ಒಂಬತ್ತು ವರ್ಷಗಳ ಹಿಂದೆ ಭಾರತದ ಪೂರ್ವ ಕರಾವಳಿಗೆ ಸುನಾಮಿನ ಅಪ್ಪಳಿಸಿದಾಗ ಲಕ್ಷಾಂತರ ಮಂದಿ ಜೀವ ಕಳೆದುಕೊಂಡರು. ಈ ದುರಂತದ ಅಲೆಯು ದ್ವೀಪ ಸಮೂಹ ಇಂಡೊನೇಷ್ಯಾವನ್ನೂ ಅಪ್ಪಳಿಸಿತ್ತು. ಕಾಕನಾ ಎಂಬ ಗ್ರಾಮದ ಪುಟ್ಟ ಮನೆಯಲ್ಲಿ ಮಲಗಿದ್ದ ದೆಬೊರಾ ತಂದೆಗೆ ಸಮುದ್ರ ನೀರು ಪುಟ್ಟ ಗ್ರಾಮವನ್ನು ಆವರಿಸುತ್ತಿರುವುದು ಗಮನಕ್ಕೆ ಬಂತು. ಕೂಡಲೇ ಆ ಪುಟ್ಟ ಕುಟುಂಬ ಜೀವವನ್ನು ಕೈಯಲ್ಲಿ ಹಿಡಿದು ಕಾಡು ಸೇರಿಕೊಂಡಿತು. ಆಹಾರವಿಲ್ಲದೆ ಮರದ ಕೊಂಬೆಯ ಮೇಲೆ ಕೆಲ ದಿನ ಕಳೆದ ನಂತರ ಮತ್ತೆ ಗ್ರಾಮಕ್ಕೆ ತೆರಳಿದರೆ ಅಲ್ಲಿ ಕಾಣಸಿಕ್ಕಿದ್ದು ಊರಲ್ಲ; ಬದಲಿಗೆ ಕೆಸರು ತುಂಬಿದ ಬಯಲು. ಹೀಗೆ ಕಷ್ಟಗಳ ಅಲೆಯಲ್ಲೇ ಬದುಕು ಕಂಡು ಏಷ್ಯನ್ ಸೈಕ್ಲಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಒಂದು ಬೆಳ್ಳಿಹಾಗೂ 2 ಕಂಚಿನ ಪದಕ ತಂದಿತ್ತ ಸಾಹಸಿ ಯುವತಿ ದೆಬೊರಾ.

ಸುನಾಮಿ ನಂತರ ಬದುಕು ಹೇಗಿತ್ತು?
ನಾನು ಆಗ ಚಿಕ್ಕವಳಾಗಿದ್ದೆ. ಸುಮಾನಿ ಬೆಳಗಿನ ಜಾವ ಅಪ್ಪಳಿಸಿತ್ತು. ಇದನ್ನು ತಿಳಿದ ತಂದೆ ನಮ್ಮನ್ನು ದೂರದ ಕಾಡಿಗೆ ಕೊಂಡೊಯ್ದರು. ಅಲ್ಲಿಗೂ ಸಮುದ್ರದ ನೀರು ಬರುವ ಸಾಧ್ಯತೆ ಇದ್ದುದರಿಂದ ನಾವು ಮರದಲ್ಲೇ ಕೆಲವು ದಿನಗಳನ್ನು ಕಳೆದೆವು. ತಿನ್ನಲು ಆಹಾರವೂ ಇರಲಿಲ್ಲ. ಕೆಲವು ದಿನ ಬಿಟ್ಟು ಊರಿಗೆ ಹೋದಾಗ ನಮ್ಮ ಪುಟ್ಟ ಮನೆ ನಾಪತ್ತೆಯಾಗಿತ್ತು. ಸುನಾಮಿ ಅಲೆಗೆ ಅದು ಕೊಚ್ಚಿ ಹೋಗಿತ್ತು. ನೆರೆಯಲ್ಲಿ ವಾಸವಾಗಿದ್ದ ಕುಟುಂಬಗಳೂ ಕಾಣಸಿಗಲಿಲ್ಲ. ಸುನಾಮಿಯಿಂದ ಬದುಕುಳಿದ ನನಗೆ ಈಗ ಬದುಕಿನ ಯಾವುದೇ ಕಷ್ಟಗಳೂ ದೊಡ್ಡದಾಗಿ ಕಾಣುತ್ತಿಲ್ಲ.

