ನನ್ನ ಮಗ ತುಂಬಾ ಪಾಪ, ಅಮ್ಮ ನಾನು ಕೆಲಸಕ್ಕೆ ವಿದೇಶಕ್ಕೆ ಹೋಗುತ್ತೇನೆ ಎಂದಿದ್ದ, ನಾನೇ ಬೇಡ ಎಂದು ತಪ್ಪು ಮಾಡಿದೆ. ಹೋಗಿದ್ದರೆ ನನ್ನ ಮಗ ಬದುಕಿರುತ್ತಿದ್ದ. ಪ್ರತಿ ದಿನ ಕೆಲಸ ಮುಗಿಸಿ ಸಂಜೆ 7 ಗಂಟೆಯೊಳಗೆ ಮನೆಗೆ ಬರುತ್ತಿದ್ದ. ಮನೆಗೆ ಆಧಾರವಾಗಿದ್ದ. ಅವನೇ ಸಾಲ ಮಾಡಿ ಮನೆ ಕಟ್ಟಿದ್ದ. ಇನ್ನು ₹2 ಲಕ್ಷ ಸಾಲ ಬಾಕಿ ಇದೆ. ಅದನ್ನು ತೀರಿಸುತ್ತೇನೆ. ನಿಮ್ಮ ಚಿನ್ನಾಭರಣಗಳನ್ನು ಬಿಡಿಸಿಕೊಂಡು ಬರುತ್ತೇನೆ ಎಂದಿದ್ದ. ನಾನು ನೀನೆ ನನಗೆ ಚಿನ್ನ ಎಂದಿದ್ದೆ. ವಾರಕ್ಕೊಮ್ಮೆ ಭಜನೆಗೆ ಹೋಗುತ್ತಿದ್ದ. ಅವನಿಗೆ ಮದುವೆ ಮಾಡಲು ಮುಂದಾಗಿದ್ದೆ. ನನ್ನ ಮಗನನ್ನು ಕೊಂದವರಿಗೆ, ನಾನು ನಂಬಿದ ದೇವರೇ ಶಿಕ್ಷೆ ನೀಡಲಿ. ಅದು ಹೇಗೆ ಎಂದು ನಾನು ಹೇಳುವುದಿಲ್ಲ ಎಂದು ಇತ್ತೀಚೆಗೆ ಮಂಗಳೂರಿನ ಕಾಟಿಪಳ್ಳದಲ್ಲಿ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಾಕ್ ತಾಯಿಯ ಆಕ್ರೋಶ ಮತ್ತು ಅಳಲು ಮುಗಿಲು ಮುಟ್ಟಿದೆ.

ಹತ್ತಿರದ ಮಜೀದ್ ಎನ್ನುವವರ ಅಂಗಡಿಯಲ್ಲಿ ₹11ಸಾವಿರ ಸಂಬಳಕ್ಕೆ ಕೆಲಸಕ್ಕೆ ಹೋಗುತ್ತಿದ್ದ. ಪ್ರತಿ ವಾರ ಭಜನೆಗೆ ಹೋಗುತ್ತಿದ್ದ ದೀಪಕ್‌ ರಾವ್‌ಗೆ ಹಿಂದೂ ಸಂಘಟನೆಗಳ ಪರಿಚಯವಿತ್ತು. ಹಾಗಾಗಿ ಮೊದಲು ಬಜರಂಗದಳದಲ್ಲಿ ಸಕ್ರಿಯರಾಗಿದ್ದರು. ಇದೀಗ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ.

ಸಣ್ಣ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ದೀಪಕ್‌ ರಾವ್‌ ಅವರೇ ಮನೆಗೆ ಆಧಾರವಾಗಿದ್ದರು. ತಮ್ಮನಿಗೆ ಮಾತು ಬರುವುದಿಲ್ಲ. ಕುಟುಂಬದ ನಿರ್ವಹಣೆಗಾಗಿ ಸಣ್ಣ ಕೆಲಸ. ತಿಂಗಳಿಗೆ ₹11 ಸಾವಿರ ಸಂಬಳ ಪಡೆಯುತ್ತಿದ್ದ ದೀಪಕ್‌, ₹6 ಸಾವಿರ ಮನೆಯ ಸಾಲದ ಕಂತಿಗೆ ಕಟ್ಟುತ್ತಿದ್ದರೆ, ₹1,500 ಬೈಕ್‌ ಸಾಲದ ಕಂತಿಗೆ ಹೋಗುತ್ತಿತ್ತು. ಮನೆಯ ಖರ್ಚಿಗಾಗಿ ₹2,500 ತಾಯಿಗೆ ನೀಡುತ್ತಿದ್ದರು ಎಂದು ವರದಿಯಾಗಿದೆ.

Leave a Reply