ಕನ್ನಡ ಉಳಿಸಿ, ಬೆಳೆಸಿ ಕಾಪಾಡುವ ದಿಸೆಯಲ್ಲಿ ದಿಟ್ಟ ಹೆಜ್ಜೆಯನ್ನಿಟ್ಟಿರುವ ರಾಜ್ಯ ಸರ್ಕಾರವು ನವಂಬರ್ 1ರಿಂದ ಮುಖ್ಯಮಂತ್ರಿಯಾದಿಯಾಗಿ ರಾಜ್ಯದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಎಲ್ಲ ಸಚಿವರು, ಪ್ರಧಾನ ಕಾರ್ಯದರ್ಶಿಗಳು ಕಡತಗಳನ್ನು ಕನ್ನಡದಲ್ಲೇ ಮಂಡಿಸಬೇಕು ಮತ್ತು ಸಹಿ ಕೂಡ ಕನ್ನಡದಲ್ಲೇ ಇರತಕ್ಕದ್ದು ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಮಹತ್ವದ ಆದೇಶ ಹೊರಡಿಸಿದ್ದಾರೆ.

ಆಡಳಿತದಲ್ಲಿ ಕನ್ನಡ ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಹಲವು ದಶಕಗಳಿಂದಲೂ ಹೋರಾಟ ನಡೆಯುತ್ತಲೇ ಇದ್ದು, ಅಧಿಕಾರಿ ವರ್ಗದ ಅಸಹಕಾರ ಮತ್ತು ಅಸಡ್ಡೆ ಧೋರಣೆಯಿಂದಾಗಿ ಈವರೆಗೂ ಸಾಧ್ಯವಾಗಿರಲಿಲ್ಲ. ಇದೀಗ ಸರಕಾರವು ಮಹತ್ವಪೂರ್ಣ ಹೆಜ್ಜೆ ಇರಿಸಿದೆ.

ಆಂಗ್ಲ ಭಾಷೆಯಲ್ಲಿ ಕಡತಗಳನ್ನು ಮಂಡಿಸಿದಲ್ಲಿ ಅವುಗಳನ್ನು ವಾಪಸ್ ಕಳುಹಿಸುವಂತೆಯೂ ಆದೇಶದಲ್ಲಿ ನಿರ್ದೇಶಿಸಲಾಗಿದೆ. ಶಿಕ್ಷಣದಲ್ಲಿ ಕನ್ನಡ ಮಾಧ್ಯಮ ಕಡ್ಡಾಯಗೊಳಿಸುವುದರ ಜೊತೆಗೆ ಆಡಳಿತದಲ್ಲೂ ಕನ್ನಡ ಬಳಕೆ ಕಡ್ಡಾಯ ಮಾಡುವಂತೆ ದಿ.ಸರೋಜಿನಿ ಮಹಷಿ ನೇತೃತ್ವದ ಸಮಿತಿಯೂ ಸೇರಿದಂತೆ ಹಲವಾರು ದಿಗ್ಗಜರು ಒತ್ತಾಯಿಸುತ್ತಲೇ ಬಂದಿದ್ದರೂ, ಸಾಕಾರ ರೂಪಕ್ಕೆ ಬಂದಿರಲಿಲ್ಲ.

ಇದೇ ಕಾರಣಕಾಗಿ ರಾಮಕೃಷ್ಣ ಹೆಗಡೆಯವರ ಕಾಲದಲ್ಲಿ ಕನ್ನಡ ಕಾವಲು ಸಮಿತಿ ರಚಿಸುವ ಮೂಲಕ ಆಡಳಿತದಲ್ಲಿ ಕನ್ನಡ ಕಡ್ಡಾಯಗೊಳಿಸಲು ಚಾಲನೆ ನೀಡಲಾಗಿತ್ತು. ಕನ್ನಡ ಬಳಕೆ ಮಾಡದ ಐಎಎಸ್-ಐಪಿಎಸ್ ಅಧಿಕಾರಿಗಳು ಸೇಸದಂತೆ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲು ಸಮಿತಿಗೆ ಅಧಿಕಾರ ಕಲ್ಪಿಸಲಾಗಿತ್ತು. ರಾಜ್ಯ ಸರ್ಕಾರದ ನಿರ್ಧಾರಕ್ಕೆ ಪೂರಕವಾಗಿ ಸದ್ಯ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ ವಿಜಯಭಾಸ್ಕರ್ ಕನ್ನಡದಲ್ಲೇ ರುಜು ಹಾಕುತ್ತಿದ್ದಾರೆ.

Leave a Reply