ದಾವಣಗೆರೆ: ಕೊರೋನಾ ಲಾಕ್ ಡೌನ್‌ನಿಂದಾಗಿ ರಾಜ್ಯದಲ್ಲಿ ಅತಿಥಿ ಉಪನ್ಯಾಸಕರನ್ನು ಅಕ್ಷರಶಃ ಅತಂತ್ರರಾಗಿದ್ದಾರೆ. ಕಳೆದ ನಾಲ್ಕು ತಿಂಗಳಿನಿಂದ ವೇತನವಿಲ್ಲದೆ ತೀವ್ರ ಆರ್ಥಿಕ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಬೇಸತ್ತ 8 ಮಂದಿ ಅತಿಥಿ ಉಪನ್ಯಾಸಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಾರ್ಚ್‌ನಿಂದ ಇಲ್ಲಿಯವರೆಗೆ ಬೆಂಗಳೂರು ವಿ.ವಿ ವ್ಯಾಪ್ತಿಯಲ್ಲಿ ಮೂವರು, ಮೈಸೂರು ವಿ.ವಿ ವ್ಯಾಪ್ತಿಯ ಮಂಡ್ಯ ಜಿಲ್ಲೆ ಮಳವಳ್ಳಿಯಲ್ಲಿ ಇಬ್ಬರು ಮತ್ತು ಶಿವಮೊಗ್ಗ ವಿ.ವಿಯಲ್ಲಿ ಮೂವರು ಉಪನ್ಯಾಸಕರು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಜ್ಯದ 413 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 14,564 ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. ಇವರಲ್ಲಿ ಬಹಳಷ್ಟು ಮಂದಿ 20-25 ವರ್ಷಗಳಿಂದಲೂ ‘ಅತಿಥಿ’ಗಳಾಗಿಯೇ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಯಮಾತಿಯ ಭರವಸೆಯಲ್ಲಿಯೇ ಹಲವಾರು ವರ್ಷ ಕಳೆದಿದ್ದಾರೆ. ಇವರಿಗೆ ವರ್ಷದ ಕಾಲೇಜು ಅವಧಿಯವರಿಗೆ ಮಾತ್ರ ವೇತನ. ಈ ವರ್ಷ ಕೊರೊನಾ ಕಾರಣಕ್ಕೆ ಮಾರ್ಚ್ ನಂತರ ಕಾಲೇಜುಗಳ ಅವಧಿ ಮೊಟಕುಗೊಳಿಸಿದ್ದರಿಂದ ಕೆಲಸವಿಲ್ಲದಂತಾಗಿದೆ. ಹೀಗಾಗಿ, ಮಾರ್ಚ್‌ನಿಂದ ಈವರೆಗೂ ಸಂಬಳವಿಲ್ಲದ್ದರಿಂದ ಕಂಗಾಲಾಗಿದ್ದಾರೆ,
ರಾಜ್ಯದಲ್ಲಿ 20,000ಕ್ಕೂ ಹೆಚ್ಚು ಮಂದಿ ಅತಿಥಿ ಉಪನ್ಯಾಸಕರಿದ್ದಾರೆ. ಇವರಿಗೆ ಕನಿಷ್ಟ ಮೂಲ ಸೌಲಭ್ಯಗಳಿಲ್ಲ, ಉದ್ಯೋಗ ಭದ್ರತೆ, ಭವಿಷ್ಯನಿಧಿ, ಇ.ಎಸ್.ಐ., ಏನೂ ಇಲ್ಲ. ರಾಜ್ಯದ 2514 ಖಾಸಗಿ ಅನುದಾನಿತ, ಅನುದಾನರಹಿತ ಪದವಿ ಕಾಲೇಜುಗಳಲ್ಲಿ ಇವರ ಕಾರ್ಯಭಾರವಿದೆ. ಇಂಜಿನಿಯರಿಂಗ್ ಕಾಲೇಜು ಮತ್ತು ಪಾಲಿಟೆಕ್ನಿಕ್‌ಗಳಲ್ಲೂ 1320 ಅತಿಥಿ ಉಪನ್ಯಾಸಕರಿದ್ದಾರೆ.

ಪಿ. ಮಂಜುನಾಥ ಕಾಡಜ್ಜಿ
ಕೃಪೆ : ಸಂಯುಕ್ತ ಕರ್ನಾಟಕ

LEAVE A REPLY

Please enter your comment!
Please enter your name here