ಬೆಂಗಳೂರು: ಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರು ಇನ್ನು ಮುಂದೆ ತಮ್ಮ ಆಸ್ತಿಯ ವಿವರ ಮಾತ್ರವಲ್ಲ, ತಂದೆ, ತಾಯಿ, ಮಕ್ಕಳ ಹೆಸರಿನಲ್ಲಿರುವ ಸ್ಥಿರ ಮತ್ತು ಚರಾಸ್ತಿ, ನಗದು, ಬ್ಯಾಂಕ್ ಖಾತೆ ವಿವರಗಳನ್ನು ಪ್ರತಿವರ್ಷ ಬಹಿರಂಗ ಪಡಿಸಬೇಕು.

ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಲು ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಅಂಶವನ್ನು ತೀರ್ಮಾನಿಸಲಾಗಿದೆ. ಸಭೆಯ ಬಳಿಕ ಸಂಸದೀಯ ಸಚಿವ ಟಿ.ಬಿ. ಜಯಚಂದ್ರ, ತಿದ್ದುಪಡಿಯ ವಿವರಗಳನ್ನು ನೀಡುತ್ತಾ ಎಲ್ಲಾ ಆಸ್ತಿಯ ವಿವರಗಳನ್ನು ಲೋಕಾಯುಕ್ತ ಇಲಾಖೆಗೆ ಪ್ರತಿ ವರ್ಷ ಸಲ್ಲಿಸಬೇಕು ಎಂದು ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಇಲ್ಲಿಯವರೆಗಿದ್ದ ನಿಯಮಗಳ ಅನುಸಾರ ತಮ್ಮ ಹಾಗೂ ಪತ್ನಿಯ ಹೆಸರಿನಲ್ಲಿರುವ ಆಸ್ತಿ ಮತ್ತು ಸಾಲದ ವಿವರಗಳನ್ನಷ್ಟೇ ನೀಡಿದರೆ ಸಾಕಿತ್ತು. ಆದರೆ ಇನ್ಮುಂದೆ ಆತನ ಪತ್ನಿ, ತಂದೆ, ತಾಯಿ ಹಾಗೂ ಎಲ್ಲ ಮಕ್ಕಳ ಹೆಸರು, ಅವರ ಹೆಸರಿನಲ್ಲಿರುವ ಆಸ್ತಿ, ಅವರೆಲ್ಲರ ಬ್ಯಾಂಕ್ ಖಾತೆಗಳ ವಿವರ, ವಿವಿಧ ರೂಪದ ಉಳಿತಾಯ, ₹10,000 ಮೌಲ್ಯಕ್ಕೂ ಮೇಲ್ಪಟ್ಟ ವಸ್ತುಗಳ ವಿವರ, ₹25,000 ಮೌಲ್ಯಕ್ಕೂ ಮೇಲ್ಪಟ್ಟ ಗೃಹೋಪಯೋಗಿ ವಸ್ತುಗಳ ವಿವರಗಳನ್ನು ಸಲ್ಲಿಸಬೇಕಾಗುತ್ತದೆ.

Leave a Reply