ಕಾಲೇಜು ಕ್ಯಾಂಪಸ್‌ನ ಹೊರಗೆ ಸೊಪ್ಪು… ಸೊಪ್ಪು.. ಎಂದು ಕೂಗುತ್ತಾ ತಲೆಯಲ್ಲಿ ಬುಟ್ಟಿ ಹೊತ್ತು ನಡೆದಾಡಿಕೊಂಡು ಹೋಗುತ್ತಿದ್ದ ವಯಸ್ಸಾದ ತಾಯಿಯ ಕೂಗು ಕೇಳಿ ವಿದ್ಯಾರ್ಥಿಯ ಸ್ನೇಹಿತರು ಹೀಗೆ ಹೇಳಿದರು. “ನೋಡೋ ನಿನ್ನ ತಾಯಿ ಸೊಪ್ಪುಗಳನ್ನು ತಗೊಂಡು ಬಂದಿದ್ದಾರೆ, ನಮ್ಗೂ ಬೇಕು ಎರಡು ಕಟ್ಟು” ಎಂದು ಹೇಳಿ ವ್ಯಂಗ್ಯವಾಗಿ ನಕ್ಕರು.
ವಿದ್ಯಾರ್ಥಿಗೆ ಅದನ್ನು ಕೇಳಿ ಅವಮಾನದ ಜೊತೆಗೆ ಕೋಪ ನೆತ್ತಿಗೇರಿತು. ಕಾಲೇಜು ಬಿಟ್ಟಂತೆ ನೇರವಾಗಿ ಮನೆಗೆ ಬಂದು ಬ್ಯಾಗ್ ಬಿಸಾಕಿ ಅಮ್ಮನ ಎದುರಲ್ಲಿ ನಿಂತನು. ಅಮ್ಮ ಮಗನನ್ನು ಕರೆದು “ಯಾಕೋ ಮಗ ಆತುರದಿಂದ ಓಡೋಡಿ ಬಂದೆ? ಬಾ ಚಹಾ ಕುಡಿ” ಎಂದಾಗ ಮಗ ಕೋಪದಿಂದ  “ಅಮ್ಮ ನಂಗೆ ಚಹಾನು ಬೇಡ ಏನು ಬೇಡ.‌

ನಾಳೆಯಿಂದ ನಮ್ಮ ಕಾಲೇಜು ಹತ್ತಿರ ಬಂದು ಸೊಪ್ಪು ಸೊಪ್ಪು ಅಂತ ಕೂಗಿ ನನ್ನ ಮಾನ ಮರ್ಯಾದೆ ತೆಗಿಬೇಡ” ಎಂದಾಗ ಅಮ್ಮ ಪ್ರೀತಿಯಿಂದ “ಸರಿ ಮಗ.. ಬರಲ್ಲ ಬಿಡು! ನಿಂಗೆ ಅವಮಾನ ಆಗುವಂಥ ಕೆಲಸ ನಾನು ಮಾಡಲ್ಲ. ನಂಗೆ ಇರೋದು ನೀನೊಬ್ಬನೆ ಮಗ” ಎಂದು ಮಗನಿಗೆ ಚಹಾ ಕೊಟ್ಟಳು.

ಸಾಂದರ್ಭಿಕ ಚಿತ್ರ

ಮರುದಿನ ಕಾಲೇಜು ಕ್ಯಾಂಪಸ್ ಹೊರಗೆ ಎಂದಿನಂತೆ ಅಮ್ಮನ ಕೂಗು ಇಲ್ಲ. ಸ್ನೇಹಿತರ ಕಿರಿಕಿರಿ ಇಲ್ಲ.‌ ವಿದ್ಯಾರ್ಥಿ ನೆಮ್ಮದಿಯಿಂದ ಇದ್ದ. ಎಂದಿನಂತೆ ಕಾಲೇಜು ಬಿಟ್ಟು ಮನೆಗೆ ಹೋದ ಅಮ್ಮ ಮನೆಯಲ್ಲಿ ಇರಲಿಲ್ಲ. ಅಕ್ಕಪಕ್ಕದ ಮನೆಯವರಲ್ಲಿ ವಿಚಾರಿಸಿದಾಗ ಅಮ್ಮನ ಬಗ್ಗೆ ತಿಳಿದಿಲ್ಲ ಎಂದಾಗ ವಿದ್ಯಾರ್ಥಿ ಆತಂಕಕ್ಕೆ ಒಳಗಾಗಿ ಅಮ್ಮ ಹೋಗುವ ದಾರಿಯಲ್ಲಿ ಹುಡುಕಾಡುತ್ತಾ ಹೋದ.

ಸುಮಾರು‌ ಅರ್ಧ ತಾಸು ನಡೆದಾಡಿದಾಗ ಕಾಲೇಜು ಹತ್ತಿರ ಇರುವ ಒಳ ರಸ್ತೆಯಲ್ಲಿ ಒಬ್ಬಾಕೆ ಹೆಂಗಸು ವಿದ್ಯಾರ್ಥಿಯ ತಾಯಿಯನ್ನು ತರಾಟೆಗೆ ತೆಗೆಯುತ್ತಿದ್ದರು “ನೀನು ದಿನಾಲು ಮಧ್ಯಾಹ್ನ ಸೊಪ್ಪು ತಗೊಂಡು ಬರುತ್ತಿದ್ದೆ. ಈಗ ಸಂಜೆ ಹೊತ್ತಾಯ್ತು ಯಾವನಿಗೆ ಬೇಕು ಒಣಗಿರೋ ಸೊಪ್ಪು? ಊರೆಲ್ಲ ಸುತ್ತಾಡಿ ಯಾರು ತಗೊಂಡಿಲ್ಲ ಅಂತ ನಮ್ಗೆ ಕೊಡ್ತಿಯಾ” ಎಂದಾಗ ದೂರದಿಂದ ‌ನಿಂತು ನೋಡುತ್ತಿದ್ದ ವಿದ್ಯಾರ್ಥಿ ಕಣ್ಣಲ್ಲಿ ಕಂಬನಿ ಜಾರಿತು.

