ಎತ್ತಣ ಮಾಮರ ಎತ್ತಣ ಕೋಗಿಲೆ ಎತ್ತಣಿಂದೆತ್ತ ಸಂಬಂಧ?……… ಹೌದು! ಎಲ್ಲಿನ ಬಂಗಾಲ, ಎಲ್ಲಿನ ತಿರುವನಂತಪುರ, ಎಲ್ಲಿನ ಮಂಗಳೂರು ಮಾರ್ನಮಿಕಟ್ಟೆ…………… ಪಶ್ಚಿಮ ಬಂಗಾಲದಿಂದ ದಕ್ಷಿಣ ಕೇರಳದ ತಿರುವನಂತಪುರಕ್ಕೆ ಕೆಲಸ ಅರಸಿ ಬಂದ ಯುವಕ ಮನೋವ್ಯಥೆಗೊಳಗಾಗಿ ತನಗರಿವಿಲ್ಲದೆಯೇ ಬಂದು ಬಿದ್ದದ್ದು ಮಾತ್ರ ಮಂಗಳೂರಿನಲ್ಲಿ. ಹೀಗೆ ಮಾನಸಿಕ ಸ್ಥಿಮಿತ ಕಳೆದು ಎಲ್ಲೋ ಬಿದ್ದು ಕಮರಿ ಹೋಗುವ ಬಡ ಜೀವಗಳೆಷ್ಟು? ಆದರೆ, ತನಗೆ ಸಂಬಂಧವಿಲ್ಲದ ಮಂಗಳೂರಿಗೆ ತಲುಪಿದ್ದರಿಂದಲೇ ಆತ ಸ್ನೇಹದ ಬೀಡಿನ ಆಶ್ರಯ, ಆರೈಕೆ ಹೊಂದುವಂತಾದ. ಇದರಿಂದಾಗಿಯೇ ಪೂರ್ಣ ಗುಣಮುಖನಾಗಿ ಸಂಬಂಧಿಕರನ್ನು ಮರಳಿ ಗಳಿಸಿ ಸುಂದರ ಬದುಕು ರೂಪಿಸುವಂತಾದ………

ಆತ ವಿಕ್ರಮ್ ಮಂಡಾಲ. 28 ರ ಹರೆಯ. ವಿವಾಹಿತನಾಗಿ ಮೂರು ವರ್ಷ ಹಾಗೂ ಎರಡು ತಿಂಗಳ ಪುಟಾಣಿಯ  ಅಪ್ಪ. ತಂದೆ, ತಾಯಿ ಒಳಗೊಂಡ ಮಧ್ಯಮ ವರ್ಗದ ಕುಟುಂಬ ನಡೆಸುವ ಹೊಣೆಗಾರಿಕೆ ಆ ಯುವಕನ ಮೇಲೆ. ಮೇಸ್ತ್ರಿ ಕೆಲಸ ಮಾಡುತ್ತಿದ್ದ, ಮೈಮುರಿದು ದುಡಿಯುತ್ತಿದ್ದ. ಕಾರ್ಮಿಕ ಕೆಲಸಕ್ಕೆ ಕೇರಳದಲ್ಲಿ ಉತ್ತಮ ವೇತನ ದೊರಕುತ್ತಿರುವುದಾಗಿ ಅರಿತು ಆರು ತಿಂಗಳ ಹಿಂದೆ ಸಂಗಡಿಗರ ಜೊತೆಗೆ ಕೇರಳದ ತಿರುವನಂತಪುರಕ್ಕೆ ಬಂದಿದ್ದ. ಪುಟಾಣಿಯರನ್ನು ಬಿಟ್ಟು ಒಲ್ಲದ ಮನಸ್ಸಿನಿಂದಲೇ ಬಂದಾತನಿಗೆ ಕುಟುಂಬದ ನೆನಪು ಬಲವಾಗಿ ಕಾಡುತ್ತಿತ್ತು. ಹೀಗಿರಲೊಂದು ದಿನ ತಿರುವನಂತಪುರದಿಂದ ದಿಢೀರ್ ನಾಪತ್ತೆಯಾಗಿದ್ದ. ಸಹ ಕಾರ್ಮಿಕರು ಹುಡುಕಾಡಿಯೂ ಫಲಕಾರಿಯಾಗಿರಲಿಲ್ಲ. ಊರಿಗೆ ಸಂದೇಶ ರವಾನಿಸಿದ್ದರು. ಆದರೆ, ಆತ ಹುಟ್ಟೂರಿಗೂ ತಲುಪಿರಲಿಲ್ಲ……..

