ಕೊಟ್ಟಾಯಂ: ಕಾರಿನ ಎಂಜಿನ್ ನೊಳಗೆ ಸಿಕ್ಕಿ ಬಿದ್ದು ಬಿಸಿ ಶಾಖದ ಮಧ್ಯೆಯೂ 600 ಕಿಲೋಮೀಟರ್‌ಗಳಷ್ಟು ಕ್ರಮಿಸಿದ ಬೆಕ್ಕಿನ ಮರಿಯೊಂದು ಪವಾಡ ಸದೃಶವಾಗಿ ಪಾರಾಗಿದೆ . ಇದೀಗ ಆ ಬೆಕ್ಕಿನ ಮರಿಯನ್ನು ಮೂವರು ಸಹೃದಯರು ಅದರ ತಾಯಿಯ ಮಡಿಲಿಗೆ ಸೇರಿಸಿದ್ದಾರೆ. ಇದರೊಂದಿಗೆ ತಾಯಿ ಬೆಕ್ಕು ಮತ್ತು ಮರಿ ಮತ್ತೆ ಒಂದಾಗಿದೆ.

ಕೊಟ್ಟಾಯಂನ ಐಟಿ ಸಿಬ್ಬಂದಿ ವಿಷ್ಣು ಮತ್ತು ರಾಜೀವ್ ಪರ್ಮನೆಂಟ್ ಆಗಿ ವರ್ಕ್ ಫ್ರಾಮ್ ಹೋಮ್ ಆದ ಬಳಿಕ ಬೆಂಗಳೂರಿನ ತಮ್ಮ ಬಾಡಿಗೆ ಫ್ಲ್ಯಾಟ್ ಖಾಲಿ ಮಾಡಲು ಹೋಗಿದ್ದರು. ಅಕ್ಟೋಬರ್ 1 ರಂದು ಬೆಂಗಳೂರಿಗೆ ಪ್ರಾರಂಭವಾದ ಪ್ರಯಾಣದಲ್ಲಿ ಅವರ ಜೊತೆ ಅವಿನಾಶ್ ಕೂಡ ಇದ್ದರು. ಮರುದಿನ ಅವರು ಬೆಂಗಳೂರು ತಲುಪಿದಾಗ, ಕಾರಿನ ಒಳಗಿನಿಂದ ‘ಮಿಯಾಂವ್’ ಶಬ್ದ ಕೇಳಿಸಿತು. ಅವರು ತೆರೆದು ನೋಡಿದಾಗ ಬೆಕ್ಕಿನ ಮರಿ ಸಿಲುಕಿಕೊಂಡಿತ್ತು.

ಅವಿನಾಶ್ ಅವರ ಮನೆಯಲ್ಲಿ ಆಟವಾಡುತ್ತಿದ್ದ ಮೂರು ಬೆಕ್ಕಿನ ಮರಿಯಲ್ಲಿ ಇದೂ ಒಂದು . ಬಳಿಕ ಅವರು ಗ್ಯಾರೇಜ್ ಹೋಗಿ ಜಾಗ್ರತೆಯಿಂದ ಬೆಕ್ಕಿನ ಮರಿಯನ್ನು ಹೊರ ತೆಗೆದರು. ಬಳಿಕ ಬೆಕ್ಕಿನ ಮರಿಗೆ ಹಾಲು ಮತ್ತು ಬಿಸ್ಕತ್ತು ಗಳನ್ನು ನೀಡಿದರು.  ಆದರೆ ಭಯದಿಂದ ಅದು ಏನೂ ತಿನ್ನಲಿಲ್ಲ. ಬಳಿಕ ಅವರು ಬೆಕ್ಕಿನ ಮರಿಯನ್ನು ಬೆಂಗಳೂರು ವೆಟ್ಸ್ ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ವಿಟಮಿನ್ ಚುಚ್ಚುಮದ್ದು ನೀಡಿ ಅದಕ್ಕೆ ಚಿಕಿತ್ಸೆ ನೀಡಿದರು.

ಅಕ್ಟೋಬರ್ 6 ರಂದು, ಮೂವರು ಸ್ನೇಹಿತರು ಕಾರಿನಲ್ಲಿ ಕೇರಳಕ್ಕೆ ಹಿಂದಿರುಗಿದಾಗ, ಅವರೊಂದಿಗೆ ಹಿಂದಿನ ಸೀಟಿನಲ್ಲಿ ಈ ಬೆಕ್ಕಿನ ಮರಿಯನ್ನೂ ಕೂರಿಸಲಾಯಿತು. ಸ್ನೇಹಿತರು ಹೆಲೆನ್ ಚಲನಚಿತ್ರದ ಬಗ್ಗೆ ಮಾತನಾಡಿದರು. ಅದರಲ್ಲಿ ಅಪರೂಪದ ಬದುಕುಳಿಯುವ ಸನ್ನಿವೇಶ ಇದೆ. ಆದ್ದರಿಂದ ಅವರು ಈ ಬೆಕ್ಕಿನ ಮರಿಗೆ ಹೆಲೆನ್ ಎಂದು ಹೆಸರಿಸಿದ್ದಾರೆ.

ಕೊಚ್ಚಿಗೆ ತಲುಪಿದ ಅವರು ಹೆಲೆನ್‌ನನ್ನು ಮನೆಯ ಟೆರೇಸ್‌ಗೆ ಬಿಟ್ಟರು. ಕೂಡಲೇ ತಾಯಿ ಬೆಕ್ಕು ಓಡಿ ಬಂದಿತು ತನ್ನ ಮರಿಯನ್ನು ಮುದ್ದಾಡ ತೊಡಗಿತು. ತಾಯಿ ಬೆಕ್ಕು ಮತ್ತು ಮರಿಯು ಸುಮಾರು ಒಂದು ವಾರಗಳ ವರೆಗೆ ಪರಸ್ಪರ ದೂರ ಆಗಿದ್ದವು.

Leave a Reply