ಮಂಗಳೂರು: ನಗರದ ಎಸ್‌ಡಿಎಂ ಕಾನೂನು ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ತರಗತಿಯಲ್ಲಿದ್ದ ಹಿಂದೂ ಯುವತಿಯೊಬ್ಬಳು ಏಳು ತಿಂಗಳ ಹಿಂದೆ ಮುಂಬೈನ ಮುಸ್ಲಿಂ ಯುವಕನನ್ನು ವಿವಾಹವಾಗಿದ್ದು, ಪತಿ ದಾಖಲಿಸಿರುವ ಹೇಬಿಯಸ್‌ ಕಾರ್ಪಸ್‌ ಅರ್ಜಿ ಮತ್ತು ಹಿಂದುತ್ವ ಪರ ಸಂಘಟನೆಗಳಿಂದ ‘ಲವ್‌ ಜಿಹಾದ್‌’ ಆರೋಪದೊಂದಿಗೆ ಈ ಪ್ರೇಮ ವಿವಾಹ ಈಗ ವಿವಾದಕ್ಕೆ ತಿರುಗಿದೆ.

ಯುವತಿಯನ್ನು ಪತ್ತೆ ಮಾಡಬೇಕೆಂಬ ಮುಂಬೈ ಹೈಕೋರ್ಟ್‌ ಆದೇಶದಂತೆ ಅಲ್ಲಿನ ಪೊಲೀಸರು ಇತ್ತೀಚೆಗೆ ಮಂಗಳೂರಿನಲ್ಲಿ ಶೋಧ ನಡೆಸಿ, ಕೇರಳಕ್ಕೆ ತೆರಳಿದ್ದಾರೆ. ವಿಶ್ವ ಹಿಂದೂ ಪರಿಷತ್‌ ಮತ್ತು ಬಜರಂಗದಳ ಮುಖಂಡರು ರೇಶ್ಮಾ ಮದುವೆ ‘ಲವ್‌ ಜಿಹಾದ್‌’ನ ಭಾಗ ಎಂದು ಆರೋಪಿಸಿದ್ದು, ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸುವಂತೆ ಒತ್ತಾಯಿಸಿ ಡಿಸೆಂಬರ್‌ 29ರಂದು ಮನವಿ ಸಲ್ಲಿಸಿದ್ದಾರೆ.

ದುಬೈನಲ್ಲಿ ಉದ್ಯೋಗದಲ್ಲಿರುವ ಕಾಸರಗೋಡು ನಿವಾಸಿ ಅಶೋಕ್‌ ಎಂಬುವವರ ಮಗಳು ರೇಶ್ಮಾ ಮತ್ತು ಮುಂಬೈನ ಮನ್‌ ಖುರ್ದ್‌ ನಿವಾಸಿ ಇಕ್ಬಾಲ್‌ ಚೌಧರಿಗೆ ಫೇಸ್‌ಬುಕ್‌ನಲ್ಲಿ ಪರಿಚಯವಾಗಿತ್ತು. ನಂತರ ಇಬ್ಬರೂ ಪ್ರೀತಿಸುತ್ತಿದ್ದರು. ಏಳು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಯುವತಿ, ಮುಂಬೈಗೆ ಹೋಗಿ ಇಕ್ಬಾಲ್‌ನನ್ನು ವರಿಸಿದ್ದಳು. ಈ ಸಂಬಂಧ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ, ವಿವಾಹಕ್ಕೆ ಕಾನೂನಿನ ಮಾನ್ಯತೆಯನ್ನೂ ದೊರಕಿಸಿಕೊಂಡಿದ್ದರು.