ಜೋಸೆಫ್ ರವರೊಂದಿಗೆ

ಇತ್ತ….. ಮಂಗಳೂರು ನಗರದ ಮಾರ್ನಮಿಕಟ್ಟೆಯಲ್ಲಿ ಕೊಳಕು ಬಟ್ಟೆ ಧರಿಸಿ ಯುವಕನೋರ್ವ ಅಂಗಡಿ ವರಾಂಡದಲ್ಲಿ ಕುಳಿತು ಗೊಣಗಾಡುತ್ತಿದ್ದ. ಮಂಗಳೂರಿನ ಸಮಾಜ ಸೇವಕ, ಮಾನವ ಸ್ನೇಹಿಯಾಗಿರುವ KM ಅಬ್ದುಲ್ ರಹ್ಮಾನ್ (ಮುನ್ನಾ ಕಮ್ಮರಡಿ) ಅವರ ಕಣ್ಣಿಗೆ ಈ ದೀನ ಯುವಕ ಬೀಳುತ್ತಾನೆ. ಕೂಡಲೇ ಅವರು ತನ್ನ ಸ್ನೇಹಿತ ಶೌಕತ್ ರವನ್ನು ಕರೆ ಮಾಡಿ ಕರೆದರು. ಇಬ್ಬರೂ ಆ ವಿಕ್ರಂ ನನ್ನು ನೋಡಿದರು. ಏನೇನೋ ಮಾತನಾಡುತ್ತಿದ್ದ. ಕರೆಂಟ್ ಕಂಬ ಹಿಡಿದು ಹುಚ್ಚರಂತೆ ವರ್ತಿಸುತ್ತಿದ್ದ. ಮಾನಸಿಕ ಸ್ಥಿಮಿತ ಕಳಕೊಂಡು ಹುಚ್ಚರಂತೆ ಬಟ್ಟೆಗಳೆಲ್ಲಾ ಹರಿದು ಆತ್ಮಹತ್ಯೆ ಮಾಡುವಂತಿದ್ದ. ಅಕ್ಕ ಪಕ್ಕದವರು ನೋಡಿ ಮುಂದೆ ಸಾಗುತ್ತಿದ್ದಾರೆ ವಿನಃ ಯಾರೂ ಹತ್ತಿರ ಬರುತ್ತಿರಲಿಲ್ಲ. ಕೂಡಲೇ ಮುನ್ನ ಕಮ್ಮರಡಿ ತಡ ಮಾಡಲಿಲ್ಲ. ಸ್ನೇಹಾಲಯಕ್ಕೆ ಕರೆ ಮಾಡಿದ ಅವರು ಯುವಕನ ದೈನ್ಯ ಬಗ್ಗೆ ಬ್ರದರ್ ಜೋಸೆಫ್ ಕ್ರಾಸ್ತಾ ಅವರಿಗೆ ಮಾಹಿತಿಯಿತ್ತು ಸಂರಕ್ಷಣೆಯೊದಗಿಲು ಮನವಿ ಮಾಡುತ್ತಾರೆ.

