗೆಯ ರುಚಿಗ್ರಹಣ ಶಕ್ತಿಯು ಅದಕ್ಕೆ ಅಡ್ಜಸ್ಟ್ ಆಗಿರುತ್ತದೆ. ಹನ್ನೊಂದನೇ ದಿನ ನೀವು ಎಲ್ಲಾದರೂ ಸಕ್ಕರೆ ಹಾಕಿದ ಚಹಾ ಕುಡಿಯಹೋದರೆ ನಿಮ್ಮ ನಾಲಿಗೆ ಅದನ್ನು ಏಕಾ ಏಕಿ ಸ್ವೀಕರಿಸಲು ತಯಾರಾಗುವುದಿಲ್ಲ. ಇದು ನನ್ನ ನಾಲಿಗೆಗೆ ಹೊಂದುವುದಿಲ್ಲ ಎಂದು ನೀವೇ ಹೇಳಿಕೊಳ್ಳುತ್ತೀರಿ.

ಈ ರೀತಿ ನಿಮಗೆ ಹಾಲು ಬೆರೆಸಿದ ಚಹಾ ಅಲ್ಲದೇ ಬ್ಲ್ಯಾಕ್ ಟೀ ಕೂಡಾ ಅಷ್ಟೇ ಆರಾಮಾಗಿ, ಶುಗರ್ ಲೆಸ್ ಆಗಿ ಕುಡಿಯಲು ಸಾಧ್ಯ. ಮೊದ ಮೊದಲು ಬ್ಲ್ಯಾಕ್ ಟೀ ನಿಮಗೆ ಅಸಾಧ್ಯ ಕಹಿಯೆನಿಸಿ ಕುಡಿಯಲು ಕಷ್ಟವಾಗುತ್ತೆ.‌ ಅದನ್ನು ಕೂಡಾ ಮೂರು- ನಾಲ್ಕು ದಿನಗಳಲ್ಲಿ ನಿಮ್ಮ ನಾಲಿಗೆ ಸ್ವೀಕರಿಸುತ್ತೆ.ಮುಂದೆ‌ ಮೊದ ಮೊದಲು ಅಸಾಧ್ಯ ಕಹಿಯೆನಿಸುತ್ತಿದ್ದ ಬ್ಲ್ಯಾಕ್ ಟೀ ಎಂದರೆ ಇದೇ ಟೇಸ್ಟ್ ಎನ್ನುವ ಮಟ್ಟಕ್ಕೆ ನಿಮ್ಮ ನಾಲಿಗೆ ಅದಕ್ಕೂ ಅಡ್ಜಸ್ಟ್ ‌ಆಗಿ ಬಿಡುತ್ತೆ.

ಹೀಗೆ ನೀವು ಒಂದೊಂದೇ ಅಭ್ಯಾಸ ಮಾಡ್ತಾ ಬಂದ್ರೆ ಶುಗರ್‌ಲೆಸ್ಸಾಗಿ ಬದುಕಲು ಸಾಧ್ಯವಾಗುತ್ತದೆ. ಆರ್ಥಿಕವಾಗಿಯೂ ಲಾಭವಾಗುತ್ತೆ ಮತ್ತು ಆರೋಗ್ಯದಲ್ಲಿಯೂ ಅನಿರೀಕ್ಷಿತ ಸುಧಾರಣೆಗಳನ್ನು ಕಾಣಬಹುದು…

ಇಸ್ಮತ್ ಪಜೀರ್ ( ಲೇಖಕರು ದೇರಳಕಟ್ಟೆ ಡಯೋಗ್ನೋಸ್ಟಿಕ್ ಆಂಡ್ ಪಾಲಿ ಕ್ಲಿನಿಕ್ ಇದರ ನಿರ್ದೇಶಕರಾಗಿದ್ದಾರೆ.)

Leave a Reply