ಮಗಳು ನಾಪತ್ತೆಯಾಗಿರುವುದು ತಿಳಿಯುತ್ತಿದ್ದಂತೆಯೇ ಮಂಗಳೂರು ಪೂರ್ವ (ಕದ್ರಿ) ಪೊಲೀಸ್‌ ಠಾಣೆಗೆ ಪೋಷಕರು ದೂರು ನೀಡಿದ್ದರು. ಕೆಲವು ದಿನಗಳ ಬಳಿಕ ಮುಂಬೈನ ಇಕ್ಬಾಲ್‌ ಮನೆಯಲ್ಲಿ ರೇಶ್ಮಾಳನ್ನು ಪೊಲೀಸರು ಪತ್ತೆ ಮಾಡಿದ್ದರು. ಆಗ ಪೋಷಕರ ಜೊತೆ ಮಾತನಾಡಲು ನಿರಾಕರಿಸಿದ್ದ ಯುವತಿ, ಸ್ವಇಚ್ಛೆಯಿಂದ ಮದುವೆ ಆಗಿರುವುದಾಗಿ ಹೇಳಿಕೆ ನೀಡಿದ್ದಳು. ನೋಟರಿ ದೃಢೀಕೃತ ಪ್ರಮಾಣಪತ್ರವನ್ನೂ ಪೊಲೀಸರಿಗೆ ಸಲ್ಲಿಸಿದ್ದಳು.

ಮಾಲ್‌ನಿಂದ ಕಿಡ್ನಾಪ್‌

ಮೂರು ಬಾರಿ ಮುಂಬೈಗೆ ತೆರಳಿದ್ದ ಪೋಷಕರು ಯುವತಿಯನ್ನು ಮನವೊಲಿಸಿ ಕರೆತರಲು ಪ್ರಯತ್ನಿಸಿ, ವಿಫಲವಾಗಿದ್ದರು. ಐದು ತಿಂಗಳಿನಿಂದ ಈಚೆಗೆ ಯಾವುದೇ ಬೆಳವಣಿಗೆ ಆಗಿರಲಿಲ್ಲ. ಇತ್ತೀಚೆಗೆ ಮುಂಬೈನ ಮಾಲ್‌ ಒಂದರಲ್ಲಿದ್ದ ಯುವತಿಯನ್ನು ಕುಟುಂಬದ ಸದಸ್ಯರು ಕರೆತಂದಿದ್ದಾರೆ ಎಂದು ಪತಿ ಆರೋಪಿಸಿದ್ದಾರೆ.

ಪತ್ನಿಯನ್ನು ಅಪಹರಿಸಲಾಗಿದೆ ಎಂದು ಮುಂಬೈ ಪೊಲೀಸರಿಗೆ ದೂರು ನೀಡಿದ್ದರು. ಪತ್ನಿಯನ್ನು ಪತ್ತೆ ಮಾಡಲು ಆದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಹೇಬಿಯಸ್‌ ಕಾರ್ಪಸ್‌ ಅರ್ಜಿ ಸಲ್ಲಿಸಿದ್ದರು. ಯುವತಿಯನ್ನು ಪತ್ತೆಮಾಡಿ ಹಾಜರುಪಡಿಸುವಂತೆ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ.

ವೈರಲ್‌ ಆದ ಪ್ರಮಾಣಪತ್ರ

ತಾನು ಸ್ವಇಚ್ಛೆಯಿಂದ ಮಂಗಳೂರಿಗೆ ವಾಪಸಾಗಿರುವುದಾಗಿ ರೇಶ್ಮಾ ಹೆಸರಿನಲ್ಲಿ ಸಿದ್ಧಪಡಿಸಿರುವ ನೋಟರಿ ಪ್ರಮಾಣ ಪತ್ರವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಆಕೆಯ ಭಾವಚಿತ್ರ ಅದರಲ್ಲಿದ್ದು, ಆತ್ಮಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ಹಂಪನಕಟ್ಟೆ ಶಾಖೆಯಲ್ಲಿ ಡಿಸೆಂಬರ್‌ 20ರಂದು ಖರೀದಿಸಿರುವ ₹ 20 ಮೌಲ್ಯದ ಮುದ್ರಾಂಕ ಪತ್ರದಲ್ಲಿ ಈ ಪ್ರಮಾಣಪತ್ರ ಸಿದ್ಧಪಡಿಸಲಾಗಿದೆ.

ಸೌಜನ್ಯ : ಪ್ರಜಾವಾಣಿ

Leave a Reply