ಸೈಕ್ಲಿಂಗ್‌ನಲ್ಲಿ ಆಸಕ್ತಿಹೊಂದಲು ಕಾರಣ?
ನಮ್ಮದು ಪುಟ್ಟ ಗ್ರಾಮ. ಸುನಾಮಿಯಲ್ಲಿ ಇದ್ದ ಕೃಷಿ ಭೂಮಿಯನ್ನು ಕಳೆದುಕೊಂಡ ನಂತರ ಮತ್ತಷ್ಟು ಬಡತನ ಕಾಡತೊಡಗಿತು. ಆಗ ದೇವರ ಅನುಗ್ರಹದಿಂದ ತಂದೆಗೆ ಏರ್‌ಫೋರ್ಸ್‌ನಲ್ಲಿ ಪುಟ್ಟ ಕೆಲಸ ಸಿಕ್ಕಿತು. ಶಾಲೆಗೆ ಸೈಕಲ್ ತುಳಿದೇ ಹೋಗುತ್ತಿದೆ. ಇತರ ಕ್ರೀಡೆಗಳಲ್ಲಿ ಹೆಚ್ಚಿನ ಆಸಕ್ತಿ ಇತ್ತು. ಆದರೆ ಒಮ್ಮೆ ಶಾಲೆಯಲ್ಲಿ ನಡೆದ ಸೈಕ್ಲಿಂಗ್‌ನಲ್ಲಿ ಪಾಲ್ಗೊಂಡು ಮೊದಲ ಸ್ಥಾನ ಪಡೆದೆ. ಅಲ್ಲಿಂದ ಬದುಕು ಬದಲಾಯಿತು.

ತರಬೇತಿಗೆ ಮೂಲಭೂತ ಸೌಕರ್ಯ ಇದೆಯೇ?
ಹೊಸದಿಲ್ಲಿಗೆ ಹೋಲಿಸಿದರೆ ಇಂಡೊನೇಷ್ಯಾದಲ್ಲಿ ಸೌಲಭ್ಯಗಳು ಕಡಿಮೆ. ನಾನು ಬೆಳೆದ ಪರಿಸರ ಸೈಕ್ಲಿಂಗ್‌ಗೆ ಯೋಗ್ಯವಾಗಿದೆ. ಅಂಡಮಾನ್ ನಿಕೋಬಾರ್‌ನಲ್ಲಿ ಭಾರತೀಯ ಕ್ರೀಡಾ ಪ್ರಾಧಿಕಾರದ ಕೇಂದ್ರವಿದೆ. ಸೈಕ್ಲಿಂಗ್‌ಗೆ ಬರುವ ಮೊದಲ ಹೈಜಂಪ್, ಲಾಂಗ್‌ಜಂಪ್ ಮತ್ತು ಓಟದಲ್ಲಿ ಸಾಕಷ್ಟು ಪದಕ ಗೆದ್ದಿರುವ ಎಲ್ಲರಿಗೂ ನನ್ನ ಕ್ರೀಡಾ ಸಾಮರ್ಥ್ಯದ ಪರಿಚಯವಿತ್ತು. ನನ್ನಲ್ಲಿರುವ ಸೈಕ್ಲಿಂಗ್ ಪ್ರತಿಭೆಯು ದಿಲ್ಲಿಯ ವೆಲೋಡ್ರೊಮ್‌ನಲ್ಲಿ ತರಬೇತಿ ಸಿಗುವಂತೆ ಮಾಡಿತು. 2011ರಲ್ಲಿ ಸಾಯ್ ಸೇರಿದೆ. ಸುಬೇಂದು ಸೇನಾಗುಪ್ತಾ ನನಗೆ ಸೈಕ್ಲಿಂಗ್‌ನಲ್ಲಿ ತರಬೇತಿ ನೀಡಿದರು.

ಏಷ್ಯನ್ ಚಾಂಪಿಯನ್‌ಷಿಪ್ ಸಾಧನೆ ಬಗ್ಗೆ ಹೇಳಿ?

ಭಾರತ ದೇಶವನ್ನು ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಪ್ರತಿನಿಧಿಸುತ್ತೇನೆಂದು ಯೋಚಿಸಿರಲಿಲ್ಲ. ದಿಲ್ಲಿಗೆ ಬರಿಗೈಯಲ್ಲಿ ಬಂದೆ. ಸರಕಾರ ಉತ್ತಮ ಸೈಕಲ್ ನೀಡಿತು. ಅದಕ್ಕೆ ಪೂರಕವಾದ ತರಬೇತಿಯೂ ಸಿಕ್ಕಿತು. ಮೊದಲ ಪದಕ ಗೆದ್ದಿರುವುದು ನಿಜವಾಗಿಯೂ ಖುಷಿಕೊಟ್ಟಿದೆ. ಈ ಪದಕ ನಮ್ಮೂರಲ್ಲಿ ಎಲ್ಲರನ್ನೂ ಖುಷಿ ಪಡಿಸುತ್ತದೆ.

