ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರನ್ನು “ನೀಚ ಮನುಷ್ಯ” ಎಂದು ಹೀಯಾಳಿಸಿದ್ದ ತಮ್ಮ ಹೇಳಿಕೆಯನ್ನು ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ಧುರೀಣ ಮಣಿಶಂಕರ್ ಅಯ್ಯರ್ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ತಮ್ಮ ಭವಿಷ್ಯ ನಿಜವಾಯಿತಲ್ಲವೇ ಎಂದು ಅವರು ಇದೇ ವೇಳೆ ಅಣಕವಾಡಿದ್ದಾರೆ. ಪತ್ರಿಕೆಯೊಂದಕ್ಕೆ ಬರೆದಿರುವ ಲೇಖನವೊಂದರಲ್ಲಿ ಅವರು “1987 ಡಿಸೆಂಬರ್ 7ರಂದು ಏನು ಹೇಳಿದ್ದೆನೆಂಬುದು ನೆನಪಿದೆಯಲ್ಲವೇ? ನನ್ನ ಭವಿಷ್ಯ ನಿಜವಾಗಲಿಲ್ಲವೇ?” ಎಂದು ವಿಶ್ಲೇಷಿಸಿದ್ದಾರೆ. “ಮೇ 23ರಂದು ಜನತೆ ಹೇಗಿದ್ದರೂ ಅವರನ್ನು ಅಧಿಕಾರದಿಂದ ಕಿತ್ತೊಗೆಯುತ್ತಾರೆ, ನಾನು ಕಂಡ ಅತ್ಯಂತ ಹೊಲಸು ಬಾಯಿಯ ಪ್ರಧಾನಿ ತೆರೆಮರೆಗೆ ಸರಿಯುತ್ತಾರೆ” ಎಂದು ಅವರು ಹೀಯಾಳಿಸಿದ್ದಾರೆ.

ಈ ಹಿಂದೆ ಒಮ್ಮೆ ತಮ್ಮ ನಿಂದನಾತ್ಮಕ ಮಾತುಗಳಿಗಾಗಿ ಕ್ಷಮಾಪಣೆ ಕೇಳಿ ಕಾಂಗ್ರೆಸ್ ಪಕ್ಷದಿಂದ ಅಮಾನತು ಗೊಳಗಾಗಿದ್ದ ಮಣಿಶಂಕರ್ ಅಯ್ಯರ್ ಇದೀಗ ಮತ್ತೆ ಕಟು ಮಾತುಗಳ ಟೀಕಾಸ್ತ್ರ ಪ್ರಯೋಗಿಸಿದ್ದಾರೆ. ಅಯ್ಯರ್ನು ತೀಕ್ಷ್ಣ ನುಡಿಗಳಿಗೆ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಪಕ್ಷದ ವಕ್ತಾರ ಜಿವಿಎಲ್ ನರಸಿಂಹರಾವ್ ಅಯ್ಯರ್‌ರವರನ್ನು “ನಿಂದಕರ ನೇತಾರ” ಎಂದು ಜರೆದಿದ್ದಾರೆ. ಇದಕ್ಕೆ ತೀಕ್ಷ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ಮೋದಿ ಅಯ್ಯರ್‌ ಬೈಗುಳಗಳನ್ನು ಆಶೀರ್ವಾದವಾಗಿ ಸ್ವೀಕರಿಸುವೆ ಎಂದು ತಿರುಗೇಟು ನೀಡಿದ್ದಾರೆ.

Leave a Reply