Munna kammaradi ರವರೊಂದಿಗೆ

ಇದೇ ಕಳೆದ ಜೂನ್ 25 ರಂದು ಸ್ನೇಹಾಲಯ ರೂವಾರಿ ಜೋಸೆಫ್ ಕ್ರಾಸ್ತಾರು ಅತ್ತ ತೆರಳುತ್ತಾರೆ. ಆತನ ಸ್ಥಿತಿಯಿಂದ ಮರುಕಗೊಂಡು ತಕ್ಷಣವೇ ಕರೆ ತರುತ್ತಾರೆ. ಆತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಿ ಉತ್ತಮ ಚಿಕಿತ್ಸೆಗೆ ಕೊಡಿಸುತ್ತಾರೆ. ಬಳಿಕ ಸ್ನೇಹ ಮನೆಯಲ್ಲಿ ಸೂಕ್ತ ಉಪಚಾರ, ಆಪ್ತ ಸಮಾಲೋಚನೆ ನೀಡಲಾಯಿತು. ದಿನಗಳ ಹಿಂದೆ ಮನೋಸ್ಥಿತಿ ಮರಳಿ ಗಳಿಸಿದಾತ ನಡೆದದ್ದೆಲ್ಲವನ್ನೂ ಸ್ಮರಿಸಿದ್ದ. ಹಾಗೆ, ಸ್ನೇಹಾಲಯವು ಹುಟ್ಟೂರಿಗೆ ಮಾಹಿತಿ ನೀಡಿದೆ. ಕಳೆದ ದಿನ ಆತನ ಭಾವ ಸಹಿತ ಸಂಬಂಧಿಕರು ತಲುಪಿ ಬದುಕಿಸಿದ ಸ್ನೇಹಾಲಯಕ್ಕೆ ಸಹಸ್ರ ಕೃತಜ್ಞತೆ ಸಲ್ಲಿಸಿ ವಿಕ್ರಂ ಮಂಡಾಲನನ್ನು ಊರಿಗೆ ಕರೆದುಕೊಂಡು ಹೋಗಿದ್ದಾರೆ. ಹಾಗೆ, ಸ್ನೇಹಮನೆಯ ಪುನಶ್ಚೇತನ ಚಟುವಟಿಕೆಯಲ್ಲಿ ಇದು ಮತ್ತೊಂದು ಗರಿಯಾಯಿತು.

ಮನೆಗೆ ಹೋಗಲು ರೆಡಿಯಾದ ವಿಕ್ರಂ

ಧರ್ಮ ಜಾತಿ ಎಂದು ಪರಸ್ಪರ ದ್ವೇಷ ಸಾಧಿಸುವ ಈ ಕಾಲದಲ್ಲಿ ನಾವು ಸಂಕಷ್ಟದಲ್ಲಿದ್ದಾಗ ನಮಗೆ ನೆರವಾಗುವುದು ಮಾನವೀಯತೆ ಮಾತ್ರ. ವಿಕ್ರಂ ಎನ್ನುವ ಹಿಂದೂ ಯುವಕ. ಮುನ್ನ ಕಮ್ಮರಡಿ ಎಂಬ ಮುಸ್ಲಿಂ ಯುವಕನಿಗೆ ಕಾಣುತ್ತಾನೆ. ಜೋಸೆಫ್ ಎನ್ನುವ ಕ್ರೈಸ್ತ ಸಮಾಜ ಸೇವಕ ಚಿಕಿತ್ಸೆ ಕೊಡಿಸುತ್ತಾರೆ. ಧರ್ಮಗಳು ಇರುವುದು ಮನುಷ್ಯನನ್ನು ಬದುಕಿಸುದಕ್ಕಾಗಿಯೇ ಹೊರತು ದ್ವೇಷ ಸಾಧಿಸಲು ಅಲ್ಲ. ಧರ್ಮ ರಕ್ಷಣೆಯಾಗುವುದು ಇಂತಹ ಸಮಾಜ ಮುಖಿ ಕೆಲಸ ಗಳಿಂದಲೇ ಎನ್ನುವುದನ್ನು ನಾವು ತಿಳಿದಿರಬೇಕು.

 

LEAVE A REPLY

Please enter your comment!
Please enter your name here