ಇಂಡೊನೇಷ್ಯಾದಲ್ಲಿ ನೆಲೆ; ಭಾರತದಲ್ಲಿ ತರಬೇತಿ. ಕಷ್ಟವೆನಿಸುವುದಿಲ್ಲವೇ?

ಸದ್ಯದ ಸ್ಥಿತಿಯಲ್ಲಿ ನನಗೆ ಯಾವುದೂ ಕಷ್ಟವಾಗಿ ಕಾಣುತ್ತಿಲ್ಲ. ಪ್ರಯಾಣ ಎಂದರೆ ನನಗೆ ಇಷ್ಟ. ಸೈಕಲ್‌ನಲ್ಲಿ ಸಾಕಷ್ಟು ದೂರ ಪಯಣ ಮಾಡುತ್ತೇನೆ. ಮನೆ ಬಿಟ್ಟು ಹಲವಾರು ತಿಂಗಳಾಯಿತು. ದಿಲ್ಲಿಯಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಸಾಧನೆ ಮಾಡಬೇಕಾದರೆ ಕೆಲವೊಮ್ಮೆ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ನಾನು ಅನುಭವಿಸಿದ ಕಷ್ಟಕ್ಕಿಂತ ಇದು ದೊಡ್ಡದೇನಲ್ಲ.

ನಿಮ್ಮ ನಿತ್ಯದ ತರಬೇತಿ ಹೇಗಿರುತ್ತದೆ?
ಪ್ರತಿದಿನ ಐದು ತಾಸು ಅಭ್ಯಾಸ ನಡೆಸುತ್ತೇನೆ. ಶಿಬಿರದಲ್ಲಿರುವಾಗ ಇನ್ನೂ ಹೆಚ್ಚು ಕಾಲ ಅಭ್ಯಾಸ ನಡೆಸುತ್ತೇನೆ. ನಮ್ಮದು ಸಾಹಸದ ಬದುಕು. ಸೈಕ್ಲಿಂಗ್ ಕ್ರೀಡೆಯನ್ನು ನಾನು ಹೆಚ್ಚಾಗಿ ಪ್ರೀತಿಸುತ್ತೇನೆ. ಸೈಕ್ಲಿಂಗ್ ಜತೆಯಲ್ಲೇ ಇತರ ಕ್ರೀಡೆಗಳ ಅಭ್ಯಾಸವನ್ನೂ ಮಾಡುತ್ತೇನೆ.

ಕ್ರೀಡಾ ಕ್ಷೇತ್ರದಲ್ಲಿ ಮುಂದಿನ ಗುರಿ?
ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಪದಕ ಗೆದ್ದು ಭಾರತಕ್ಕೆ ಕೀರ್ತಿ ತರಬೇಕು. ಆದರೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡು ಅಲ್ಲೊಂದು ಪದಕ ಗೆಲ್ಲಬೇಕೆಂಬುದು ನನ್ನ ಜೀವನದ ಮಹತ್ವದ ಗುರಿ.

ನಿಮಗೆ ಮಹೇಂದ್ರ ಸಿಂಗ್ ಧೋನಿ ಮಾದರಿಯಂತೆ, ಯಾಕೆ?
ನನ್ನಂತೆಯೇ ಧೋನಿ ಕೂಡ ಚಿಕ್ಕಗ್ರಾಮದಿಂದ ಬಂದವರು. ಅವರಲ್ಲಿ ಹೋರಾಡುವ ಛಲ ಇದೆ. ಉತ್ತಮ ನಾಯಕತ್ವದ ಗುಣ ಇದೆ. ಈ ಕಾರಣಕ್ಕಾಗಿ ಅವರು ನನಗೆ ಆದರ್ಶ ಎನಿಸಿದ್ದಾರೆ.

ಸೋಮಶೇಖರ್ ಪಡುಕರೆ ಬೆಂಗಳೂರು
ವಿಜಯಕರ್ನಾಟಕ

LEAVE A REPLY

Please enter your comment!
Please enter your name here