ಚಿಕ್ಕಮಗಳೂರು: ಜಿಲ್ಲೆಯಲ್ಲಿ ಜಾರಿಯಲ್ಲಿರುವ ಕೇಂದ್ರ ಅಭಿವೃದ್ಧಿ ಯೋಜನೆಗಳ ಪ್ರಗತಿ ಪರಿಶೀಲನೆಗೆ ಬಂದ ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕಾಂಗ್ರೆಸ್ ಕಾರ್ಯಕರ್ತರು ಈರುಳ್ಳಿ ಹಾರ ಹಾಕಲು ವಿಫಲ ಯತ್ನ ನಡೆಸಿದ ಪ್ರಸಂಗ ನಡೆದಿದೆ. ಮಂಗಳವಾರ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಲು ಬಂದ ಸಂಸದೆ ಈ ಕಹಿ ಘಟನೆಯನ್ನು ಎದುರಿಸಬೇಕಾಯಿತು. ಸಂಸದೆ ಶೋಭಾ ಕರಂದ್ಲಾಜೆ ಸಭೆಗೆ ಬರುವುದನ್ನು ಅರಿತಿದ್ದ ಕಾಂಗ್ರೆಸ್ ಸದಸ್ಯರು ಜಿಲ್ಲಾ ಪಂಚಾಯಿತಿ ಮುಂದೆ ಅವರು ಬರುವ ವೇಳೆಗೆ ಸರಿಯಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದರು. ಸಂಸದರ ಕಾರು ಬಂದಾಕ್ಷಣ ಅವರಿಗೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಮನವಿ ನೀಡಲು ಮುಂದಾದರೆ, ಕೆಲವರು ಈರುಳ್ಳಿ ಹಾರವನ್ನು ನೀಡಲು ಹೋದಾಗ ಎರಡನ್ನೂ ತಿರಸ್ಕರಿಸಿದ ಶೋಭಾ ಸೀದಾ ಒಳಗೆ ಹೋದರು.

ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ವನಮಾಲ ದೇವರಾಜ್ ಅವರ ನೇತೃತ್ವದಲ್ಲಿ ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಈರುಳ್ಳಿಯ ಮಾಲೆಯನ್ನು ಧರಿಸಿ ಈರುಳ್ಳಿ, ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಇವುಗಳ ದರ ಏರಿಕೆ ಆಗಿರುವುದನ್ನು ವಿರೋಧಿಸಿದರಲ್ಲದೆ ಗ್ಯಾಸ್ ಸಿಲಿಂಡರ್ ಇಟ್ಟು, ಬಾಣಲೆಯಲ್ಲಿ ಎಣ್ಣೆ ಕುದಿಸಿ ಈರುಳ್ಳಿ ಪಕೋಡಾಗಳನ್ನು ತಯಾರಿಸುವ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದರು.

LEAVE A REPLY

Please enter your comment!
Please enter your name here