ವಿದ್ಯಾರ್ಥಿ ತಾಯಿ ಆ ಮಹಿಳೆ ಜೊತೆ ಹೇಳುವ ಮಾತು ಬಹಳ ಸ್ಪಷ್ಟವಾಗಿ ಅವನ ಕಿವಿಗೆ ಕೇಳಿಸುತ್ತಿತ್ತು “ಅಮ್ಮವ್ರೇ, ನೀವು ಇವತ್ತು ಸೊಪ್ಪು ತಗೊಂಡಿಲ್ಲ ಅಂದ್ರೆ ನನ್ನ ಮಗ ಹಸಿವಿನಿಂದ ಇರಬೇಕು. ನಾನು ಬೆಳಗ್ಗೆ, ಮಧ್ಯಾಹ್ನ ಬಂದಿದ್ದೆ ನಿಮ್ಮ ಗ್ಯಾಟ್ ಬಡಿದೆ ನಿಮಗೆ ಕೇಳಿಸಿಲ್ಲ. ಯಾಕೋ ನನ್ನ ಗಂಟಲು ನೋವಾಗುತ್ತಿತ್ತು ಅದ್ಕೆ ಜೋರಾಗಿ ಕೂಗಿಲ್ಲ. ಅಕ್ಕಪಕ್ಕದ ಮನೆಯವರು ಕೂಡ ಇವತ್ತು ಸೊಪ್ಪು ತಗೊಂಡಿಲ್ಲ ನಾನು ಕೂಗಿಲ್ಲ ಅಂತ”

ಸಾಂದರ್ಭಿಕ ಚಿತ್ರ

ದಯವಿಟ್ಟು ಒಂದಾದರೂ ತಗೊಳಿ ಅಮ್ಮವ್ರೆ.. ಮಗ ಮನೆಯಲ್ಲಿ ಕಾಯುತ್ತಿರುತ್ತಾನೆ, ಅವನ ಅಪ್ಪ ತೀರಿ ಹೋದ ದಿನದಿಂದ ಎಲ್ಲ ನಾನೇ ಆಗಿದ್ದೇನೆ. ಅವನಿಗೆ ನನ್ನ ಬಿಟ್ಟು ಬೇರೆ ಯಾರು ಇಲ್ಲ ಎಂದಾಗ ಮಗ ಓಡೋಡಿ ಬಂದು ತಾಯಿಯ ಕಾಲಿಗೆ ಬಿದ್ದು “ಅಮ್ಮ ನನ್ನ ಕ್ಷಮಿಸಮ್ಮ ದಯವಿಟ್ಟು ಕ್ಷಮಿಸಮ್ಮ! ನಿನ್ನ ಪ್ರತಿಯೊಂದು ಕೂಗಿನಲ್ಲು ನನ್ನ ಹಸಿವು ನೀಗಿಸುವ ಶಕ್ತಿ ಇತ್ತೆಂದು ನಂಗೆ ಗೊತ್ತಿರಲಿಲ್ಲ” ಎಂದಾಗ ತಾಯಿ ಮಗನನ್ನು ತಬ್ಬಿ “ಛೇ.. ಇಲ್ಲ ಮಗ ಅವರು ಏನು ಹೇಳಿಲ್ಲ‌ ನಾಳೆಯಿಂದ ಸೊಪ್ಪು ಹೆಚ್ಚು ತಗೊಂಡು ಬರಲು ಹೇಳಿದ್ದಾರೆ” ಎಂದು ಮಗನಿಗೆ ಅಡಗಿಸುವ ಪ್ರಯತ್ನ ಪಟ್ಟಳು.

ಸ್ನೇಹಿತರೇ, ಓದಿದ್ರಲ್ಲ ತಾಯಿಯ ಕರುಣೆ, ತ್ಯಾಗದ ಬಗ್ಗೆ? ಇದನ್ನು ಪ್ರತಿಯೊಬ್ಬ ಮಕ್ಕಳಿಗೂ ಅರ್ಪಿಸುತ್ತಿದ್ದೇನೆ.. ಇಂದು ತಾಯಿಯ ಮಮತೆಯನ್ನು ಅರಿಯದೆ ಧಿಕ್ಕರಿಸಿ ನಡೆಯುವ ಅದೆಷ್ಟೋ ಮಕ್ಕಳನ್ನು ಈ ಸಮಾಜದಲ್ಲಿ ನಮಗೆ ಕಾಣಲು ಸಾಧ್ಯವಿದೆ. ನಮಗೆ ಜನ್ಮ ನೀಡಿದ ದಿನದಿಂದ ನಮ್ಮನ್ನು ದೊಡ್ಡವರನ್ನಾಗಿ ಮಾಡಲು ತಾಯಂದಿರು ತಿನ್ನುವ ನೋವು ಅಷ್ಟಿಷ್ಟಲ್ಲ.‌ ಆದರೆ ಅದನ್ನು ಅರ್ಥಮಾಡಿಕೊಳ್ಳದ ಕೆಲ ಮಕ್ಕಳು ಇಂತಹ ಸಣ್ಣದಾದ ಕತೆಗಳಿಂದಾದರು ಕಲಿಯಬೇಕು.

-ಸಮ್ಮಿ

LEAVE A REPLY

Please enter your comment!
Please enter your name here